ಏ.27: ದೆಹಲಿ ತುಳುವರಿಂದ ‘ಬಿಸುಪರ್ಬ’

ನವದೆಹಲಿ: ರಾಷ್ಟ್ರ ರಾಜಧಾನಿಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕರು ಏಪ್ರಿಲ್ 27ರ ಭಾನುವಾರ ಚಾಣಕ್ಯಪುರಿಯಲ್ಲಿನ ನೆಹರು ಪಾರ್ಕ್‌ನಲ್ಲಿ ಕಲೆತು ವಿವಿಧ ಚಟುವಟಿಕೆಗಳನ್ನು ನಡೆಸುವುದರ ಮೂಲಕ ತುಳುವರ ಹೊಸ ವರ್ಷದ ಆರಂಭ ’ಬಿಸು ಪರ್ಬ’ವನ್ನು ಸಂಭ್ರಮಿಸಲಿದ್ದಾರೆ.
     ದೆಹಲಿಯಲ್ಲಿನ ತುಳುವರ ಒಕ್ಕೂಟವಾಗಿರುವ ’ತುಳು ಸಿರಿ’ ಆಯೋಜಿಸುತ್ತಿರುವ ಈ ’ಬಿಸು ಪರ್ಬ’ ಕಾರ್ಯಕ್ರಮದಲ್ಲಿ ವಿವಿಧ ಮನರಂಜನೆ ಆಧಾರಿತ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಟೋಟ ಚಟುವಟಿಕೆಗಳು ನಡೆಯಲಿದೆ.
    ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕರಾವಳಿ ಮೂಲದ ಖ್ಯಾತನಾಮರಾದ ಜಾನಪದ ವಿಧ್ವಾಂಸ ಪುರುಷೋತ್ತಮ ಬಿಳಿಮಲೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಸೇರಿದಂತೆ ಹಲವಾರು ಪ್ರಸಿದ್ಧ ವಕೀಲರು, ಹಿರಿಯ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಉದ್ದಿಮೆದಾರರು, ಬ್ಯಾಂಕರ್‌ಗಳು, ಇಂಜಿನಿಯರ್‌ಗಳು, ವೈದ್ಯರು, ವೃತ್ತಿಪರರು, ಹೋಟೆಲಿಗರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ತುಳುವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
    ದಿನವಿಡಿ ನಡೆಯುವ ಕಾರ್ಯಕ್ರಮದಲ್ಲಿ ಮನರಂಜನೆಯ ಜೊತೆಗೆ ತುಳುವರ ಮಾತೃಭೂಮಿ, ಸಂಸ್ಕೃತಿ, ಭಾಷೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ.
  ಸಂವಿಧಾನದ ಎಂಟನೆ ಪರಿಚ್ಚೇದದಲ್ಲಿ ತುಳು ಭಾಷೆಯನ್ನು ಸೇರ್ಪಡೆಗೊಳಿಸಬೇಕೆಂಬ ತುಳುವರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಕೇಂದ್ರದಲ್ಲಿ ಬರಲಿರುವ ಹೊಸ ಸರ್ಕಾರದ ಮೇಲೆ ಒತ್ತಡ ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.
     ಎರಡು ದಶಕಗಳಿಂದ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಳುನಾಡು ಡೆವಲಪ್‌ಮೆಂಟ್ ಫಾರಂ ಮತ್ತು ತುಳುಕೂಟವು ತುಳು ಭಾಷೆಗೆ ಸಂವಿಧಾನ ಮಾನ್ಯತೆಗಾಗಿ ಹೋರಾಟ ನಡೆಸಿದ್ದು ಇದೀಗ ‘ತುಳುಸಿರಿ’ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡು ಹೋಗುವ ಕಂಕಣ ತೊಟ್ಟಿದೆ.
     ಕಳೆದ ವರ್ಷ ಖ್ಯಾತ ವಿದ್ವಾಂಸ ಡಾ. ವಿವೇಕ್ ರೈ ನೇತೃತ್ವದಲ್ಲಿ ಇದೇ ಉದ್ದೇಶದಿಂದ ದೆಹಲಿಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಕೇಂದ್ರದಲ್ಲಿನ ಮಂತ್ರಿಗಳು ಸೇರಿದಂತೆ ಅನೇಕ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
     ಏಪ್ರಿಲ್ 27ರ ಪೂರ್ವಾಹ್ನ 11ಗಂಟೆಯಿಂದ ಸಂಜೆ 5 ಗಂಟೆವರೆಗೆ  ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರ ರಾಜಧಾನಿಯ ಸೀಮೆಯೊಳಗೆ ವಾಸಿಸುತ್ತಿರುವ ಎಲ್ಲ ತುಳುವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತುಳುಸಿರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಲೋಕ್ ರೈ ಮನವಿ ಮಾಡಿಕೊಂಡಿದ್ದಾರೆ.
      ಹೆಚ್ಚಿನ ಮಾಹಿತಿಗಾಗಿ ಅಲೋಕ್ ರೈ (9910035383), ಬಾಲಕೃಷ್ಣ  ನಾಯ್ಕ್ (9810101264), ಪ್ರಕಾಶ್ ಶೆಟ್ಟಿ ಉಳೆಪಾಡಿ (9958823255)  ಅವರನ್ನು ಸಂಪರ್ಕಿಸಬಹುದಾಗಿದೆ.

ಕಳೆದ ವರ್ಷ ನಡೆದ ಕಾರ್ಯಕ್ರಮದ ಚಿತ್ರಗಳು

Home
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com