ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ: ಖುಸ್ರೋ ಖುರೇಸಿ

ಬೈಂದೂರು: ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಜನತಾ ಪರಿವಾರ ಸರಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಏನನ್ನೂ ನೀಡಿಲ್ಲ, ಯುಪಿಎ ಸರಕಾರ ಅಲ್ಪಾಸಂಖ್ಯಾತರ ಕಲ್ಯಾಣಕ್ಕಾಗಿ ಜಸ್ಟಿಸ್ ಸಾಚಾರ್ ಕಮಿಟಿ ರಚಿಸಿದ್ದು, ಇದು ತನ್ನ ವರದಿಯಲ್ಲಿ ಅಲ್ಪಸಂಖ್ಯಾತರಲ್ಲಿ ಬಹುಸಂಖ್ಯಾತರಾದ ಮುಸಲ್ಮಾನರ ಪರಿಸ್ಥಿತಿ ಪರಿಶಿಷ್ಠ ಜಾತಿ ಹಾಗೂ ಪಂಗಡಗಳಿಗೆ ಸಮವಾಗಿದೆ ಎಂದು ತಿಳಿಸಿದೆ. ಆದರೆ ಸರಕಾರಕ್ಕೆ ವರದಿ ನೀಡಿ 10 ವರ್ಷ ಕಳೆದರೂ ಅದನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ. ಅವರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ಕೇವಲ ನಾಮಾಕಾವಸ್ತೆ ಜಾತ್ಯತೀತದ ಮುಖವಾಡ ಧರಿಸಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಖುಸ್ರೋ ಖುರೇಸಿ ಹೇಳಿದರು. 
ಇಲ್ಲಿನ ಬಿಜೆಪಿ ಚುನಾವಣೆ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ, ಬಿಜೆಪಿ ಕೋಮುವಾದಿ ಎಂದು ಬಿಂಬಿಸಿ ಭೂತದಂತೆ ಬೆದರಿಸುವ ಮೂಲಕ ಅಲ್ಪಸಂಖ್ಯಾತರಿಂದ ಓಟ್ ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದ ಅವರು, ಈಗ ಅಲ್ಪಸಂಖ್ಯಾ ತರಿಗೆ ಉತ್ತಮ ಅವಕಾಶ ಬಂದೊದಗಿದ್ದು, ಅಲ್ಪಸಂಖ್ಯಾತರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಿಲಿಸುವ ಹಿನ್ನೆಲೆಯಲ್ಲಿ ಪೊಳ್ಳು ಜಾತ್ಯತೀತವಾದಿಗಳ ಮುಖವಾಡ ಕಳಚಿ ಬೀಳಲಿದೆ ಎಂದರು. 

ಬಿಜೆಪಿ ಅವಧಿಯಲ್ಲಿ ಅನುದಾನ ಹೆಚ್ಚಳ: ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳು ಅಲ್ಪಾಸಂಖ್ಯಾತರ ಅಭಿವೃದ್ಧಿಗಾಗಿ ತಮ್ಮ ಬಜೆಟ್‌ನಲ್ಲಿ 25 ಕೋಟಿ ಅನುದಾನ ನೀಡುತ್ತಿದ್ದವು. ಆದರೆ ಬಿಜೆಪಿ ಸರಕಾರದ ಮೊದಲ ಬಜೆಟ್‌ನಲ್ಲಿಯೇ 125 ಕೋಟಿ ರೂ. ಹಾಗೂ ಕೊನೆಯ ಬಜೆಟ್‌ನಲ್ಲಿ 700 ಕೋಟಿ ಅನುದಾನ ಒದಗಿಸಿದೆ. ಶಾದಿ ಮಹಲ್, ಮಸೀದಿ, ಚರ್ಚ್‌ಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೇ ಆ ಸಮಯದಲ್ಲಿ ರಾಜಕೀಯ ಗಿಮಿಕ್‌ನಿಂದ ಸಣ್ಣಪುಟ್ಟ ಘರ್ಷಣೆ ನಡೆದಿರುವುದು ಬಿಟ್ಟರೆ ಯಾವುದೇ ಕೋಮು ಗಲಭೆ ಸಂಭವಿಸಿದ ಉದಾಹರಣೆಯಿಲ್ಲ ಎಂದರು. 

ಕೇಂದ್ರ ಸರಕಾರ ಅನುದಾನ ನೀಡಿಲ್ಲ: ಕೇಂದ್ರ ಅಲ್ಪಸಂಖ್ಯಾತ ಸಚಿವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾವಿರಾರು ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಾರೆ, ಆದರೆ ಇದು ಸತ್ಯಕ್ಕೆ ದೂರವಾಗಿದೆ. ನಿಜವಾಗಲೂ ನೀವು ಬಿಡುಗಡೆ ಮಾಡಿದ್ದೇ ಆದರೆ, ಎಲ್ಲಿಗೆ ನೀಡಿದ್ದೀರಿ, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದೀರಿ ಎಂದು ದಾಖಲೆ ನೀಡಿ ಎಂದು ಸವಾಲು ಹಾಕಿದರು. 

ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಬಿಎಸ್‌ವೈ ಕೊಡುಗೆ ಅಪಾರವಾಗಿದ್ದು, ಅವರ ಅಧಿಕಾರ ಅವಧಿಯಲ್ಲಿ ಸುಮಾರು 5 ಸಾವಿರ ಕೋಟಿ ಅನುದಾನ ನೀಡುವುದರ ಮೂಲಕ ಶಿವಮೊಗ್ಗದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈ ಬಾರಿ ಬಹುತೇಕ ಅಲ್ಪಸಂಖ್ಯಾತರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com