3 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿ 20 ಸಾವಿರಕ್ಕೂ ಅಧಿಕ ಮುನ್ನಡೆ; ಬಾಬು ಶೆಟ್ಟಿ ವಿಶ್ವಾಸ

ಬೈಂದೂರು : ಬೈಂದೂರು ವಿಧಾನಸಭಾ ವ್ಯಾಪ್ತಿಯ ಶಿರೂರು, ಬೈಂದೂರು ಹಾಗೂ ಖಂಬದಕೋಣೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಗಳಿಸಲಿದೆ ಎಂದು ಖಂಬದಕೋಣೆ ಜಿಲ್ಲಾ ಪಂಚಾಯತ್ ಸದಸ್ಯ ಬೈಂದೂರು ಬಿಜೆಪಿ ಮುಖಂಡ ಬಾಬು ಶೆಟ್ಟಿ ತಗ್ಗರ್ಸೆ ಹೇಳಿದ್ದಾರೆ.   
      ದೇಶದೆಲ್ಲೆಡೆ ಮೋದಿ ಅಲೆ ವ್ಯಾಪಕವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದಿಂದ ಜನಬೇಸತ್ತು ಹೋಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಸರಕಾರದ ಆಡಳಿತದಿಂದ ಹಣದುಬ್ಬರ ಅಧಿಕಗೊಂಡಿದೆ. ನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದೇಶದ ಭದ್ರತೆ ಆಂತರಿಕ ವ್ಯವಸ್ಥೆ ಹದಗೆಟ್ಟಿದ್ದು ಜನ ಬದಲಾವಣೆ ಬಯಸಿದ್ದಾರೆ. ಮೋದಿಯಿಂದ ಮಾತ್ರ ಸಮರ್ಥ ಆಡಳಿತ ನಡೆಸಲು ಸಾಧ್ಯ. ಹೀಗಾಗಿ ಬಿಜೆಪಿ ಪ್ರಚಂಡ ಬಹುಮತ ಗಳಿಸಲಿದೆ. ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಕರ್ತರು ಎರಡೆರಡು ಬಾರಿ ಮತದಾರರ ಮನೆಗೆ ಭೇಟಿ ನಡೆಸಿದ್ದಾರೆ. ಕ್ಷೇತ್ರವ್ಯಾಪ್ತಿ ಬಿಜೆಪಿಗೆ ಉತ್ತಮ ಬೆಂಬಲವಿದ್ದು ಬೈಂದೂರು ಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಮುನ್ನಡೆ ದೊರೆಯಲಿದೆ ಎಂದರು.  
        ಬೈಂದೂರು ಕ್ಷೇತ್ರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಶಾಸಕ ಕೆ. ಲಕ್ಷ್ಮೀನಾರಾಯಣ ಹಾಗೂ ಸಂಸದ ಬಿ.ವೈ ರಾಘವೇಂದ್ರರ ಪ್ರಯತ್ನದಿಂದ 500ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿ ನಡೆದಿದೆ. ಕೊಡೇರಿ ಬಂದರು, ಗುಂಡೂರು ಡ್ಯಾಂ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೊಲ್ಲೂರು ಅಭಿವೃದ್ಧಿಗೆ 30ಕೋಟಿ ಅನುದಾನದ ವಿಶೇಷ ಪ್ಯಾಕೇಜ್, ರೈತರ ಸಾಲ ಮನ್ನಾ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ಸುವರ್ಣಭೂಮಿ ಯೋಜನೆ ಸೇರಿದಂತೆ ಕ್ಷೇತ್ರ ವ್ಯಾಪ್ತಿ ಪ್ರತಿ ಮನೆಯಲ್ಲಿ ಬಿಜೆಪಿ ಸರಕಾರದ ಯೋಜನೆಯ ಫಲಾನುಭವಿಗಳಿದ್ದಾರೆ. ಯುವಜನತೆ ಮೋದಿ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ರೈತಪರ ಚಿಂತನೆ, ಕರಾವಳಿ ಭಾಗದ ಅಭಿವೃದ್ಧಿಯ ಬಗೆಗೆ ಕನಸು ಹೊಂದಿರುವ ಬಿ.ಎಸ್. ಯಡಿಯೂರಪ್ಪ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ  ಎಂದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com