ಗೆದ್ದಾಗಲೂ ಸೋತಾಗಲೂ ಜನರಿಗೆ ಸ್ಪಂದಿಸುತ್ತಿದ್ದೆ ಹೆಗ್ಡೆ

ಬ್ರಹ್ಮಾವರ : ಹಿಂದಿನ ಚುನಾವಣೆಗಳಲ್ಲಿ ಗೆದ್ದರೂ ಸೋತರೂ ಜನರ ಮಧ್ಯೆಯೇ ಇದ್ದು ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದೆ. ಮತದಾರರ ಗೌರವಕ್ಕೆ ಧಕ್ಕೆ ಬಾರದ ಹಾಗೆ ಕೆಲಸ ನಿರ್ವಹಿಸಿದ್ದೇನೆ. ಮುಂದೆಯೂ ನಿರ್ವಹಿಸುತ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಬ್ರಹ್ಮಾವರದಲ್ಲಿ ಹಮ್ಮಿಕೊಂಡ ಸಾರ್ವಜನಿಕ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

ಹಿಂದೆ ಮನೆ ಅಡವಿಟ್ಟು ಸಕ್ಕರೆ ಕಾರ್ಖಾನೆ ನಡೆಸಿದ್ದೇವೆ. ಕಳೆದ ಕೇವಲ 1 ವರ್ಷ 11 ತಿಂಗಳ ಸಂಸತ್‌ ಸದಸ್ಯನ ಅವಧಿಯಲ್ಲಿ ಹತ್ತು ಹಲವು ವಿಚಾರಗಳನ್ನು ಅಧಿವೇಶನದಲ್ಲಿ ಮುಂದಿಟ್ಟು ಪರಿಹಾರ ಕಂಡುಕೊಳ್ಳಲು ಯಶಸ್ವಿಯಾಗಿದ್ದೇನೆ ಎಂದರು.

ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ದೇಶದ ಸಾರ್ವಭೌಮಕ್ಕೆ ಧಕ್ಕೆ ತರುವ ಕಾರ್ಯ ಬಿಜೆಪಿಯಿಂದ ಆಗುತ್ತಿದೆ. ಜಾತಿ, ಧರ್ಮದ ಮೂಲಕ ಸಮಾಜ ಒಡೆದು ಸಂಘರ್ಷ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಶಾಸಕ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ದೇಶದ 130 ಕೋಟಿ ಜನರನ್ನು ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಇದ್ದರೆ ಅದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಮಾತನಾಡಿ, ಇದು ಕಾರ್ಪೋರೇಟ್‌ ವಲಯ ಸೃಷ್ಟಿಸಿದ ಕೃತಕ ಮೋದಿ ಅಲೆ. ಸಿದ್ಧರಾಮಯ್ಯನವರು ನೀಡಿದ ಜನಪರ ಯೋಜನೆಗಳು ಕಾಂಗ್ರೆಸ್‌ ಅಲೆ ಅಲ್ಲವಾ ಎಂದು ಪ್ರಶ್ನಿಸಿದರು.

ಎಂ.ಎ. ಗಫೂರ್‌, ಬಿ. ಭುಜಂಗ ಶೆಟ್ಟಿ, ಜನಾರ್ದನ ತೋನ್ಸೆ, ಎನ್‌. ರಮೇಶ್‌ ಶೆಟ್ಟಿ, ಅಮೃತ್‌ ಶೆಣೈ, ಸುಂದರ್‌ ನಾಯ್ಕ, ಗೋಪಿ ಕೆ. ನಾಯ್ಕ, ವೆರೋನಿಕಾ ಕರ್ನೇಲಿಯೊ, ಮಲ್ಲಿಕಾ ಬಿ. ಪೂಜಾರಿ, ಮಲ್ಲಿಕಾ ಅಶೋಕ್‌, ರೆಹಮತುಲ್ಲಾ, ವಿಕಾಸ್‌ ಶೆಟ್ಟಿ, ಎಲ್ಲೂರು ಶಶಿಧರ ಶೆಟ್ಟಿ, ವಿಠಲ್‌ ಪೂಜಾರಿ, ಉಷಾ ಕೆ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಸ್ತಾವನೆಗೈದರು. ದಿನಕರ ಹೇರೂರು ಸ್ವಾಗತಿಸಿ, ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜೇಶ್‌ ಶೆಟ್ಟಿ ಬಿರ್ತಿ ವಂದಿಸಿದರು. ಹರೀಶ್‌ ಶೆಟ್ಟಿ ಚೇರ್ಕಾಡಿ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com