ವೋಟರ್ ಸ್ಲಿಪ್‌ನೊಂದಿಗೆ ಮತದಾನ ಮನವಿ ಪತ್ರ ವಿತರಣೆ: ಜಿಲ್ಲಾಧಿಕಾರಿ

ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಭಾರತ ಚುನಾವಣಾ ಆಯೋಗವು ನೀಡಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಸುಮಾರು 2,53,000 ಕುಟುಂಬಗಳಿಗೆ ಏ.17ರಂದು ಜರಗಲಿರುವ ಮತದಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಮತದಾನ ಮಾಡಲು ಮನವಿ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುದ್ದುಮೋಹನ್ ಹೇಳಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೋಟರ್ ಸ್ಲಿಪ್‌ಗಳ ಜೊತೆ ಈ ಮನವಿ ಪತ್ರಗಳನ್ನು ವಿತರಿಸಲಾಗುವುದು ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಉಡುಪಿ - ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13,86,515 ಮತದಾರರು ಮತಚಲಾವಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 7,11,533 ಹಾಗೂ ಚಿಕ್ಕಮಂಗಳೂರು ಜಿಲ್ಲೆಯಲ್ಲಿ 6,74,982 ಮತದಾರ ಸಂಖ್ಯೆ ಇದೆ. ಈ 2 ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 35270 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದು, ಇದರಲ್ಲಿ 18 ವರ್ಷ ವಯಸ್ಸಿನ ಶೇಕಡಾ 20 ರಷ್ಟು ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂದರು.
ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ 1059 ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವಂತೆ  ಹೆಲ್ಪ್ ಡೆಸ್ಕ್, ದಿಕ್ಸೂಚಿ, ಸಾಲಾಗಿ ನಿಲ್ಲುವ ವ್ಯವಸ್ಥೆ, ಹೆಲ್‌ಕೇರ್, ಅಂಗವಿಕಲರಿಗೆ ರ್ಯಾಂಪ್, ಶೌಚಾಲಯ, ಕುಡಿಯುವ ನೀರು, ವೋಟರ್ ಫೆಸಿಲಿಟೇಷನ್ ಸೆಂಟರ್ ಸೌಲಭ್ಯಗಳನ್ನು ಒದಗಿಸುತ್ತದೆ. ಉಡುಪಿ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 197 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನೇರ ವೀಕ್ಷಣೆಯ ವೆಬ್‌ಕಾಸ್ಟಿಂಗ್ ನಡೆಸಲಾಗುವುದು. ಅದೇ ರೀತಿ ಮತದಾನ ಪ್ರಕಿಯೆ ಸುವ್ಯವಸ್ಥಿತವಾಗಿ ನಡೆಸಲ ಅನುಕೂಲವಾಗುವಂತೆ ಕೇಂದ್ರ ಸರ್ಕಾರಿ ನೌಕರರನ್ನು ಬಳಸಿಕೊಂಡು ಅಗತ್ಯವಿರುವ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com