ಸಿಗರೇಟ್ ದರ ಹಚ್ಚಳ


ಬೆಂಗಳೂರು:ರಾಜ್ಯದಲ್ಲಿ ಚುನಾವಣೆಯ ಕಾವು ಏರಿರುವ ಮಧ್ಯೆಯೇ ಸಿಗರೇಟ್‌ ಬೆಲೆಯೂ ದಿಢೀರ್‌ ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಕರ್ನಾಟಕದಲ್ಲಿ ಸಿಗರೇಟ್‌ ಬೆಲೆ ಏರಿದ್ದು, ಹೊಸ ದರ ಧೂಮಪಾನ ಮಾಡುವವರ ತುಟಿ ಸುಡುತ್ತಿದೆ.

ಐಟಿಸಿ ಕಂಪೆನಿಯ ಗೋಲ್ಡ್‌ ಫ್ಲೇಕ್‌ ಕಿಂಗ್‌, ಕಿಂಗ್‌ ಲೈಟ್ಸ್‌ ಮತ್ತು ಕ್ಲಾಸಿಕ್‌ ಸಿಗರೆಟ್‌ ಪ್ರತಿ ಪ್ಯಾಕಿನ ದರ 10 ರೂ. ಹೆಚ್ಚಾಗಿದೆ. ಪರಿಣಾಮ ಪ್ರತಿ ಸಿಗರೇಟ್‌ ಬೆಲೆ 8 ರೂ.ನಿಂದ 9ರೂ.ಗೆ ಏರಿದೆ. ಹಾಗೆಯೇ, ವಿಲ್ಸ್‌ ಫ್ಲೇಕ್‌ ಸಿಗರೆಟ್‌ ಪ್ರತಿ ಪ್ಯಾಕಿನ ಮೇಲೆ 5 ರೂ. ಹೆಚ್ಚಾಗಿದ್ದು, 4.50 ರೂ. ಇದ್ದ ಪ್ರತಿ ವಿಲ್ಸ್‌ ಫ್ಲೇಕ್‌ ಸಿಗರೇಟ್‌ ಒಂದರ ಬೆಲೆ 5ರೂ. ಆಗಿದೆ. ಆದರೆ, ಉಳಿದ ಕಂಪೆನಿ ಹಾಗೂ ಮಾದರಿಯ ಸಿಗರೆಟ್‌ ದರ ಹೆಚ್ಚಾಗಿಲ್ಲ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿಗರೇಟ್‌ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿರುವುದೇ ಬೆಲೆ ಏರಿಕೆಗೆ ಕಾರಣ. ರಾಜ್ಯದಲ್ಲಿ ಪರಿಷ್ಕೃತ ದರ ಕಳೆದ ಮೂರು ದಿನಗಳಿಂದ ಜಾರಿಗೆ ಬಂದಿದೆ.

ಪ್ರವೇಶ ತೆರಿಗೆ ಹೆಚ್ಚಳ: ಕೇರಳದಲ್ಲಿ ಐಟಿಸಿ ಸಿಗರೇಟ್‌ಗಳ ಮೇಲಿನ ವ್ಯಾಟ್‌ ಪ್ರಮಾಣ ಶೇ. 3ರಷ್ಟು ಹೆಚ್ಚಾಗಿದ್ದರೆ, ಕರ್ನಾಟಕದಲ್ಲಿ ಪ್ರವೇಶ ತೆರಿಗೆ ಶೇ. 3ರಿಂದ ಶೇ. 5ಕ್ಕೆ ಏರಿಕೆಯಾಗಿದೆ. ಇದರಿಂದ ಸಿಗರೇಟ್‌ ಬೆಲೆ ದಿಢೀರ್‌ ಹೆಚ್ಚಾಗಿದೆ.

ಇದರ ಪರಿಣಾಮ ಐಟಿಸಿ ಗೋಲ್ಡ್‌ ಫ್ಲೇಕ್‌ ಸಿಗರೇಟ್‌ ಪ್ರತಿ ಪ್ಯಾಕಿನ ಬೆಲೆಯು 75 ರೂ.ನಿಂದ 85 ರೂ.ಗೆ ಏರಿಕೆಯಾಗಿದೆ. ವಿಲ್ಸ್‌ ಫ್ಲೇಕ್‌ ಸಿಗರೇಟ್‌ ಪ್ಯಾಕ್‌ ಬೆಲೆ 45 ರೂ.ನಿಂದ 50 ರೂ.ಗೆ ಏರಿದೆ. ಸಿಗರೇಟ್‌ ಡೀಲರ್‌ಗಳೂ ಅಂಗಡಿಗೆ ಸಿಗರೆಟ್‌ ಪ್ಯಾಕನ್ನು 83 ರೂ. ಪೂರೈಕೆ ಮಾಡುತ್ತಿದ್ದಾರೆ. ಅಂಗಡಿದಾರರು ಪ್ಯಾಕ್‌ ಒಂದನ್ನು 85 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಪ್ಯಾಕ್‌ ಖರೀದಿಸಿದರೆ 85ರೂ., ಒಂದು ಸಿಗರೇಟ್‌ ಕೊಂಡರೆ 9 ರೂ. ನೀಡಬೇಕಿದೆ.

'ಐಟಿಸಿ ಕಿಂಗ್‌, ಕ್ಲಾಸಿಕ್‌, ಕಿಂಗ್‌ ಲೈಟ್ಸ್‌ ಮತ್ತು ವಿಲ್ಸ್‌ ಫ್ಲೇಕ್‌ ಸಿಗರೇಟ್‌ಗಳ ಬೆಲೆ ಮಾತ್ರ ಏರಿಕೆಯಾಗಿದೆ. ಉಳಿದ ಸಿಗರೇಟ್‌ಗಳ ಬೆಲೆ ಏರಿಕೆಯಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಿಗರೇಟ್‌ ಮೇಲಿನ ಅಬಕಾರಿ ಶುಲ್ಕವನ್ನು ಜನವರಿಯಲ್ಲಿ ಹೆಚ್ಚಿಸಿದ ಪರಿಣಾಮ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಹೊಸ ದರ ಜಾರಿಗೆ ಬಂದಿದೆ' ಎಂದು ಐಟಿಸಿ ಸಿಗರೆಟ್‌ ಡೀಲರ್‌ ಆದಿಲ್‌ ಷಾ 'ಉದಯವಾಣಿ'ಗೆ ತಿಳಿಸಿದ್ದಾರೆ.

'ದೇಶದಲ್ಲಿ ಒಟ್ಟು ಐದು ರಾಜ್ಯಗಳಲ್ಲಿ ಪರಿಷ್ಕೃತ ದರ ಜಾರಿಗೆ ಬಂದಿದ್ದು. ದಕ್ಷಿಣ ಭಾರತದಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ಹೊಸ ದರವಿದೆ. ಕೇರಳದಲ್ಲಿ ಸಿಗರೇಟ್‌ ಮೇಲಿನ ವ್ಯಾಟ್‌ ಮತ್ತು ಕರ್ನಾಟಕದಲ್ಲಿ ಪ್ರವೇಶ ಶುಲ್ಕ ಏರಿಕೆಯಾಗಿದ್ದು ದಿಢೀರ್‌ ಬೆಲೆ ಹೆಚ್ಚಲು ಕಾರಣ ಎಂದು ಅವರು ತಿಳಿಸಿದರು.

ಮಾರಾಟ ಇಳಿಮುಖ?

ಬೆಲೆ ಹೆಚ್ಚಳದ ಬೆನ್ನಲ್ಲೇ ಐಟಿಸಿ ಕಂಪನಿಗಳ ಸಿಗರೇಟ್‌ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಆತಂಕವನ್ನು ಸಿಗರೇಟ್‌ ಡೀಲರ್‌ಗಳು ವ್ಯಕ್ತಪಡಿಸಿದ್ದಾರೆ. ಇತರೆ, ಕಂಪೆನಿಗಳ ಸಿಗರೆಟ್‌ ಬೆಲೆ ಹೆಚ್ಚಾಗಿಲ್ಲ. ಐಟಿಸಿ ಕಂಪೆನಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 13ಕೋಟಿ ರೂ.ಗಿಂತ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ತನ್ನ ವಿವಿಧ ಬ್ರ್ಯಾಂಡ್‌ ಕಂಪನಿಗಳ ಸಿಗರೇಟ್‌ ಬೆಲೆ ಹೆಚ್ಚಿಸಿದೆ ಎನ್ನಲಾಗಿದೆ.

ಇದರಿಂದಾಗಿ ಗ್ರಾಹಕರು ಐಟಿಸಿ ಕಂಪನಿ ಸಿಗರೇಟ್‌ ಸುಡಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಜತೆಗೆ, ಬೇರೆ ಕಂಪನಿಗಳ ಸಿಗರೇಟ್‌ಗಳ ಮೊರೆ ಹೋಗಬಹುದು. ಪರಿಣಾಮ ಐಟಿಸಿ ಸಿಗರೆಟ್‌ ಮಾರಾಟ ಹಾಗೂ ಬೇಡಿಕೆ ಪ್ರಮಾಣ ಕುಸಿಯಲಿದೆ ಎಂದು ಆದಿಲ್‌ ಷಾ ಆತಂಕ ವ್ಯಕ್ತಪಡಿಸುತ್ತಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com