ಮತ್ತೆ ಮಂದಗತಿಯಲ್ಲಿ ಚತುಷ್ಪಥ ಕಾಮಗಾರಿ!

ಬ್ರಹ್ಮಾವರ:  ಕಳೆದ ಒಂದು ತಿಂಗಳಿನಿಂದ ಚುರುಕು ಕಂಡಿದ್ದ ಚತುಷ್ಪಥ ಕಾಮಗಾರಿ ಈಗ ಮತ್ತೆ ಮಂದಗತಿ ಕಂಡಿದೆ. ಕಳೆದ ಒಂದು ವಾರದಿಂದ ಕೇವಲ ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿರುವುದನ್ನು ಬಿಟ್ಟರೆ ಎಲ್ಲಿಯೂ ಕಾಮಗಾರಿ ನಡೆಯುತ್ತಿಲ್ಲ.
ಮಾಬುಕಳ, ಸಾಸ್ತಾನ, ಕೋಟದವರೆಗೆ ಬಹುತೇಕ ಕಾಮಗಾರಿ ಮುಗಿದಿದ್ದರೂ, ಹಲವಾರು ಸಮಸ್ಯೆಗಳ ಕಾರಣ ಬ್ರಹ್ಮಾವರ ಬಸ್ಸು ನಿಲ್ದಾಣದ ಸಮೀಪದಿಂದ ಆಕಾಶವಾಣಿ ವೃತ್ತದವರೆಗಿನ ಕಾಮಗಾರಿ ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆದಿರಲಿಲ್ಲ. ಫ್ಲೈ ಓವರ್‌ ರಚನೆ ಅಥವಾ ಮೊದಲಿನ ರೀತಿಯಲ್ಲಿ ಸಮತಟ್ಟು ಮಾಡಿ ರಸ್ತೆ ರಚಿಸುವಂತೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅನೇಕ ಧರಣಿ, ರಾಷ್ಟ್ರೀಯ ಹೆದ್ದಾರಿ ತಡೆಯಂತಹ ಪ್ರತಿಭಟನೆಗಳನ್ನು ನಡೆಸಿ ಕೇಂದ್ರ ಸಚಿವರು ಮತ್ತು ಸಂಸದರ ಮನವೊಲಿಸಿ ಈ ಹಿಂದೆ ಇದ್ದ(ಸಮತಟ್ಟು)ರೀತಿಯಲ್ಲಿಯೇ ಹೆದ್ದಾರಿ ರಚನೆ ಮಾಡಲಾಗುವುದು ಎಂದು ಹೇಳಿಕೆ ಕೂಡಾ ನೀಡಲಾಯಿತು.
ನಂತರ ಕಳೆದ ಎರಡು ತಿಂಗಳಿನಿಂದ ಬಿರುಸಿನ ಕಾಮಗಾರಿಯೂ ನಡೆಯಿತು. ಆದರೆ ಈಗ ಇದ್ದಕ್ಕಿದಂತೆ ಕಾಮಗಾರಿಗೆ ತಡೆ ಬಿದ್ದಿದೆ.
ಆರ್ಥಿಕ ಅಡಚಣೆಯ ಕಾರಣ ಸದ್ಯ ಕಾಮಗಾರಿಯನ್ನು ನಡೆಸುತ್ತಿಲ್ಲ. ಒಂದು ವಾರದ ನಂತರ ಕಾಮಗಾರಿ ಮತ್ತೆ ಪ್ರಾರಂಭಿಸಲಾ­ಗುವುದು ಎಂದು ಹೇಳಲಾಗುತ್ತಿದೆ.
ಧೂಳುಮಯ ಬ್ರಹ್ಮಾವರ: ಕಳೆದ 10ದಿನದ ಹಿಂದೆ ಬಸ್ಸುನಿಲ್ದಾಣ, ಆಕಾಶವಾಣಿ ವೃತ್ತದ ಬಳಿ ರಸ್ತೆ ನಿರ್ಮಾಣಕ್ಕೆ ಮರಗಳನ್ನು ಕಡಿದು ಮಣ್ಣನ್ನು ಹಾಕಿ ಸಮತಟ್ಟು ಮಾಡಲಾಯಿತು. ಆದರೆ ನಂತರ ಕಾಮಗಾರಿ ನಡೆಯದ ಕಾರಣ ಈಗ ನಗರದ ಬಹುತೇಕ ಭಾಗ ಧೂಳಿನಿಂದ ಕೂಡಿದೆ. ಬಲವಾಗಿ ಬೀಸುವ ಗಾಳಿಯ ಕಾರಣ ಧೂಳು ಮೇಲಕ್ಕೆದ್ದು ಸುತ್ತಮತ್ತಲಿನ ಅಂಗಡಿಗಳನ್ನು ವ್ಯಾಪಿಸುತ್ತಿದೆ. ಇದರಿಂದ ಅಂಗಡಿ ಮಾಲಿಕರು ದಿನನಿತ್ಯ ಶಾಪ ಹಾಕುವಂತಾಗಿದೆ. 
ಸಂಚಾರ ಅವ್ಯವಸ್ಥೆ: ಇನ್ನೊಂದೆಡೆ ಬಸ್ಸುನಿಲ್ದಾಣದ ಬಳಿ ಕಳೆದ 10ದಿನದಿಂದ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ದಿನನಿತ್ಯ ವಾಹನ ಸವಾರರು ಪರದಾಡುವಂತಾಗಿದೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಚಾಲಕರು ಸ್ವಲ್ಪ ತಮ್ಮ ದೃಷ್ಟಿಯನ್ನು ಬೇರೆ ಕಡೆ ಹಾಯಿಸಿದರೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಮಸ್ಯೆ ಎದುರಾಗಿದೆ.
ನೀಗದ ಪರಿಹಾರ: ಆಕಾಶವಾಣಿ ವೃತ್ತದ ಬಳಿ ಬಾರ್ಕೂರಿಗೆ ಸಾಗುವ ರಸ್ತೆಯ ಸಮಸ್ಯೆಗೆ ಇದುವರೆಗೂ ಪರಿಹಾರ ನೀಡದೇ ಇರುವ ಕಾರಣ ಇಲ್ಲಿಯೂ ಪ್ರತಿನಿತ್ಯ ವಾಹನ ಚಾಲಕರು ಪರದಾಡುವಂತಾಗಿದೆ. ಬಾರ್ಕೂರಿನಿಂದ ಬ್ರಹ್ಮಾವರಕ್ಕೆ ಬರುವ, ಹೋಗುವ ಘನ ವಾಹನಗಳು ಇಲ್ಲಿ ಸಿಲುಕಿ ರಸ್ತೆ ಸಂಚಾರಕ್ಕೂ ತೊಡಕುಂಟಾಗುತ್ತಿದೆ. ಕಳೆದ 2ವರ್ಷದಿಂದ ಇದೇ ರೀತಿಯ ಸಮಸ್ಯೆ ಆಗುತ್ತಿದ್ದರೂ ಅಧಿಕಾರಿಗಳು ಶಾಶ್ವತ ಅಲ್ಲದಿದ್ದರೂ ತಾತ್ಕಾಲಿಕವಾಗಿಯೂ ಪರಿಹಾರ ಇದುವರೆಗೆ ನೀಡಿಲ್ಲ.
ನಗರದ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಉದ್ಭವಿಸಿದ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಇಲ್ಲಿಯ ನಾಗರಿಕರು ಆಗ್ರಹಿಸಿದ್ದಾರೆ. ಕಳೆದ 2012ರ ಮಾರ್ಚ್‌ನಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ 2014ರವರೆಗೂ ಮುಗಿಯದೇ ಇರುವುದು ಕೂಡಾ ನಾಗರಿಕಲ್ಲಿ ಆಕ್ರೋಶ ಮೂಡಿಸಿದೆ.

ಎ.ಶೇಷಗಿರಿ ಭಟ್-ಪ್ರಜಾವಾಣಿ ವಾಣಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com