ರಾಹುಲ್ ಹೇಳಿಕೆ ಬಾಲಿಶತನದ್ದು: ಪುಟ್ಟಸ್ವಾಮಿ ಟೀಕೆ

ಬೈಂದೂರು: ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ರಾಷ್ಟ್ರೀಯ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಹತಾಶರಾಗಿ ಬಿಎಸ್‌ವೈ ಭ್ರಷ್ಟಾಚಾರ, ಹಾಲಪ್ಪ ರೇಪ್ ಕೇಸ್, ಬ್ಲೂ ಫಿಲ್ಮ್ ವೀಕ್ಷಣೆ ಮತ್ತಿತರ ಬಾಲಿಶತನದ ಹೇಳಿಕೆ ನೀಡಿರುವುದು ಖಂಡನೀಯ ಎಂದು ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಟೀಕಿಸಿದ್ದಾರೆ. ಬಿಜೆಪಿ ಚುನಾವಣೆ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. 

ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರ ಮೇಲಿನ ಎಲ್ಲ ಆರೋಪಗಳಿಗೆ ಈಗಾಗಲೇ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ. ರಾಜ್ಯದಲ್ಲಿ ಗಣಿಕಾರಿಕೆಗೆ ಯಾರ ಕಾಲದಲ್ಲಿ ಅನುಮತಿ ನೀಡಲಾಗಿದೆ ಎಂದು ಮೊದಲು ಕಾಂಗ್ರೆಸ್‌ನವರು ಅರಿತುಕೊಳ್ಳಬೇಕು, ಕಾಂಗ್ರೆಸ್‌ನ ಸ್ಥಳೀಯ ನಾಯಕರು ರಾಹುಲ್ ಅವರ ಕೈಯಲ್ಲಿ ಹೇಳಿಕೆ ಕೊಡಿಸುವ ಮೊದಲು ಅದಕ್ಕೆ ಸೂಕ್ತ ದಾಖಲೆ ಒದಗಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಲ್ಪಾಸಂಖ್ಯಾತರ ತುಷ್ಟೀಕರಣ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಈಗಾಗಲೇ ಪ್ರತ್ಯೇಕ ಪ್ರಣಾಳಿಕೆ ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ದೇಶದ ಸಮಸ್ಯೆಗಳು ಹಾಗೂ ಅದರ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಚಿಂತನೆಯಿಲ್ಲ, ಅವರಿಗೆ ಅದರ ಬಗ್ಗೆ ಅರಿವು ಇಲ್ಲ ಎಂದು ಲೇವಡಿ ಮಾಡಿದರು. 

ಕಾಂಗ್ರೆಸ್‌ನವರು ದೇಶವನ್ನು ಎರಡು ಭಾಗಗಳಾಗಿ ವಿಭಜಿಸುವುದರ ಮೂಲಕ ದೇಶದ ಜನರಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ ತರಲು ಹೊರಟಿರುವುದು ದುರ್ದೈವದ ಸಂಗತಿಯಾಗಿದೆ ಎಂದ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖ್ಯವಾಹಿನಿಗೆ ಬಂದ ಮೇಲೆ ದೇಶದಲ್ಲಿ ಅಲ್ಪಾಸಂಖ್ಯಾತರ ತುಷ್ಟೀಕರಣ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. 

ಬಿಜೆಪಿ ಪ್ರಣಾಳಿಕೆಯಲ್ಲಿ ಸಂಯುಕ್ತ ಒಕ್ಕೂಟ ವ್ಯವಸ್ಥೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದ ಅವರು, ದೇಶದಲ್ಲಿ ಶಾಂತಿ, ಸೌಹಾರ್ದತೆ, ಪರಸ್ಪರ ನಂಬಿಕೆ ಬಗ್ಗೆ ಚಿಂತನೆ ನಡೆಸಿದೆ. ವಾಜಪೇಯಿ ಚತುಷ್ಪಥ ರಸ್ತೆ ಕಾಮಗಾರಿ ಕುಂಠಿತಗೊಂಡಿದ್ದು, ಅದಕ್ಕೆ ವೇಗ ನೀಡುವ ಬಗ್ಗೆ ಹಾಗೂ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಮಿಸಲಾತಿ ವಿಷಯದ ಬಗ್ಗೆ ಪ್ರಸ್ತಾಪಿಸಿದ ಅವರು, ಇಂದು ನಿರ್ದಿಷ್ಟ ವರ್ಗದವರಿಗೆ ಮಾತ್ರ ಮೀಸಲಾತಿಯಿದೆ, ಇದು ಬದಲಾಗಬೇಕು ಮೀಸಲಾತಿ ಶಾಶ್ವತವಾಗಿರಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು, ಒಂದು ನಿರ್ದಿಷ್ಟ ಅವಧಿಯ ನಂತರ ಅದನ್ನು ಬದಲಾವಣೆ ಮಾಡಬೇಕಾದ ಅಗತ್ಯತೆಯಿದೆ ಎಂದರು. 

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಸದಾಶಿವ ಪಡುವರಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com