ಇದು ದೇಶದ ಉಳಿವಿಗೆ ನಡೆಯುತ್ತಿರುವ ಚುನಾವಣೆ ಶೋಭಾ ಕರಂದ್ಲಾಜೆ

ಸಿದ್ದಾಪುರ: ಕಾಂಗ್ರೆಸ್‌ ಪಕ್ಷ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಕ್ಷವೆಂದು ಹೇಳಿಕೊಂಡು ದೇಶವನ್ನು ಹೀನಾಯ ಸ್ಥಿತಿಯತ್ತ ಕೊಂಡೊಯ್ದಿದೆ. ಇಂದು ದೇಶದ ಗೌರವ ವಿದೇಶದಲ್ಲಿ ಮಣ್ಣು ಪಾಲಾಗುತ್ತಿದೆ. ಗಡಿ ಪ್ರದೇಶದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಇಂದಿನ ಈ ಚುನಾವಣೆ ದೇಶದ ಉಳಿವಿಗೆ ಹೊರತು ಅಭ್ಯರ್ಥಿಗಳ ನಡುವಿನ ಜಿದ್ದಾಜಿದ್ದಿಗಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಾರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಲಾಡಿ ಜಿ. ಪಂ. ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಮೋದಿ ಪರ ಪ್ರಚಾರಕ್ಕೆ ಎನ್‌ಆರ್‌ಐ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಕಳೆದ ಹತ್ತು ವರ್ಷಗಳಿಂದ ದೇಶಕೊಳ್ಳೆ ಹೊಡೆಯುವ ಮೂಲಕ ದೇಶದ ಅರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಹಾಳು ಮಾಡಿದೆ. ಕಾಂಗ್ರೆಸ್‌ ಸರಕಾರದ ಕೆಟ್ಟ ನೀತಿಯಿಂದ ವಿದೇಶದಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಗೌರವ ಇಲ್ಲದಂತಾಗಿದೆ. ದೇಶದ ಪ್ರತಿಷ್ಠೆ ಎತ್ತಿ ಹಿಡಿಯುವುದಕ್ಕೆ ಒಬ್ಬ ಸಮರ್ಥ ನಾಯಕ ಬೇಕಾಗಿರುವುದರಿಂದ ಮೋದಿಯನ್ನು ಪ್ರಧಾನಿ ಮಾಡಲು ಎರಡು ಸಾವಿರ ಅನಿವಾಸಿ ಭಾರತಿಯರು ಬಿಜೆಪಿ ಪರ ಕೆಲಸ ಮಾಡಲು ಬರುತ್ತಿದ್ದಾರೆ ಎಂದು ಅವರು ಹೇಳಿದರು.

ಆಂತರಿಕ ಕಲಹದಿಂದ ಅಭಿವೃದ್ಧಿ ಶೂನ್ಯ

ಬಿಜೆಪಿ ಸರಕಾರ ಇದ್ದಾಗ ಕೃಷಿಕರ ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುವ ಮೂಲಕ ಹಾಗೂ ಕೃಷಿ ಸಾಲ ಮನ್ನಾ ಮಾಡುವ ಮೂಲಕ ಕೃಷಿಕರ ಬಾಳಿನಲ್ಲಿ ಆಶಾಕಿರಣ ಮೂಡಿಸಿದ್ದೇವೆ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ ಮೂಲಕ ಉತ್ತಮ ವಿದ್ಯಾಭ್ಯಾಸಕ್ಕೆ ದಾರಿ ಮಾಡಿ ಕೊಟ್ಟಿದ್ದೇವೆ. ಬಿಜೆಪಿ ಸರಕಾರದ ಯೋಜನೆಗಳ ಮೂಲಕ ಜನಸಾಮಾನ್ಯರ, ಬಡವರ, ಕೃಷಿಕರ ಪರವಾಗಿ ನಿಂತು ನೆಮ್ಮದಿಯ ಜೀವನ ನಡೆಸಲು ಕಾರಣರಾಗಿದ್ದೇವೆ. ಕಾಂಗ್ರೆಸ್‌ ಪಕ್ಷ ಇಂದು ಅಡಿಕೆ ನಿಷೇಧ ಮಾಡಲು ಹೋರಟಿದೆ. ಅತೀ ಹೆಚ್ಚು ಅಡಿಕೆ ಬೆಳೆಯುವ ಜಿಲ್ಲೆಗಳನ್ನು ಪ್ರತಿನಿಧಿಸಿದ ಸಂಸದ ಜಯಪ್ರಕಾಶ ಹೆಗ್ಡೆ ಅಡಿಕೆ ಬೆಳೆಗಾರರ ರಕ್ಷಣೆ ಮಾಡುತ್ತಿಲ್ಲ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ ಇಂದು ಆಂತರಿಕ ಕಲಹದಿಂದ ಅಭಿವೃದ್ಧಿ ಶೂನ್ಯವಾಗಿದೆ. ಆಡಳಿತದಲ್ಲಿ ಹಿಡಿತ ಇಲ್ಲದ ಪರಿಣಾಮ ಆದಾಯ ಸೋರಿಹೋಗುತ್ತಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಂದಾಪುರ ಕ್ಷೇತ್ರಾಧ್ಯಕ್ಷ ರಾಜೇಶ್‌ ಕಾವೇರಿ, ತಾ. ಪಂ. ಅಧ್ಯಕ್ಷೆ ದೀಪಿಕಾ ಎಸ್‌. ಶೆಟ್ಟಿ, ಜಿ. ಪಂ. ಸದಸ್ಯ ರಶ್ವತ್‌ ಕುಮಾರ ಶೆಟ್ಟಿ, ತಾ. ಪಂ. ಸದಸ್ಯರಾದ ಆರ್‌., ನವೀನಚಂದ್ರ ಶೆಟ್ಟಿ, ಪಾರ್ವತಿ ಕುಲಾಲ, ಹಾಲಾಡಿ ಗ್ರಾ. ಪಂ. ಅಧ್ಯಕ್ಷೆ ಇಂದಿರಾ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಕಾರ್ಯದರ್ಶಿ ಶ್ಯಾಮಲ ಕುಂದರ್‌ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com