ಮತದಾನಕ್ಕೆ 48 ತಾಸು ಇರೋವರೆಗೂ ಸಮೀಕ್ಷೆ

ನವದೆಹಲಿ: ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಸಾರ ಹಾಗೂ ಪ್ರಕಟಣೆಗೆ ಕಡಿವಾಣ ಹೇರುವಂತೆ ಕೇಂದ್ರ ಕಾನೂನು ಸಚಿವಾಲಯ ನೀಡಿದ್ದ ಸಲಹೆಯನ್ನು ಕೇಂದ್ರೀಯ ಚುನಾವಣಾ ಆಯೋಗ ನಯವಾಗಿಯೇ ತಿರಸ್ಕರಿಸಿದೆ. ಸಂವಿಧಾನದತ್ತವಾಗಿ ತನಗೆ ದೊರೆತಿರುವ ಅಧಿಕಾರ ಬಳಸಿ ಇಂತಹ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಬದಲಿಗೆ ಸರ್ಕಾರವೇ ಈ ವಿಚಾರದಲ್ಲಿ ಕಾನೂನು ತರಲಿ ಎಂದು ಸಲಹೆ ನೀಡಿದೆ. ಇದರಿಂದಾಗಿ ಮತದಾನಕ್ಕೆ ಮುನ್ನ 48 ತಾಸಿನವರೆಗೂ ಚುನಾವಣೆ ಪೂರ್ವ ಸಮೀಕ್ಷೆಗಳನ್ನು ನಡೆಸಲು ಮಾಧ್ಯಮ ಸಂಸ್ಥೆಗಳಿಗೆ ಯಾವುದೇ ಅಡ್ಡಿ ಇಲ್ಲದಂತಾಗಿದೆ.

ಸಂವಿಧಾನದ ಪರಿಚ್ಛೇದ 324ರಡಿ ಲಭಿಸಿರುವ ಅಧಿಕಾರ ಬಳಸಿ ಚುನಾವಣಾಪೂರ್ವ ಸಮೀಕ್ಷೆಗಳಿಗೆ ನಿರ್ಬಂಧ ಹೇರುವಂತೆ ಕೇಂದ್ರ ಕಾನೂನು ಸಚಿವಾಲಯ ಚುನಾವಣಾ ಆಯೋಗಕ್ಕೆ ಸಲಹೆ ಮಾಡಿತ್ತು. ಆದರೆ ಈ ಸಲಹೆಗೆ ಉತ್ತರ ನೀಡಿರುವ ಆಯೋಗ, 324ನೇ ವಿಧಿಯಡಿ ಸಮೀಕ್ಷೆಗೆ ನಿರ್ಬಂಧ ಹೇರಿದರೆ ಅದು ಕಾನೂನಿನ ಮುಂದೆ ಗಟ್ಟಿಯಾಗಿ ನಿಲ್ಲದೇ ಹೋಗಬಹುದು. ಹೀಗಾಗಿ ಮತದಾನೋತ್ತರ ಸಮೀಕ್ಷೆಗಳಂತೆಯೇ ಚುನಾವಣಾ ಪೂರ್ವ ಸಮೀಕ್ಷೆಗಳನ್ನೂ ಕೇಂದ್ರ ಸರ್ಕಾರವೇ ಕಾನೂನು ತಂದು ನಿಯಂತ್ರಿಸುವುದು ಒಳಿತು ಎಂದು ಸಲಹೆ ಮಾಡಿದೆ.

ಈಗಿರುವ ಕಾನೂನಿನ ಪ್ರಕಾರ ಮತದಾನದ 48 ತಾಸಿಗೂ ಮುನ್ನ ಸಮೀಕ್ಷೆಗಳಿಗೆ ನಿಷೇಧ ಹೇರುವ ಅಧಿಕಾರ ಆಯೋಗಕ್ಕೆ ಇದೆ. ಚುನಾವಣೆ ಅಧಿಸೂಚನೆ ಪ್ರಕಟಗೊಂಡ ದಿನದಿಂದ ಅಂತಿಮ ಹಂತದ ಚುನಾವಣೆ ಮುಗಿಯುವವರೆಗೂ ಚುನಾವಣಾ ಸಮೀಕ್ಷೆಗಳಿಗೆ ನಿಷೇಧ ಹೇರಬೇಕು ಎಂಬ ಪ್ರಸ್ತಾಪವನ್ನು ಆಯೋಗ ಇಟ್ಟಿತ್ತು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com