ತಾಲೂಕಿನಲ್ಲಿ 44,054.55 ಹೆಕ್ಟೇರ್ ಡೀಮ್ಡ್ ಫಾರೆಸ್ಟ್

ಕುಂದಾಪುರ: ಡೀಮ್ಡ್ ಫಾರೆಸ್ಟ್ ಕಾಯಿದೆಯ ಆತಂಕ ಎದುರಿಸುತ್ತಿರುವ ತಾಲೂಕಿನಲ್ಲಿ ಒಟ್ಟು 44,054.55 ಹೆಕ್ಟೇರ್ ಭೂಮಿ ಡೀಮ್ಡ್ ಫಾರೆಸ್ಟ್‌ಗೆ ಒಳಪಟ್ಟಿರುವುದು ಮಾಹಿತಿ ಹಕ್ಕಿನ ಮೂಲಕ ದೃಢಪಟ್ಟಿದೆ. 2007-08ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಸರಕಾರವು ಕೆಲವೊಂದು ಸ್ಥಳವನ್ನು ಡೀಮ್ ಫಾರೆಸ್ಟ್ ಎಂದು ಘೋಷಿಸಿದೆ. ಅದರಂತೆ ಕುಂದಾಪುರ ತಾಲೂಕಿನ ಕೆಲವು ಭಾಗವು ಡೀಮ್ ಫಾರೆಸ್ಟ್‌ನ ಅಡಿಯಲ್ಲಿ ಬರುತ್ತದೆ. ಈ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಮತ್ತು ದಾಖಲೆ ಇಲ್ಲದೇ ಇರುವುದರಿಂದ ಗುರುತಿಸುವುದು ಬಹಳ ಕಷ್ಟವಾಗಿತ್ತು. ಮಾಹಿತಿ ಹಕ್ಕಿನಡಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಲ್ಲಿ ಮಾಹಿತಿ ಕೋರಿದಾಗ ತಾಲೂಕಿನಲ್ಲಿ ಒಟ್ಟು 44,054.55 ಹೆಕ್ಟೇರ್ ಡೀಮ್ ಫಾರೆಸ್ಟ್ ಇದೆ ಎಂದು ಅವರು ವರದಿ ನೀಡಿರುವುದಾಗಿ ಸಾಮಾಜಿಕ ಕಾರ್ಯಕರ್ತ ಶರಶ್ಚಂದ್ರ ಹೆಗ್ಡೆ ತಿಳಿಸಿದ್ದಾರೆ. 

ತೊಂದರೆಯಲ್ಲಿ ಜನಸಮುದಾಯ: ಡೀಮ್ಡ್ ಫಾರೆಸ್ಟ್ ಭೂಮಿಯ ಗಡಿ ಗುರುತಿಸುವಿಕೆ ನಡೆದಿಲ್ಲ. ಪಹಣಿಯಲ್ಲಿಯೂ ದಾಖಲುಗೊಂಡಿಲ್ಲ. ಡೀಮ್ಡ್ ಫಾರೆಸ್ಟ್ ಪಹಣಿಯಲ್ಲಿ ಕಂದಾಯ ಇಲಾಖೆಯ ಈನದಲ್ಲಿದೆ ಎಂದು ತಿಳಿಸಲಾಗಿದೆ. ಸರಕಾರದ ಎಕ್ಸ್‌ಪರ್ಟ್ ಕಮಿಟಿ ಡೀಮ್ಡ್ ಫಾರೆಸ್ಟ್ ಜಾಗವನ್ನು ಸೆಟ್‌ಲೈಟ್ ಮೂಲಕ ಗುರುತಿಸಿದೆ. ಇದರಲ್ಲಿ ಕುಮ್ಕಿ, ದಟ್ಟವಾದ ಮರಗಳಿಂದ ಕೂಡಿದ ಪ್ರದೇಶ ಎ.ಡಬ್ಲ್ಯೂ ಸ್ಥಳ ಮತ್ತು ಇತರ ಸ್ಥಳವು ಕೂಡಿದೆ. ಸರ್ವೆ, ಗಡಿ ಗುರುತಿಸುವಿಕೆ ನಡೆಯದೆ ಇರುವುದರಿಂದ ಜನರು ತೊಂದರೆಗೊಳಗಾಗಿದ್ದಾರೆ. 

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ: ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಮರ ಕಡಿಯುವಿಕೆ ಕಾನೂನು ಬಾಹಿರ. ಆದರೆ ಗ್ರಾಮ ಮಟ್ಟದಲ್ಲಿ ಯಾವುದೇ ದಾಖಲಾತಿಯೂ ಇರುವುದಿಲ್ಲ. 2007-08ರಲ್ಲಿ ಕರ್ನಾಟಕ ಸರಕಾರವು ಈ ಜಾಗವನ್ನು ಅರಣ್ಯ ಇಲಾಖೆಗೆ ವಹಿಸಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ಸುಪ್ರೀಂ ಕೋರ್ಟ್ ಆದೇಶ ಸಂಪೂರ್ಣ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಅದಲ್ಲದೆ ಇಂತಹದ್ದೇ ಉದ್ದೇಶಕ್ಕೆ ಎಂದು ಭೂಮಿಯನ್ನು ಮಂಜೂರಾತಿ ಮಾಡಿದ ಮೂರು ವರ್ಷದೊಳಗೆ ಅದನ್ನು ಅದೇ ಉದ್ದೇಶಕ್ಕೆ ಉಪಯೋಗಿಸದೇ ಇದ್ದಲ್ಲಿ ಹಿಂದಕ್ಕೆ ಪಡೆಯುವ ಅಧಿಕಾರವನ್ನು ಸರಕಾರವು ಹೊಂದಿರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಳ್ಳಲಾಗಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 

ಈ ಡೀಮ್ಡ್ ಫಾರೆಸ್ಟ್ ಕಾಯಿದೆ ಸಾಮಾನ್ಯ ಜನರನ್ನು ನಾನಾ ವಿಧದಲ್ಲಿ ಕಾಡಿರುತ್ತದೆ. ಮನೆಗೆ ವಿದ್ಯುಚ್ಚಕ್ತಿ, ನೀರಿನ ಸಂಪರ್ಕ ಮತ್ತು ರಸ್ತೆ ಸಂಪರ್ಕ ಪಡೆಯಲು ಈ ಕಾಯಿಇದೆ ಅಡ್ಡಗೋಡೆಯಾಗಿ ನಿಂತಿದೆ. ಸುಮಾರು 30-40 ಸೆಂಟ್ಸ್‌ನಲ್ಲಿ ಕೃಷಿ ಮಾಡಿಕೊಂಡು ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಗಡಿಗುರುತು ಇಲ್ಲದ ಈ ಕಾಯಿದೆಯಿಂದ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. 

ಕಸ್ತೂರಿರಂಗನ್ ವರದಿ, ಕಾದಿರಿಸಿದ ಅರಣ್ಯ, ವನ್ಯಜೀವಿ ಸಂರಕ್ಷಣೆ ಕಾಯಿದೆ, ಸಿಆರ್‌ಝಡ್ ನಡುವೆ ಡೀಮ್ಡ್ ಫಾರೆಸ್ಟ್ ಗುಮ್ಮ ಬಡಜನರನ್ನು ಭೂತದಂತೆ ಕಾಡುತ್ತಿದೆ. ಜನಪ್ರತಿನಿಧಿಗಳು ಗಮನಹರಿಸದೆ ಇದ್ದಲ್ಲಿ ಅಪಾಯ ಎದುರಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com