ಮತದಾನದ ಹಕ್ಕಿಗಾಗಿ ವೃದ್ಧ ದಂಪತಿ ಸತ್ಯಾಗ್ರಹ.

ಉಡುಪಿ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಯಿಸದೆ ಮತದಾನದ ಹಕ್ಕು ನಿರಾಕರಿಸಲಾಗಿದೆ. ನಮಗೆ ಮತದಾನದ ಹಕ್ಕು ನೀಡಬೇಕು ಎಂದು ಹೆರ್ಗದ ವೃದ್ಧ ದಂಪತಿ ಶುಕ್ರವಾರ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೂತಿದ್ದಾರೆ. 

ಉಡುಪಿ ತಾಲೂಕು ಹೆರ್ಗಾ ಗ್ರಾಮ ಸರಳೆಬೆಟ್ಟು 2ನೇ ಅಡ್ಡರಸ್ತೆ ಶ್ರೀ ವಿಷ್ಣು ನಿಲಯ ನಿವಾಸಿಗಳಾಗಿರುವ ಗೋಪಾಲ ಅಪ್ಪು ಕೋಟೆಯಾರ್ (67) ಮತ್ತು ಸುನಂದ ಜಿ. ಕೋಟೆಯಾರ್ (62) ಸತ್ಯಾಗ್ರಹಕ್ಕೆ ಕುಳಿತವರು. ಈ ದಂಪತಿ 11 ವರ್ಷದ ಹಿಂದೆ ಮುಂಬಯಿಯಿಂದ ಉಡುಪಿಗೆ ಬಂದು ಸರಳೆಬೆಟ್ಟಿನಲ್ಲಿ ವಾಸವಾಗಿದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿಯ ಕೆಲವರು ಬಂದು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಸೇರ್ಪಡೆಯಾಗಿರಲಿಲ್ಲ. ಲೋಕಸಭೆ ಚುನಾವಣೆ ಬರುವ ಹಿನ್ನೆಲೆಯಲ್ಲಿ 2014ರಲ್ಲಿ ಮತ್ತೆ ಮತದಾರರ ಸೇರ್ಪಡೆ ಕಾರ್ಯ ಆರಂಭಗೊಂಡಿತು. ಫೆಬ್ರವರಿ 6ಕ್ಕೆ ಕೋಟೆಯಾರ್ ದಂಪತಿ ತಮ್ಮ ಹೆಸರು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಿದ್ದಾರೆ. ಹೆರ್ಗ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಮ್ಮ ಹೆಸರು ಸೇರ್ಪಡೆಗೊಳ್ಳುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಸೇರ್ಪಡೆ ಗೊಂಡಿರಲಿಲ್ಲ. 

ಗ್ರಾಮ ಕರಣಿಕರಿಂದ ಹಿಡಿದು ಜಿಲ್ಲಾಧಿಕಾರಿವರೆಗೆ ಸಂಪರ್ಕಿಸಿದ ಬಳಿಕ ಕಣ್ತಪ್ಪಿನಿಂದ ಬಾಕಿ ಉಳಿದಿದೆ. ಮುಂದೆ ಸೇರಿಸಲಾಗುವುದು ಎಂದು ತಹಸೀಲ್ದಾರ್‌ರಿಂದ ಏ. 5ರಂದು ಪತ್ರ ಬಂದಿತ್ತು. ಅಧಿಕಾರಿಗಳ ಕಣ್ತಪ್ಪಿಗೆ ನಾವ್ಯಾಕೆ ನಮ್ಮ ಹಕ್ಕು ಕಳೆದುಕೊಳ್ಳಬೇಕು. ಈಗಲೇ ವಯಸ್ಸಾಗಿದೆ. ಮುಂದೆ ಮತದಾನ ಮಾಡಲು ಇರುತ್ತೇವೋ ಇಲ್ವೋ ಗೊತ್ತಿಲ್ಲ. ಈಬಾರಿ ಮತ ಹಾಕಲೇಬೇಕು. ಕೂಡಲೇ ಸೇರ್ಪಡೆ ಮಾಡದಿದ್ದರೆ ಏ. 11ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪಾವಾಸ ಸತ್ಯಾಗ್ರಹ ಮಾಡುತ್ತೇವೆ. ಜೈಲಿಗೆ ಹಾಕಿದರೂ ಪರವಾಗಿಲ್ಲ ಎಂದು ಗೋಪಾಲ ಕೋಟೆಯಾರ್ ಮತ್ತು ಸುನಂದ ಕೋಟೆಯಾರ್ ಕಳೆದ ಮಂಗಳವಾರ ಎಚ್ಚರಿಸಿದ್ದರು. 

ಆದರೆ ಮತದಾರರ ಹೆಸರು ಸೇರ್ಪಡೆಯ ಅವಧಿ ಮುಗಿದಿರುವುದರಿಂದ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಹೆಸರು ಸೇರ್ಪಡೆಗೆ ಅವಕಾಶ ಇರುವುದಿಲ್ಲ. ಹಾಗಾಗಿ ಕೋಟೆಯಾರ್ ದಂಪತಿ ಹೆಸರು ಸೇರ್ಪಡೆಗೊಂಡಿಲ್ಲ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ದಂಪತಿ ಕಚೇರಿ ಒಳಗೆಯೇ ನೆಲಕ್ಕೆ ಶಾಲು ಹಾಕಿ ಕುಳಿತಿದ್ದರು. ಎಡಿಸಿ ಬಂದು ನೀವು ಪ್ರತಿಭಟನೆ ಮಾಡುವುದಾಗಿದ್ದರೆ ಪ್ರತಿಭಟನೆಗಾಗಿ ನಿಗದಿಪಡಿಸಿದ ಸ್ಥಳದಲ್ಲಿ ಮಾಡಿ. ಕಚೇರಿ ಒಳಗೆ ಮಾಡುವಂತಿಲ್ಲ ಎಂದು ತಿಳಿಹೇಳಿ ಪ್ರತಿಭಟನಾ ಮೀಸಲು ಸ್ಥಳಕ್ಕೆ ಕಳುಹಿಸಿದರು. 

ಡಿಸಿ ಸಂಧಾನ ವಿಫಲ: ನೀವು ಪ್ರತಿಭಟನೆ ಹಿಂದಕ್ಕೆ ತೆಗೆದು ಕೊಳ್ಳಬೇಕು. ಯಾಕೆಂದರೆ ಪ್ರತಿಭಟನೆ ಮಾಡಿದರೂ ಹೆಸರು ಸೇರ್ಪಡೆ ಮಾಡುವ ಅಧಿಕಾರ ಈಗ ಇಲ್ಲ. ಮಾ. 26ರೊಳಗೆ ಆಗಿದ್ದರೆ ನೋಡಬಹುದಿತ್ತು. ನೀವು ಅರ್ಜಿ ಸಲ್ಲಿಸುವಾಗ ಮುಂಬಯಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಸಿರುವ ದಾಖಲೆ ಕೊಟ್ಟಿರಲಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಬಂದು ವಿವರಿಸಿದರೂ ವೃದ್ಧ ದಂಪತಿ ಜಗ್ಗಲಿಲ್ಲ. ನಾವು ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಆಗ ಬೇಕಾದ ದಾಖಲೆ ಕೇಳದೆ ಈಗ ಹೇಳಿದರೆ ಅರ್ಥವಿಲ್ಲ. ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಗೋಪಾಲ ಕೋಟೆಯಾರ್ ಪಟ್ಟು ಹಿಡಿದು ಕುಳಿತರು. ಸಂಧಾನಕ್ಕೆ ಬಂದಿದ್ದ ಡಾ.ಮುದ್ದುಮೋಹನ್, ರೋಹಿಣಿ ಮತ್ತು ಜಾರ್ಜ್ ಪಿಂಟೋ ವಾಪಸಾದರು. 

ಒತ್ತಡ ಹೇರುವುದು ಸರಿಯಲ್ಲ: ಕಳೆದ 11 ವರ್ಷಗಳಿಂದ ಉಡುಪಿಯಲ್ಲಿ ವಾಸವಾಗಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸದೆ 2014 ಚುನಾವಣೆ ಹತ್ತಿರ ಬಂದಾಗ ಕೊನೇ ಕ್ಷಣದಲ್ಲಿ ಅರ್ಜಿ ಸಲ್ಲಿಸಿ ಈ ರೀತಿ ಪ್ರತಿಭಟನೆ ಕೂರುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಮೊದಲೇ ಅರ್ಜಿ ಸಲ್ಲಿಸಿ ಅಧಿಕಾರಿಗಳು ಸ್ಪಂದಿಸದೆ ಇದ್ದಾಗ ಹೋರಾಟ ಮಾಡುವುದಕ್ಕೊಂದು ನ್ಯಾಯವಿದೆ. ಚುನಾವಣೆಯ ಒತ್ತಡದ ಕಾಲದಲ್ಲಿ ಅಧಿಕಾರಿಗಳಲ್ಲಿ ಮತ್ತಷ್ಟು ಒತ್ತಡ ಸೃಷ್ಟಿಸುವುದು ಸರಿಯಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. 

ಉಡುಪಿಯಲ್ಲಿ ಶಾಶ್ವತವಾಗಿ ನಿಲ್ಲುವ ಯೋಜನೆ ಇರಲಿಲ್ಲ. ಹಾಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಒಬ್ಬ ಮಗ ಕೆನಡಾದಲ್ಲಿ, ಒಬ್ಬ ಅಮೆರಿಕದಲ್ಲಿ ಇದ್ದಾರೆ. ಇನ್ನು ಇಲ್ಲೇ ನೆಲಸುವುದು ಎಂದು ನಾಲ್ಕು ತಿಂಗಳ ಹಿಂದೆಯಷ್ಟೆ ನಾವು ನಿರ್ಧರಿಸಿದ್ದು ಎಂದು ಕೋಟೆಯಾರ್ ಸಮಜಾಯಿಷಿ ನೀಡಿದ್ದಾರೆ. 

*ಅವರು ಅರ್ಜಿ ಸಲ್ಲಿಸುವಾಗ ಎಲ್ಲ ದಾಖಲೆಗಳನ್ನು ಇಟ್ಟು ಕೊಡುವುದು ಅವರ ಜವಾಬ್ದಾರಿ. ಆದರೆ ಮುಂಬಯಿ ಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಸಿದ ಬಗ್ಗೆ ದಾಖಲೆ ನೀಡಿಲ್ಲ. ಚುನಾವಣೆ ಬಂದಿರುವುದರಿಂದ ಎಲ್ಲ ಅರ್ಜಿಗಳಿಗೆ ಸ್ಪಂದಿಸುವ ತರಾತುರಿಯಲ್ಲಿ ಅಪೂರ್ಣ ಅರ್ಜಿಗಳನ್ನು ಪಕ್ಕಕ್ಕಿಟ್ಟು ಉಳಿದವುಗಳ ಕೆಲಸ ಮಾಡಿದ್ದಾರೆ. ಏನು ದಾಖಲೆಬೇಕು ಎಂಬುದನ್ನು ಆಮೇಲೆ ಅರ್ಜಿದಾರರಿಗೆ ತಿಳಿಸಬೇಕಿತ್ತು. ಆದರೆ ಆ ಒತ್ತಡದಲ್ಲಿ ತಿಳಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ತಹಸೀಲ್ದಾರರಿಗೆ ಮತ್ತು ಗ್ರಾಮ ಕರಣಿಕರಿಗೆ ನೊಟೀಸ್ ಜಾರಿ ಮಾಡಿದ್ದೇವೆ. ಈಗ ಮತದಾರರ ಹೆಸರು ಸೇರ್ಪಡೆ, ಬೇರ್ಪಡೆ ಇಲ್ಲದೆ ಇರುವುದರಿಂದ ನಾವು ಚುನಾವಣೆ ಮುಗಿಯುವವರೆಗೆ ಏನೂ ಮಾಡುವಂತಿಲ್ಲ. -ಡಾ. ಮುದ್ದುಮೋಹನ್, ಜಿಲ್ಲಾಧಿಕಾರಿ 

*ತಪ್ಪು ಮಾಡಿದವರನ್ನು ಸಸ್ಪೆಂಡ್ ಮಾಡುವುದಾಗಿ ನಮಗೆ ಭರವಸೆ ನೀಡಿದ್ದಾರೆ. ಹಾಗಾಗಿ ಉಪವಾಸ ಸತ್ಯಾಗ್ರಹ ಒಂದೇ ದಿನಕ್ಕೆ ಮುಗಿಸುತ್ತಿದ್ದೇವೆ. ಆದರೆ ನಮ್ಮ ಹೋರಾಟ ಮುಂದು ವರಿಯುತ್ತದೆ. ಆರ್‌ಟಿಐ ಆ್ಯಕ್ಟ್ ಪ್ರಕಾರ ಅರ್ಜಿ ಸಲ್ಲಿಸಿ ಯಾರದ್ದೆಲ್ಲ ಇದೇ ರೀತಿ ಅರ್ಜಿ ಪೆಂಡಿಂಗ್ ಆಗಿದೆ ಎಂದು ನೋಡಿ ಹೋರಾಟ ನಡೆಸುತ್ತೇವೆ. -ಗೋಪಾಲ ಕೋಟೆಯಾರ್

ವಿಕ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com