ಮಾದರಿ ಶಾಲೆಗೆ ರಾಜಕೀಯ ಕರಿನೆರಳು

ಬೈಂದೂರು: ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಪಂಚಾಯಿತಿಗೊಂದು ಮಾದರಿ ಶಾಲೆ ಯೋಜನೆ ಬೈಂದೂರಿನಲ್ಲಿ ದಾರಿ ತಪ್ಪುವ ಆತಂಕದಲ್ಲಿದೆ, ಉದ್ದೇಶದ ಮೇಲೆ ರಾಜಕೀಯ ಕರಿನೆರಳು ಬಿದ್ದಿದೆ. 

ಬೈಂದೂರು ವಲಯದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 8ರಿಂದ 10 ಪ್ರಾಥಮಿಕ ಶಾಲೆಗಳಿವೆ. ಶಿಕ್ಷಕರ ಸಂಖ್ಯೆ, ಮೂಲ ಸೌಕರ್ಯಗಳು, ಶಿಕ್ಷಣದ ಗುಣಮಟ್ಟ ನಿರೀಕ್ಷೆಯಷ್ಟು ಇರದೇ ಇರುವುದರಿಂದ ಹೆತ್ತವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಮನ ಮಾಡುತ್ತಾರೆ. ಇದನ್ನು ತಪ್ಪಿಸಲು ಗುಣಮಟ್ಟದ ಶಿಕ್ಷಣ ನೀಡಲೋಸುಗ ಇಡೀ ಪಂಚಾಯಿತಿಗೆ ಒಂದು ಮಾದರಿ ಶಾಲೆಯನ್ನು ಆರಂಭಿಸಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಯಾವುದೇ ರೀತಿಯಲ್ಲಿ ಕಡಿಮೆ ಇರದಂತೆ ಸೌಲಭ್ಯ ಕಲ್ಪಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೂ ಮೌಲ್ಯಯುತ ಶಿಕ್ಷಣ ನೀಡುವುದಾಗಿದೆ. 

ಗ್ರಾಮದಲ್ಲಿರುವ ಒಂದು ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಪ್ರತಿ ಮಾದರಿ ಶಾಲೆಗೆ ಸುಮಾರು 60 ಲಕ್ಷ ರೂ.ವನ್ನು ಶಿಕ್ಷಣ ಇಲಾಖೆ ವ್ಯಯಿಸಲಿದ್ದು, ಇದರಲ್ಲಿ ಶೇ.50ರಷ್ಟು ಇಲಾಖೆ ಭರಿಸಿದರೆ, ಉಳಿದ ಹಣವನ್ನು ಖಾಸಗಿ ಸಹಭಾಗಿತ್ವದಲ್ಲಿ ಕ್ರೋಡೀಕರಿಸುವ ಚಿಂತನೆ ನಡೆಸಿದೆ. ಗ್ರಾಪಂ ವ್ಯಾಪ್ತಿಯ ಯಾವ ಶಾಲೆಯನ್ನು ಮಾದರಿ ಶಾಲೆ ಮಾಡಬೇಕೆಂಬ ಸಂದರ್ಭದಲ್ಲಿ ಈ ರಾಜಕೀಯದ ಕರಿನೆರಳು ಯೋಜನೆಯ ಮೇಲೆ ಬಿದ್ದಿದೆ ಎಂಬ ಆರೋಪ ನಾಗರಿಕರದ್ದು. 

ಪ್ರಭಾವಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತಾವು ಸೂಚಿಸಿದ ಶಾಲೆಯನ್ನೇ ಮಾದರಿ ಶಾಲೆಯಾಗಿ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಬೈಂದೂರಿನ 30 ಗ್ರಾಪಂಗಳಲ್ಲಿ ಮಾದರಿ ಶಾಲೆ ಆಯ್ಕೆ ಪ್ರಕ್ರಿಯೆಯಲ್ಲಿ ಈಗಾಗಲೆ ರಾಜಕೀಯ ಹಾಗೂ ಇತರೆ ಪ್ರಭಾವ ಕಂಡುಬಂದಿದ್ದು ಶಿಕ್ಷಣ ಇಲಾಖೆ ಪಾರದರ್ಶಕವಾಗಿ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಎಲ್ಲೆಡೆ ಕೇಳಿಬಂದಿದೆ. 

ಹೇರಂಜಾಲು, ಕಾಲ್ತೋಡು, ಆಜ್ರಿಹರ, ಮೊವಾಡಿ, ಹಳ್ಳಿಹೊಳೆ, ವಂಡ್ಸೆ, ಚಿತ್ತೂರು, ಕೆರಾಡಿ, ಮರವಂತೆ, ನಾವುಂದ, ಹಕ್ಲಾಡಿ, ಬಿಜೂರು, ಮೊಗೇರಿ, ಕೂಡ್ಲು, ಪಡುಕೋಣೆ, ಯಳಜಿತ, ತಲ್ಲೂರು, ಆಲೂರು, ರಾಗಿಹಕ್ಲು, ಕಿರಿಮಂಜೇಶ್ವರ, ಸೆಳ್ಕೋಡು, ಕೊಲ್ಲೂರು, ತಗ್ಗರ್ಸೆ, ಯೋಜನಾನಗರ, ಹೆಮ್ಮಾಡಿ, ಗುಜ್ಜಾಡಿ, ಹಡವಿನಕೋಣೆ, ದೊಂಬೆ, ಕೋಟೆಬಾಗಿಲು, ಮಾವಿನಕಟ್ಟೆ ಶಾಲೆ. 

*ಗ್ರಾಮದ ಕೇಂದ್ರ ಭಾಗದಲ್ಲಿ ರುವ ಶಾಲೆಗಳನ್ನು ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ದ್ದೇವೆ. ಕೆಲವು ಕಡೆ ಗೊಂದಲವಿರುವು ದರಿಂದ ಗ್ರಾಮದ 2-3 ಶಾಲೆಗಳನ್ನು ಗುರುತಿಸಿ ಪಟ್ಟಿ ರಚಿಸಿದ್ದೇವೆ. ಸರಕಾರದ ತಂಡ ಪ್ರದೇಶಕ್ಕೆ ಆಗಮಿಸಿ ಅಧ್ಯಯನ ನಡೆಸಿದ ಬಳಿಕವೇ ಯೋಜನೆ ಜಾರಿಗೆ ಬರಲಿದೆ. -ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಬೈಂದೂರು *ಮಾದರಿ ಶಾಲೆ ಯೋಜನೆ ಕುರಿತು ಗ್ರಾಪಂಗೆ ಯಾವುದೇ ಮಾಹಿತಿಯಿಲ್ಲ. ಗ್ರಾಪಂ ಗಮನಕ್ಕೆ ತಂದು ಸಾಧಕ ಬಾಧಕ ಚರ್ಚಿಸಿದ ಬಳಿಕವೇ ಯೋಜನೆ ಜಾರಿಗೊಳಿಸುವುದು ಉತ್ತಮ. -ಜನಾರ್ದನ, ಅಧ್ಯಕ್ಷ ಬೈಂದೂರು ಗ್ರಾಪಂ

ರಾಮ ಬಿಜೂರು, ವಿಜಯ ಕರ್ನಾಟಕ ಕೃಪೆ,  
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com