ಕೇಂದ್ರ ಸರಕಾರದ್ದು ಕೇವಲ ಮಾಹಿತಿ ನೀಡುವ ಪೋಸ್ಟ್‌ಮನ್ ಕೆಲಸ: ಶೋಭಾ ಕರಂದ್ಲಾಜೆ

ಕೋಟೇಶ್ವರ: ಭಾರತದ ನೆಲವನ್ನು ಕಬಳಿಸಲು ಪಕ್ಕದ ದೇಶಗಳು ಮುಂದಾಗಿದ್ದರೂ ಕೂಡ ಸರಕಾರ ಅದರ ಬಗ್ಗೆ ಮಾತನಾಡುವುದಾಗಲೀ, ಚರ್ಚೆ ನಡೆಸುವುದಾಗಲೀ ಮಾಡುತ್ತಿಲ್ಲ, ಗಡಿಗಳ ಒತ್ತುವರಿ, ಸೈನಿಕರಿಗೆ ಅಪಮಾನದಂತಹ ಘಟನೆಗಳು ಸಂಭವಿಸುತ್ತಿದೆ. ದೇಶಕ್ಕೆ ಭಯೋತ್ಪಾದಕರು ಬಂದರೇ ಕೇವಲ ಎಲ್ಲಾ ರಾಜ್ಯಗಳಿಗೂ ಮಾಹಿತಿಯನ್ನು ಕೊಡುವ ಪೋಸ್ಟ್‌ಮನ್ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆಯೇ ಹೊರತು ದೇಶದ ರಕ್ಷಣೆ ಹಾಗೂ ಭದ್ರತೆಯತ್ತ ಗಮನ ಕೊಡದ ನಿರ್ವೀರ‍್ಯ ಸರಕಾರ ನಮ್ಮನ್ನಾಳುತ್ತಿದೆ ಎಂದು ಉಡುಪಿ ಚಿಕ್ಕಮಗಳುರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು. ಅವರು ಸೋಮವಾರ ರಾತ್ರಿ ಕೋಟೇಶ್ವರ ಶಕ್ತಿಕೇಂದ್ರದ ವತಿಯಿಂದ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೇದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
       ಹಿಂದೆ ಘಜ್ನಿ ಮಹ್ಮಮದ್ ಭಾರತಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ನಮ್ಮ ಹಿರಿಯರ ತಪ್ಪು ಹಾಗೂ ನಮ್ಮಲ್ಲಿರುವ ಒಡಕಿನ ಪರಿಣಾಮ ದೇಶದ ಸಂಪತ್ತು ಲೂಟಿಯಾಗಿತ್ತು. ನಮ್ಮನಮ್ಮಲ್ಲೇ ಎತ್ತಿಕಟ್ಟಿ, ಸ್ವಂತ ಹಿತದ ಆಸೆಗಾಗಿ ದೇಶದ ಹಿತ ಮರೆತಿದ್ದೆವು, ಅದರಿಂದಾಗಿ ದೇಶ ಗುಲಾಮಗಿರಿಯತ್ತ ಹೋಗಿದೆ. ಇಂದು ಕೂಡ ಜಾತಿ ಧರ್ಮದ ವಿಚಾರವೇ ನಮ್ಮಲ್ಲಿ ಜಾಸ್ಥಿಯಾಗಿದ್ದು ದೇಶದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಇದೆಲ್ಲವನ್ನೂ ಮರೆತು ನಾವೆಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು ಎಂದರು.
      ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವ್ರದ್ಧಿ ಕೆಲಸಗಳಾಗಿದೆ. ಆದರೆ ಕಳೆದ ೧೦ ತಿಂಗಳ ಹಿಂದೆ ಬಂದ ಕಾಂಗ್ರೆಸ್ ಸರಕಾರ ನಮ್ಮ ಸರಕಾರದ ಅಭಿವ್ರದ್ಧಿ ಕಾರ್ಯಗಳನ್ನು ಮುಂದುವರೆಸಿಲ್ಲ, ಒಂದೇ ಒಂದು ಅಭಿವ್ರದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಇಂದಿನ ಸರಕಾರ ಶಾಧಿಭಾಗ್ಯ ಯೋಜನೆಯ ಹೆಸರಿನಲ್ಲಿ ನಮ್ಮನಮ್ಮಲ್ಲಿ ಬಿರುಕು ಮೂಡಿಸುವ ದುರಾಲೋಚನೆಯನ್ನಿಟ್ಟುಕೊಂಡಿದೆ. ಶಾಧಿ ಭಾಗ್ಯ ಯೋಜನೆ ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಸವರುವ ದುರುದ್ಧೇಶವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆ ಕೇವಲ ರಾಜಕೀಯವಲ್ಲ, ಈ ಕ್ಷೇತ್ರದಲ್ಲಿ ಜಯಪ್ರಕಾಶ ಹೆಗ್ಡೆ ಮತ್ತು ನನ್ನ ನಡುವಿನ ಪೈಪೋಟಿ ಮಾತ್ರವಲ್ಲ, ಅಥವಾ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಪೈಪೋಟಿಯೂ ಅಲ್ಲ ಬದಲಾಗಿ ಬಲಿಷ್ಠ ಭಾರತ ನಿರ್ಮಾಣದ ಕನಸು ಹೊತ್ತಿರುವ ಮಹತ್ತರವಾದ ಚುನಾವಣೆ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಯುವಮೋರ್ಚಾದ ರಾಜ್ಯ ಕಾರ್ಯದರ್ಶಿ ಯಶಪಾಲ್ ಸುವರ್ಣ, ಬಿಜೆಪಿ  ಜಿಲ್ಲಾ ಉಪಾಧ್ಯಕ್ಷ ಮಟ್ಟಾ ರತ್ನಾಕರ ಹೆಗ್ಡೆ, ಮೀನುಗಾರಿಕಾ ಪ್ರಕೋಷ್ಠದ ರಾಜ್ಯಸಂಚಾಲಕ ಬಿ. ಕಿಶೋರ್ ಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ ಕಾವೇರಿ, ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್, ಉಡುಪಿ ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ,  ಕೋಟೇಶ್ವರ ಶಕ್ತಿಕೇಂದ್ರದ ಅಧ್ಯಕ್ಷ ರವೀಂದ್ರ ದೊಡ್ಮನೆ ಉಪಸ್ಥಿತರಿದ್ದರು.
ಕುಂದಾಪುರ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com