ವಿ. ಮನೋಹರ್‌ ಕೊಲ್ಲೂರು ಭೇಟಿ

ಕೊಲ್ಲೂರು : ಇಂದು ಪ್ರೇಕ್ಷಕರು ಟಿ.ವಿ. ರೇಡಿಯೋ ಮುಂತಾದ ಮಾದ್ಯಮಗಳ ಮೂಲಕ ಎಲ್ಲ ಭಾಷೆಯ ಹಾಡು ಕೇಳಿ ಆ ಮೂಲಕ ವಿವಿಧ ಹಾಡುಗಳ ಲಯ, ತಾಳ ಅರಿತಿದ್ದಾರೆ. ಆದುದರಿಂದ ಇಂತಹ ಸಮುದ್ರದಲ್ಲಿ ಕನ್ನಡ ಸಂಗೀತ ನಿರ್ದೇಶಕರು ಗೆಲ್ಲಲು ಸವಾಲು ಎದುರಿಸುವಂತಾಗಿದೆ ಎಂದು ಖ್ಯಾತ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ವಿ. ಮನೋಹರ್‌ ಹೇಳಿದರು.

ಎ. 1ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಅನಂತರ ಉದಯವಾಣಿಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಅವರು, ಈ ವರೆಗೆ 130 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಸಂಗೀತ ಪ್ರೇಮಿಗಳಿಗೆ ಇಂಪಾದ ಹಾಡು ನೀಡಿರುವ ತೃಪ್ತಿ ಇದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೊಸ ಪ್ರಯೋಗ ಮಾಡುವ ಆಸಕ್ತಿಯಿರುವ ನಿರ್ದೇಶಕರಿಗೆ ನಿರ್ಮಾಪಕರು ಬೆಂಬಲ ನೀಡುವ ಅಗತ್ಯವಿದೆ. ಚಿತ್ರಗಳಿಗೆ ಹಣ ಹೂಡುವ ಅವರ ನಿರ್ಧಾರ ಅಚಲವಾಗಿದ್ದಲ್ಲಿ ಮಾತ್ರ ತಮಿಳು ಚಿತ್ರಗಳಂತೆ ಹೊಸ ಪ್ರಯೋಗ ನಡೆಸಲು ಸಾದ್ಯ ಎಂದರು.

ರಾಜ್ಯದಲ್ಲಿ ಸಿನಿಮಾ ಮಂದಿರಗಳನ್ನು ಮುಚ್ಚುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ಅದರ ಬದಲು ಹೊಸ ಹೊಸ ಟಾಕೀಸುಗಳನ್ನು ಕಟ್ಟುವ ಕೆಲಸ ಆಗಬೇಕು. ಆಂಧ್ರ ಹಾಗೂ ತಮಿಳುನಾಡಿನಲ್ಲಿ 2 ಸಾವಿರ ಚಿತ್ರಮಂದಿರಗಳಿದ್ದು, ರಾಜ್ಯದಲ್ಲಿ ಅವುಗಳ ಸಂಖ್ಯೆ ಕೇವಲ 700 ಮಾತ್ರ. ಫಿಲಂ ಛೇಂಬರ್‌ ಈ ಬಗ್ಗೆ ಚಿಂತಿಸಬೇಕಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಾತ್ಮಕ ಚಿತ್ರ ತೆರೆಕಂಡಿವೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಮೂಲಕ ಯುವ ಪೀಳಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಕಲಾತ್ಮಕ ಚಿತ್ರಗಳ ಬಗ್ಗೆ ಗಮನ ಸೆಳೆದಾಗ, ಪ್ರೇಕ್ಷಕರನ್ನು ತಲುಪುವ ಮಟ್ಟದಲ್ಲಿ ಅಂತಹ ಚಿತ್ರಗಳು ತೆರೆಕಾಣಬೇಕು. ಪಿ. ಶೇಷಾದ್ರಿಯ 'ಡಿಸೆಂಬರ್‌ - 1' ಎಂಬ ಚಿತ್ರ ಹೊಸ ಅಭಿರುಚಿಯ ಅಲೆ ಎಬ್ಬಿಸಿದೆ. ಹೊಸ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದು, 'ಗೀತಾ ಬ್ಯಾಂಗಲ್‌ ಸ್ಟೋರ್‌', ಟಿಪಿಕಲ್‌ ಕೈಲಾಸ' ತೆರೆಕಾಣಲಿದೆ. ಹೊಸ ಪ್ರಯೋಗಾತ್ಮಕ ಚಿತ್ರಗಳಲ್ಲಿ ಬೊಂಬೆಗಳ ಲವ್‌, ಚಾರ್‌ಮಿನಾರ್‌, ಮೈನಾ, ಲೂಸಿಯಾ ಜನ ಮೆಚ್ಚುಗೆ ಪಡೆದಿದೆ ಎಂದರು.

ಸಿನಿಮಾ ನಿರ್ದೇಶಿಸುವ ಇರಾದೆ

2014ರ ಅಂತ್ಯದೊಳಗೆ ಹೊಸ ಕನ್ನಡ ಚಿತ್ರ ನಿರ್ದೇಶಿಸುವ ಬಗ್ಗೆ ಚಿಂತನೆ ನಡೆದಿದ್ದು, ತನ್ನ ನಿರ್ದೇಶನದ ಈ ಚಿತ್ರದಲ್ಲಿ ಯುವ ಪ್ರತಿಭಾವಂತ ಕಲಾವಿದರನ್ನು ಬೆಳ್ಳಿ ತೆರೆಗೆ ಪರಿಚಯಿಸುವ ಆಶಯ ವ್ಯಕ್ತಪಡಿಸಿದರು.

ಕೊಲ್ಲೂರು ದೇವಳದ ವತಿಯಿಂದ ವಿ. ಮನೋಹರ್‌ ದಂಪತಿಯನ್ನು ಸಮ್ಮಾನಿಸಲಾಯಿತು. ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com