ಜೆಡಿಎಸ್‌ ಪ್ರಚಾರಕ್ಕೆ ತಾರೆಯರ ಮೆರುಗು, ರೋಡ್ ಶೋ, ಪ್ರಚಾರ ಸಭೆ

ಹೆಮ್ಮಾಡಿ : ಬಂಗಾರಪ್ಪಾಜಿಯವರು ತಮ್ಮ ಜೀವಿತದ ಕೊನೆಕ್ಷಣದಲ್ಲಿ ನೀಡಿದ ಮಾತನ್ನು ಉಳಿಸಿ ಅವರ ಆತ್ಮಕ್ಕೆ ಶಾಂತಿ ನೀಡಲು ಅವಕಾಶ ಮಾಡಿಕೊಡಿ. ರಾಜ್ಯದಲ್ಲಿ ಮತ್ತೂಮ್ಮೆ ಜೆಡಿಎಸ್‌ ಪಕ್ಷದ ಅಸ್ತಿತ್ವವನ್ನು ಬಲಗೊಳಿಸಲು ಕೈಜೋಡಿಸಿ. ನಿಮ್ಮ ಮನೆಮಗಳು ಎಂದು ತಿಳಿದು ತಮಗೆ ಮತ ನೀಡಿ ಆಶೀವರ್ದಿಸಿ ಎಂದು ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರು ಹೇಳಿದರು.

ತ್ರಾಸಿಯಲ್ಲಿ ಸೋಮವಾರ ಸಂಜೆ ಜರಗಿದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮತಯಾಚನೆ ಮಾಡಿದರು. ಜೆಡಿಎಸ್‌ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮಹಿಳೆಯರ ಪರ ಧ್ವನಿಯೆತ್ತುವುದಕ್ಕಾಗಿ ಸಾಮಾಜಿಕ ನ್ಯಾಯದ ನಾಯಕ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಆರಿಸುವಂತೆ ವಿನಂತಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಶ್ರೀಮುರಳಿ, ಪ್ರಾಮಾಣಿಕ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ಗೀತಾ ಶಿವರಾಜ್‌ಕುಮಾರ್‌ ಅವರು ಸ್ಪರ್ದಿಸುತ್ತಿದ್ದು, ಈ ಬಾರಿ ಗೀತಾ ಅತ್ತಿಗೆಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಆಶೀರ್ವದಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಪುನಿತ್ ಯಾಕಿಲ್ಲ: ಪುನೀತ್‌ಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಇಷ್ಟವಿಲ್ಲ ಎಂದಾದರೆ ನಾವು ತೊಂದರೆ ಕೊಡಬಾರದು. ಅದು ಅಲ್ಲದೆ ಅವರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಚಿತ್ರನಟ ಶಿವರಾಜ್‌ಕುಮಾರ್ ಹೇಳಿದ್ದಾರೆ. 

ಪುನೀತ್ ರಾಜ್‌ಕುಮಾರ್ ಯಾಕೆ ಪ್ರಚಾರಕ್ಕೆ ಬರ್ತಾ ಇಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಶಿವರಾಜಕುಮಾರ ಉತ್ತರಿಸಿದರು. ರಾಜಕಾರಣಕ್ಕೂ ಸಿನಿಮಾ ಜೀವನಕ್ಕೂ ಥಳಕು ಹಾಕಬೇಡಿ. ರಾಜಕಾರಣವೇ ಬೇರೆ. ನಾನು ರಾಜಕಾರಣ ಮಾಡಲು ಬಂದಿಲ್ಲ. ಪತ್ನಿ ಪರವಾಗಿ ಬಂದಿದ್ದೇನೆ. ನನ್ನ ಪ್ರತಿಯೊಂದು ಕಷ್ಟಸುಖಗಳಲ್ಲಿ ಆಕೆ ಭಾಗಿಯಾಗಿದ್ದವಳು ಎಂದು ಮಾರ್ಮಿಕವಾಗಿ ನುಡಿದರು. ಪ್ರಯತ್ನ ನಮ್ಮದು: ಸಿನಿಮಾ ಅಭಿಮಾನ ಮತವಾಗಿ ಪರಿವರ್ತನೆಯಾಗುತ್ತದೊ ಇಲ್ಲವೊ ಗೊತ್ತಿಲ್ಲ. ನಾವು ಪ್ರಯತ್ನ ನಡೆಸುತ್ತಿದ್ದೇವೆ. ಉಳಿದದ್ದು ದೇವರಿಗೆ ಬಿಟ್ಟಿದ್ದು ಎಂದರು. 

ನಟ ವಿಜಯರಾಘವೆಂದ್ರ ಅವರು ಮಾತನಾಡಿ ಜನರಿಂದ ಮತ ಯಾಚಿಸಿದರು. ನಟ ಶಿವರಾಜ್‌ ಕುಮಾರ್‌ ಜೋಗಿ ಚಿತ್ರದ ಹಾಡು ಹಾಡಿ ಅಭಿಮಾನಿಗಳನ್ನು ರಂಜಿಸಿದರು. ಉದ್ಯಮಿ ವಿ. ಕೆ. ಮೋಹನ್‌, ಚಿತ್ರ ನಟರಾದ ಬಾಲರಾಜ್‌, ಜೆಡಿಎಸ್‌ ಉಸ್ತುವಾರಿ ಡಿ. ಆರ್‌. ರಾಜು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮನ್ಸೂರ್‌ ಇಬ್ರಾಹಿಂ, ಭಟ್ಕಳ ಜೆಡಿಎಸ್‌ ಮುಖಂಡ ಇನಾಯಿತುಲ್‌, ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ಶೆಟ್ಟಿ, ಬೆ„ಂದೂರು ಕ್ಷೇತ್ರ ಅಧ್ಯಕ್ಷ ರಂಜಿತ್‌ ಕುಮಾರ್‌ ಶೆಟ್ಟಿ, ಯುವ ಘಟಕದ ಅಧ್ಯಕ್ಷ ಸಂದೇಶ್‌ ಭಟ್‌ ಉಪ್ಪುಂದ, ರಾಜೀವ ಕೋಟ್ಯಾನ್‌, ಕಿಶೋರ್‌ ಬಲ್ಲಾಳ್‌ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಬಳಿಕ ಹೆಮ್ಮಾಡಿ, ತ್ರಾಸಿ, ನಾಡಾ, ನಾವುಂದ, ನಾಗೂರು, ಕಂಬದಕೋಣೆ, ಉಪ್ಪುಂದ, ಶಿರೂರು ಮೊದಲಾದೆಡೆ ರೋಡ್‌ ಶೋ ನಡೆಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com