ಜೆಡಿಎಸ್‌ ಮತಯಾಚನೆಗೆ ತಾರಾ ಮೆರುಗು

ಸಿದ್ದಾಪುರ : ಬಂಗಾರಪ್ಪನವರ ಕೊನೆಯ ದಿನಗಳ ಆಸೆಯಂತೆ ಜನಸೇವೆಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಬಂಗಾರಪ್ಪನವರಿಗೆ ಕರಾವಳಿ ಭಾಗ ಎಂದರೆ ಬಲು ಪ್ರೀತಿ. ಅದಕ್ಕಾಗಿ ಈ ಭಾಗದ ಅಭ್ಯರ್ಥಿಯಾಗಿ ಬಂದಿದ್ದೇನೆ. ಬಂಗಾರಪ್ಪ ಅವರ ಜನಪರ ಕಾಳಜಿ ಹಾಗೂ ಜೆಡಿಎಸ್‌ ಪಕ್ಷದ ಜನಪ್ರಿಯ ಯೋಜನೆಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಹೇಳಿದರು.

ಅವರು ಸಿದ್ದಾಪುರದಲ್ಲಿ ಸೋಮವಾರ ಸಂಜೆ ತೆರೆದ ವಾಹನದಲ್ಲಿ ರೋಡ್‌ಶೋ ಮಾಡಿ ಬಳಿಕ ಸಿದ್ದಾಪುರ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮತಯಾಚನೆ ಮಾಡಿ ಮಾತನಾಡಿದರು.

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕ್ಷಯ, ಆರಾಧನಾ, ಗ್ರಾಮೀಣ ಕೃಪಾಂಕ ಮುಂತಾದ ಜನಪರ ಯೋಜನೆಗಳನ್ನು ರೂಪಿಸಿದ್ದರು. ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಅರಣ್ಯ ಭೂಮಿಯ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ. ಇದಕ್ಕಾಗಿ ಕಾನೂನಿನ ತಿದ್ದುಪಡಿಯಾಗಬೇಕು. ಬೈಂದೂರು ಕ್ಷೇತ್ರದ ಭಾಗದಲ್ಲಿ ಒಂದು ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಬೇಕಿದೆ. ಈ ಭಾಗದ ಜನತೆ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸಿದರೆ ಜನತೆಗೆ ಮೂಲಸೌಕರ್ಯ ಒದಗಿಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಆತ್ಮಗೌರವಕ್ಕಾಗಿ ಜೆಡಿಎಸ್‌

ಕಾಂಗ್ರೆಸ್‌ ಹಾಗೂ ಬಿಜೆಪಿ ಸರಕಾರಗಳು ಭ್ರಷ್ಟಚಾರದಲ್ಲಿ ನಿರತವಾಗಿವೆ ಹೊರತು ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿಲ್ಲ. ಯುವ ಜನತೆಯಲ್ಲಿ ದೇಶಾಭಿಮಾನದೊಂದಿಗೆ, ಆತ್ಮಗೌರವ ಮೂಡಿಸಬೇಕಾಗಿದೆ. ಬಂಗಾರಪ್ಪ ಅವರ ಕನಸು ನನಸಾಗಿಸಲು ಗೀತಾ ಶಿವರಾಜ್‌ಕುಮಾರ್‌ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ನಿಂತಿದ್ದಾರೆ. ಜನತೆ ಬಂಗಾರಪ್ಪ ಅವರ ಮೇಲಿಟ್ಟಿರುವ ವಿಶ್ವಾಸಕ್ಕೆ ದ್ರೋಹವಾಗದಂತೆ ಗೀತಾ ಶಿವರಾಜ್‌ಕುಮಾರ್‌ ಅವರು ಕೆಲಸ ಮಾಡುತ್ತಾರೆ. ಅದಕ್ಕಾಗಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳನ್ನು ಲೋಕಸಭೆಯ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಶಾಸಕ ಮಧು ಬಂಗಾರಪ್ಪ ಅವರು ಹೇಳಿದರು.

ನಟ ಹಾಗೂ ಗೀತಾ ಶಿವರಾಜ್‌ಕುಮಾರ್‌ ಅವರ ಪತಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮಾತನಾಡಿ, ಬಂಗಾರಪ್ಪನವರ ಆಸೆಯಂತೆ, ಸಮಾಜ ಸೇವೆ ಮಾಡಲು ಗೀತಾ ಶಿವರಾಜ್‌ಕುಮಾರ್‌ ಚುನಾವಣೆಗೆ ನಿಂತಿದ್ದಾರೆ ಎಂದರು. ಅನಂತರ 'ಜೋಗಿ' ಚಿತ್ರದ ಬೇಡುವೆನು ತಾಯಿ ವರವನ್ನು ಕೊಡು ಎಂದು ಹಾಡುವ ಮೂಲಕ ಜನರನ್ನು ರಂಚಿಸಿ, ಮತ ಯಾಚಿಸಿದರು.

ಅಪಾರ ಸಂಖ್ಯೆಯ ಜನರು ನಟ ಶಿವರಾಜ್‌ ಕುಮಾರ್‌ ಹಾಗೂ ನಟಿ ಸಂಜನಾ ಅವರನ್ನು ನೋಡಲು ಜನ ಮುಗಿಬಿದ್ದರು. ಜನರನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು. ನಟ ಉಪೇಂದ್ರ ಬರದೆ ಇದ್ದುದರಿಂದ ಅಪಾರ ಸಂಖ್ಯೆಯ ಜನತೆಗೆ ನಿರಾಸೆಯಾಯಿತು.

ನಟಿ ಸಂಜನಾ, ಉಡುಪಿ ಜಿಲ್ಲಾ ಜನತಾ ದಳ (ಜಾ) ಜಿಲ್ಲಾಧ್ಯಕ್ಷ ದೇವಿಪ್ರಸಾದ ಶೆಟ್ಟಿ, ಜನತಾ ದಳ ಕಾರ್ಯಾಧ್ಯಕ್ಷ ಗುಲಾಂ ಅಹಮ್ಮದ್‌, ಪಕ್ಷದ ಮುಖಂಡ ರಾಜೀವ ಕೋಟ್ಯಾನ್‌, ಉದ್ಯಮಿ ವಿ.ಕೆ. ಮೋಹನ್‌, ಶಾಲಿನಿ ಶೆಟ್ಟಿ, ವೇದ ಶೆಟ್ಟಿ, ಬೈಂದೂರು ಕ್ಷೇತ್ರಾಧ್ಯಕ್ಷ ರಂಜಿತ್‌ಕುಮಾರ್‌ ಶೆಟ್ಟಿ, ಮಹಾಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅಡಿಗ, ಜಿಲ್ಲಾ ಸಂಚಾಲಕ ಸಬ್ಲಾಡಿ ಮಂಜಯ್ಯ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಜಗದೀಶ ಯಡಿಯಾಳ, ಪ್ರಧಾನ ಕಾರ್ಯದರ್ಶಿ ಚಿಟ್ಟೆ ರಾಜಗೋಪಾಲ ಹೆಗ್ಡೆ, ಪಕ್ಷದ ವಕ್ತಾರ ಜಾಂಬೂರು ರತ್ನಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com