ಮತದಾನ ಪವಿತ್ರ ಕರ್ತವ್ಯ: ಡಾ. ಕಲಾಂ

ಮಂಗಳೂರು: 'ಪರಮಪವಿತ್ರ ಕರ್ತವ್ಯವಾದ ಮತದಾನವನ್ನು ಖಂಡಿತವಾಗಿ ನಡೆಸುತ್ತೇನೆ. ಅತ್ಯುತ್ತಮ ಚಾರಿತ್ರ್ಯದ ಅಭ್ಯರ್ಥಿಯನ್ನು ಆರಿಸುತ್ತೇನೆ. ಈ ಮೂಲಕ ದೇಶಕ್ಕೆ ಶ್ರೆಷ್ಠ ಸರಕಾರ ದೊರೆಯಲು ಸ್ಪಂದಿಸುತ್ತೇನೆ' ಎಂಬ ಆಶಯದ ಪ್ರತಿಜ್ಞಾವಿಧಿಯನ್ನು ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ನೂತನ (ವಿದ್ಯಾರ್ಥಿಗಳು) ಮತದಾರರಿಗೆ ಬೋಧಿಸಿದರು.

ಇಲ್ಲಿನ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಅವರು ಜಿಲ್ಲಾಡಳಿತದ ವತಿಯಿಂದ ವಿದ್ಯಾರ್ಥಿಗಳ ಬೃಹತ್‌ ಸಮಾವೇಶದಲ್ಲಿ ಚುನಾವಣಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಬಾರಿ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಜಗತ್ತಿನ ಅತೀ ದೊಡ್ಡ ಪ್ರಜಾತಾಂತ್ರಿಕ ಚುನಾವಣೆಯಾಗಿರುತ್ತದೆ. ದೇಶದ ಸರ್ವಾಂಗೀಣ ಪ್ರಗತಿ, ಏಕತೆ, ನೆಮ್ಮದಿಗೆ ಇದು ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳೇ ಬಹುತೇಕ ಹೊಸ ಮತದಾರರಾಗಿದ್ದು ಅವರು ಸ್ವತಃ ಭಾಗವಹಿಸುವುದರ ಜತೆ ಇತರ ಕನಿಷ್ಠ 10 ಮಂದಿ ಮತದಾನ ನಡೆಸಲು ಪ್ರೇರಕರಾಗಬೇಕು ಎಂದು ಸೂಚಿಸಿದರು.
ಮತ ಚಲಾಯಿಸುವುದು ಪ್ರತಿಯೋರ್ವ ಭಾರತೀಯರ ಪವಿತ್ರ ಕರ್ತವ್ಯ. ಈಗ ಸುಮಾರು 5ರಿಂದ 10 ಮಂದಿ ಕಣದಲ್ಲಿರುತ್ತಾರೆ. ಆಯ್ಕೆಗೆ ಹೆಚ್ಚು ಅವಕಾಶವಿದೆ ಎಂದರು.

ಚತುರ್ವಿಧ ಸಂದೇಶ

ವಿದ್ಯಾರ್ಥಿಗಳು ಭವ್ಯ ಭವಿಷ್ಯವನ್ನು ಚತುರ್ವಿಧ ಕಾರ್ಯಗಳಿಂದ ರೂಪಿಸಿಕೊಳ್ಳಬಹುದೆಂದು ಡಾ| ಕಲಾಂ ವಿವರಿಸಿದರು:

1. ಜೀವನದಲ್ಲಿ ಶ್ರೇಷ್ಠವಾದ ಗುರಿ 2. ಜ್ಞಾನ ಗಳಿಕೆಯ ಮೂಲಕ ಗುರಿ ಸಾಧನೆ 3. ಹೃದಯವಂತಿಕೆ ಸಹಿತ ಕಠಿನ ಪರಿಶ್ರಮ 4. ಆತ್ಮವಿಶ್ವಾಸದ ವ್ಯಕ್ತಿತ್ವ.

ಸಮಸ್ಯೆಗಳನ್ನೇ ಸೋಲಿಸುವ ಪ್ರಬಲ ವ್ಯಕ್ತಿತ್ವದ ಮೂಲಕ ಯಶಸ್ಸು ಸಾಧಿಸಬಹುದೆಂದರು. 

ಕ್ರಿಯಾಶೀಲತೆ, ಆತ್ಮವಿಶ್ವಾಸ, ಸಾಧನೆಯು ಪರಿಪೂರ್ಣ ಜ್ಞಾನಕ್ಕೆ ಸಮನಾಗಿದೆ. ಗುರುಹಿರಿಯರಲ್ಲಿ ಗೌರವ ತೋರಿಸಬೇಕು.

'ನಾನು 1936ರಲ್ಲಿ ರಾಮೇಶ್ವರದಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗ ಪರಮಶಿವಂ ಎಂಬ ಶಿಕ್ಷಕರು ನಮ್ಮಲ್ಲಿ ಚೈತನ್ಯ ತುಂಬಿದರು. ಆಕಾಶದೆತ್ತರಕ್ಕೆ ಹಾರಬೇಕೆಂಬ ಚಿಂತನೆ ಅವರದ್ದಾಗಿತ್ತು. ಈ ಮೂಲಕ ನನಗೆ ಬಾಹ್ಯಾಕಾಶ ವಿಜ್ಞಾನಿಯಾಗಲು ಸಾಧ್ಯವಾಯಿತು' ಎಂದು ನೆನಪಿಸಿಕೊಂಡರು.

ವಿದ್ಯಾರ್ಥಿ ಸಂವಾದ

ಆಯ್ದ ವಿದ್ಯಾರ್ಥಿಗಳ ಪ್ರಶ್ನೆಗಳ ಬದಲು ಅವರು ನೇರವಾಗಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಾಧನೆ ಮಾಡಿದರೆ ಅವರಿಗೆ ಬ್ಯಾಂಕಿಂಗ್‌ ಸಂಸ್ಥೆಗಳು ಶೈಕ್ಷಣಿಕ ಮುಂಗಡ ಒದಗಿಸುತ್ತವೆ, ದೇಶ ಸಂಪೂರ್ಣ ಸಾಕ್ಷರವಾಗುತ್ತಿದೆ, ಮತದಾನವನ್ನು ನಡೆಸುವ ಕರ್ತವ್ಯವನ್ನು ಸಂವಿಧಾನ ಒದಗಿಸಿದ್ದು, ಕಡ್ಡಾಯ ಎಂಬ ಕಾನೂನು ಅತ್ಯಗತ್ಯ, ಜಗತ್ತಿನ ಮುಂಚೂಣಿಯ ಭಾರತ ದೇಶ ರೂಪುಗೊಳ್ಳುತ್ತದೆ ಎಂದು ವಿವಿಧ ಪ್ರಶ್ನೆಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಭಯಮುಕ್ತವಾಗಿ ಮತ ಚಲಾವಣೆ, ಹೆತ್ತವರು-ಶಿಕ್ಷಕರಿಗೂ ಮತದಾನಕ್ಕೆ ಪ್ರೇರಣೆ, ಉತ್ತಮ ಅಭ್ಯರ್ಥಿಯ ಆಯ್ಕೆ ಮುಂತಾದ ತಮ್ಮ ಹೇಳಿಕೆಗಳನ್ನು ಅವರು ವಿದ್ಯಾರ್ಥಿಗಳು ಪುನರುಚ್ಚರಿಸುವಂತೆ ಮಾಡಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸ್ವಾಗತಿಸಿದರು. ಜಿಪಂ ಸಿಇಒ ತುಳಸಿ ಮದ್ದಿನೇನಿ ವಂದಿಸಿದರು. 
ಚುನಾವಣಾ ವೀಕ್ಷಕ ಸಾವಂತ್‌, ಪೊಲೀಸ್‌ ಆಯುಕ್ತ ಹಿತೇಂದ್ರ ಉಪಸ್ಥಿತರಿದ್ದರು.

ತುಂಬಿ ತುಳುಕಿತು ಸಭಾಂಗಣ

ಡಾ| ಅಬ್ದುಲ್‌ ಕಲಾಂ ಅವರು ವಿಶೇಷ ಉಪನ್ಯಾಸವಿತ್ತ ಡಾ| ಟಿಎಂಎ ಪೈ ಸಭಾಂಗಣ ವಸ್ತುಶಃ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ತುಂಬಿ ತುಳುಕಿತು. ಸುಮಾರು 40 ನಿಮಿಷ ಕಲಾಂ ಅವರು 'ಪಾಠ' ಹೇಳಿದರು. ವಿದ್ಯಾರ್ಥಿಗಳು ಪುನರುಚ್ಚರಿಸುವಂತೆ ಮಾಡಿದರು. ಪ್ರಶ್ನೆಗಳನ್ನು ಕೇಳಿದರು. ನಡುನಡುವೆ 'ಯು ಆರ್‌ ಗುಡ್‌ ಗೈಸ್‌' ಎಂದು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳೂ ಅಷ್ಟೇ ಉತ್ಸಾಹದಿಂದ ಪ್ರತಿಕ್ರಿಯಿಸಿದರು!

ಉಳಿದಂತೆ ಅಗ್ನಿರೆಕ್ಕೆಗಳು (ವಿಂಗ್ಸ್‌ ಆಫ್‌ ಫಯರ್‌) ಎಂಬ ಕವನದ ಆಶಯದ ಉಪನ್ಯಾಸವಿತ್ತರು. ಆ ಸಾಲುಗಳನ್ನು ವಿದ್ಯಾರ್ಥಿಗಳು ಪುನರಾವರ್ತಿಸಿದರು. ಕಠಿನ ಗುರಿಯನ್ನು ಪರಿಶ್ರಮದಿಂದ ಸಾಧಿಸಬೇಕೆಂಬ ಆಶಯ ಇದರಲ್ಲಿದೆ.

ಮಂಗಳೂರು ಸಹಿತ ದಕ್ಷಿಣ ಕನ್ನಡದ ಪರಂಪರೆ ಅದ್ವಿತೀಯ ಎಂದು ಉಪನ್ಯಾಸದ ಮೊದಲ ವಾಕ್ಯವನ್ನು ಕನ್ನಡದಲ್ಲಿ ಉಚ್ಚರಿಸಲು ಅವರು ಯತ್ನಿಸಿದರು. ಇಲ್ಲಿನ ಬ್ಯಾಂಕಿಂಗ್‌, ವಾಣಿಜ್ಯ, ಶಿಕ್ಷಣ ಮುಂತಾದ ಸಾಧನೆ ಗಮನಾರ್ಹ. ನಗರ ದೇಶದ ಸ್ವತ್ಛ ನಗರಗಳಲ್ಲೊಂದು ಮಂಗಳೂರು ಎಂದು ಶ್ಲಾಘಿಸಿದಾಗ ಪ್ರಚಂಡ ಕರತಾಡನ!

ಮಂಗಳೂರಿನ ಸಹಪಾಠಿ!

ನಾನು ಮದ್ರಾಸ್‌ ತಾಂತ್ರಿಕ ಕಾಲೇಜಿನಲ್ಲಿ 1954ರಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಓದುತ್ತಿದ್ದಾಗ ನನ್ನ ಸಹಪಾಠಿಯಾಗಿದ್ದವರು ಮಂಗಳೂರಿನ ಮಹಾಬಲೇಶ್ವರ ಭಟ್‌ ಎಂಬವರು. ನಾವು ಎರಡು ಪ್ರತ್ಯೇಕ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿದ್ದೆವು.
- ಕಲಾಂ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com