ಪರಿಹಾರ ಕಾಣದ ಉಪ್ಪುನೀರು ಹಾವಳಿ

ಹೆಮ್ಮಾಡಿ: ವರ್ಷಕ್ಕೆರಡು ಬಾರಿ ಭತ್ತ ಬೆಳೆ, ತರಕಾರಿ, ದವಸಧಾನ್ಯ, ಕಬ್ಬು ಕೃಷಿ ಮೂಲಕ ಬಡ ರೈತಾಪಿಜನರ ಬದುಕಿಗೆ ಆಧಾರವಾಗಿದ್ದ ಅಪಾರ ಕೃಷಿಭೂಮಿ ಬಂಜರಾಗುತ್ತಿದೆ. ನದಿತೀರದಲ್ಲಿನ ನೂರಾರು ಎಕರೆ ಕೃಷಿಭೂಮಿಯ ಫಲವತ್ತತೆ ದಿನೇದಿನೇ ನಾಶವಾಗುತ್ತಿದೆ. ಪರಿಸರದ ಒಂದು ಕೀ. ಮೀ. ವ್ಯಾಪ್ತಿಯಲ್ಲಿ ಕೆರೆ-ಬಾವಿಗಳ ನೀರು ಸಹಜರುಚಿಯನ್ನು ಕಳೆದುಕೊಂಡು ಕುಡಿಯಲು ಹಾಗೂ ಬಳಕೆಗೆ ಅಯೋಗ್ಯವಾಗಿದೆ. ಇಷ್ಟೆಲ್ಲಕ್ಕೂ ಕಾರಣವಾಗಿರುವುದು ಉಪ್ಪುನೀರು ಹಾವಳಿ. ಹೆಮ್ಮಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಟ್‌ಬೇಲೂ¤ರು ಗ್ರಾಮದ ಹರೆಗೋಡು ರಾಜಾಡಿ ನದಿತೀರದಲ್ಲಿ ಕಾಣಿಸಿಕೊಂಡ ಉಪ್ಪುನೀರು ಹಾವಳಿಯ ಅಟ್ಟಹಾಸದಿಂದ ಇಲ್ಲಿನ ಕೃಷಿಕರ ಬದುಕು ಅಕ್ಷರಶಃ ನಲುಗಿಹೋಗಿದೆ.

ಕಳಪೆ ಕಾಮಗಾರಿಯ ಫಲವಾಗಿ ಇಲ್ಲಿನ ಎರಡು ಕಿಂಡಿ ಅಣೆಕಟ್ಟುಗಳು ಇದ್ದೂ ಇಲ್ಲದಂತಾಗಿವೆ. ರಾಜಾಡಿ ನದಿ ತೀರಪ್ರದೇಶ ಸೇರಿದಂತೆ ಹರೆಗೋಡು, ಕಂಚಾಡಿ ಮೊದಲಾದೆಡೆಯ ಕುಮ್ಕಿ ಭೂಮಿ ಅತಿಕ್ರಮಿಸಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಸಿಗಡಿಕೆರೆಗಳು, ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿದಿಗಳು ಹಾಗೂ ಅದಿಕಾರಿಗಳ ದೂರದೃಷ್ಟಿತ್ವದ ಕೊರತೆಯಿಂದಾಗಿ ಹರೆಗೋಡು, ಕಂಚಾಡಿ, ಹೆಬ್ಟಾಲಡಿ, ಹೊಳ್ಳರಮನೆ, ಚಾರ್ಲಿ ಮೆಂಡೋನ್ಸಾರ ಮನೆ ಪರಿಸರ ಸೇರಿದಂತೆ ಸುತ್ತಲಿನ ನೂರು ಎಕರೆಗೂ ಅದಿಕ ವಿಸ್ತಾರದ ಕೃಷಿಭೂಮಿಗೆ ಉಪ್ಪುನೀರು ನುಗ್ಗಿದ್ದು, ಕೃಷಿಕಾಯಕಕ್ಕೆ ತೊಂದರೆಯಾಗಿದ್ದರಿಂದ ಸ್ಥಳೀಯ 60ಕ್ಕೂ ಹೆಚ್ಚು ರೈತ ಕುಟುಂಬಗಳು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ವರ್ಷಕ್ಕೆ ಎರಡನೇ ಬೆಳೆಯಾಗಿ ಸುಗ್ಗಿ ಭತ್ತ ಬೆಳೆಯುತ್ತಿದ್ದ ರೈತರು ಉಪ್ಪುನೀರು ಹಾವಳಿಗೆ ಬೆದರಿ ಸುಗ್ಗಿಕೃಷಿಗೆ ಎಳ್ಳುನೀರು ಬಿಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹರೆಗೋಡು ಹಾಗೂ ಆಸುಪಾಸಿನಲ್ಲಿ ಉಪ್ಪುನೀರು ಹಾವಳಿಯು ಇಲ್ಲಿನ ರೈತರನ್ನು ಬಹುವಾಗಿ ಕಾಡುತ್ತಿದೆ. ಇಲ್ಲಿ ಸ್ವಾಭಾವಿಕವಾಗಿ ಇದ್ದ ನೀರಿನ ಆಗರಗಳು ಅತಿಕ್ರಮಣಕಾರರ ಹಾವಳಿಯಿಂದಾಗಿ ಮಾಯವಾಗಿವೆ. ಹಿನ್ನೀರಿನ ತೋಡುಗಳು ಹೂಳುತುಂಬಿ ಮುಚ್ಚಲ್ಪಟ್ಟಿವೆ. ಕೃಷಿಭೂಮಿಗೆ ಉಪ್ಪುನೀರು ನುಗ್ಗದಂತೆ ನದಿದಡದಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟುಗಳು ಅಸಮರ್ಪಕವಾಗಿದ್ದರಿಂದ ಉಪ್ಪುನೀರು ಒಳನುಗ್ಗುತ್ತಿದ್ದು, ತಡೆಯುವಲ್ಲಿ ವಿಫಲವಾಗಿವೆ. ಇದಕ್ಕೆ ಹಲಗೆ ಅಳವಡಿಸಲು ಕೂಡಾ ಸಾಧ್ಯವಾಗುತ್ತಿಲ್ಲ. ನದಿತೀರಪ್ರದೇಶದಲ್ಲಿ ತಲೆಯೆತ್ತಿದ ಸಿಗಡಿ ಕೆರೆಗಳ ಅವೈಜ್ಞಾನಿಕ ನಿರ್ಮಾಣದಿಂದ ಉಪ್ಪುನೀರು ಹಾವಳಿ ಸಮಸ್ಯೆಯಾಗಿ ಕಾಡುತ್ತಿದೆ. ಸಿಗಡಿ ಕೆರೆ ನಿರ್ಮಿಸುವಾಗ ಸ್ವಾಭಾವಿಕ ನೀರಿನ ತೋಡುಗಳನ್ನು ಮುಚ್ಚಿದ್ದರಿಂದ ನದಿಹಿನ್ನೀರು ಕೃಷಿಭೂಮಿಗೆ ನುಗ್ಗುತ್ತದೆ. ವರ್ಷವೂ ನದಿ ದಡಕ್ಕೆ ಮಣ್ಣು ಹಾಕುವ ಕಾರ್ಯ ನಿಂತಿದ್ದರಿಂದ ಪಕ್ಕದ ಕೃಷಿಭೂಮಿಗೆ ರಕ್ಷಣೆ ಇಲ್ಲವಾಗಿದೆ ಎಂದು ಇಲ್ಲಿನ ಸಮಸ್ಯೆಯ ಸರಮಾಲೆಯನ್ನು ಹರೆಗೋಡುವಿನ ರೈತ ಚಂದ್ರಶೇಖರ ಭಟ್‌ ಅವರು 'ಉದಯವಾಣಿ'ಗೆ ವಿವರಿಸಿದ್ದಾರೆ.

ಪರಿಹಾರ ಇಲ್ಲವೇನು?

ಕಳೆದ ವರ್ಷ ಉಪ್ಪುನೀರು ಹಾವಳಿಯಿಂದಾಗಿ ಅಪಾರ ಭತ್ತ ಕೃಷಿ ಹಾಳಾದ ಬಗ್ಗೆ ಹಾಗೂ ಕೃಷಿಭೂಮಿಗೆ ಹಾನಿಯುಂಟಾದ ಬಗ್ಗೆ ಸ್ಥಳೀಯ ರೈತರು ಗ್ರಾಮ ಪಂಚಾಯತ್‌ ಸೇರಿದಂತೆ ವಿವಿಧ ಸ್ತರದ ಜನಪ್ರತಿನಿದಿಗಳು ಹಾಗೂ ಅದಿಕಾರಗಳ ಗಮನವನ್ನು ಸೆಳೆದು ಪರಿಹಾರಕಾರ್ಯಕ್ಕಾಗಿ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸಮಸ್ಯೆ ಮರುಕಳಿಸಿದೆ. ಇಲ್ಲಿನ ಹೆಬ್ಟಾಲಡಿಯಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟುಗಳನ್ನು ಸಮರ್ಪಕವಾಗಿ ದುರಸ್ತಿಗೊಳಿಸಿದಲ್ಲಿ ಉಪ್ಪುನೀರು ಹಾನಿ ಪ್ರಮಾಣವನ್ನು ತಗ್ಗಿಸಬಹುದು. ನದಿಹಿನ್ನೀರು ಹರಿಯುವ ಸ್ವಾಭಾವಿಕ ತೋಡುಗಳನ್ನು ವ್ಯವಸ್ಥಿತವಾಗಿ ಹೂಳೆತ್ತಿದಲ್ಲಿ ಇಲ್ಲಿನ ಕೃಷಿಭೂಮಿಗೆ ರಕ್ಷಣೆ ಸಿಗುತ್ತದೆ. ನದಿ ದಡ ಸಂರಕ್ಷಣೆ ಯೋಜನೆಯಡಿಯಲ್ಲಿ ರಾಜಾಡಿ ನದಿತೀರಕ್ಕೆ ರಿವಿಟ್‌ಮೆಂಟ್‌ ನಡೆಸಬೇಕು. ನದಿತೀರಪ್ರದೇಶ ಒತ್ತುವರಿ ಹಾಗೂ ಕುಮ್ಕಿ ಭೂಮಿ ಅತಿಕ್ರಮಣ ತಡೆಯುವ ನಿಟ್ಟಿನಲ್ಲಿ ಜನಪ್ರತಿನಿದಿಗಳು ಹಾಗೂ ಅದಿಕಾರಿಗಳು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿ ದಿಟ್ಟ ಕ್ರಮ ಕೈಗೊಂಡಲ್ಲಿ ಮಾತ್ರ ಹರೆಗೋಡು ರೈತರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿರುವ ಉಪ್ಪುನೀರು ಕಾಟವನ್ನು ಶಾಶ್ವತವಾಗಿ ಹಿಮ್ಮೆಟ್ಟಿಸಲು ಸಾಧ್ಯ ಎಂಬ ಸ್ಥಳೀಯ ರೈತರ ಅಭಿಪ್ರಾಯಕ್ಕೆ ಮನ್ನಣೆ ಸಿಗಬೇಕಿದೆ.

ಹೋರಾಟದ ಸಿದ್ಧತೆ: ಎರಡು ವರ್ಷಗಳಿಂದ ಹರೆಗೋಡು ಪರಿಸರದ ನೂರಾರು ಎಕರೆ ಕೃಷಿಭೂಮಿಗೆ ಮಾರಕವಾಗಿರುವ ಉಪ್ಪುನೀರು ಹಾವಳಿ ತಡೆಗೆ ಕ್ರಮ ಕೈಗೊಳ್ಳದ ಸ್ಥಳೀಯಾಡಳಿತ ಹಾಗೂ ರೈತರ ಗೋಳು ಕೇಳದೇ ಮೌನ ವಹಿಸಿರುವ ಅದಿಕಾರಿಗಳ ದಿವ್ಯನಿರ್ಲಕ್ಷŒÂ ಧೋರಣೆಯ ವಿರುದ್ಧ , ಜಾತಿ, ಮತ, ಪಕ್ಷಭೇದ ಮರೆತು ಹೋರಾಟವನ್ನು ಸಂಘಟಿಸುವುದಾಗಿ ಹರೆಗೋಡುವಿನ ರೈತರು ಹೇಳಿದ್ದಾರೆ. ಈಗಾಗಲೇ ಇಲ್ಲಿನ ಸಾಕಷ್ಟು ಕೃಷಿಭೂಮಿಗೆ ಉಪ್ಪುನೀರು ನುಗ್ಗಿದ್ದು, ತಕ್ಷಣ ತುರ್ತುಕ್ರಮ ಜರಗಿಸದಿದ್ದಲ್ಲಿ ಸ್ಥಳೀಯ ರೈತರೇ ಒಗ್ಗೂಡಿ ನದಿದಡದಲ್ಲಿ ಮಣ್ಣು ಹಾಕಿ ಒಡ್ಡು ನಿರ್ಮಿಸಿ ಉಪ್ಪುನೀರು ತಡೆ ಕಾರ್ಯವನ್ನು ನಡೆಸುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ಚಂದ್ರ ಕೆ. ಹೆಮ್ಮಾಡಿ | Apr 02, 2014
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com