ಮೋದಿ ಅನಿವಾರ್ಯ: ಶೋಭಾ ಕರಂದ್ಲಾಜೆ

ಕುಂದಾಪುರ: ದೇಶದ ರಕ್ಷಣೆ, ಭದ್ರತೆಯೇ ಮೊದಲ್ಗೊಂಡು ದೇಶವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಾಣಬೇಕಾದರೆ ಈ ಬಾರಿ ಮೋದಿಯವರನ್ನು ಪ್ರಧಾನಿಯಾಗಿಸಬೇಕು. ದೇಶಕ್ಕಾಗಿ ಮೋದಿ ಅನಿವಾರ್ಯವಾಗಿರುವ ಈ ಸಮಯದಲ್ಲಿ ಪ್ರತಿಯೊಬ್ಬರು ಕಮಲದ ಗುರುತಿಗೆ ಮತ ಹಾಕುವುದರ ಮೂಲಕ ಕೇಂದ್ರದಲ್ಲಿ ಬಿಜೆಪಿ ನೇತ್ರತ್ವದ ಸರಕಾರ ರಚಿಸಲು ಸಹಕರಿಸಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
  ಅವರು ಕುಂದಾಪುರದ ನಗರದಲ್ಲಿ ಪಾದಯಾತ್ರೆ ನಡೆಸಿದ ಬಳಿಕ ಶಾಸ್ತ್ರ ವೃತ್ತದಲ್ಲಿ ನೆರೆದ ಕಾರ್ಯಕರ್ತರು ಹಾಗೂ ಜನಸಾಮಾನ್ಯರನ್ನು ಉದ್ಧೇಶಿಸಿ ಮಾತನಾಡಿದರು.

ದೇಶದ ಗಡಿಯಲ್ಲಿ ಆಕ್ರಮಣ ಹೆಚ್ಚಿದೆ. ಭಯೋತ್ಪಾದನೆ ಮನೆ ಅಂಗಳಕ್ಕೆ ಬಂದು ನಿಂತಿದೆ. ಪಾಕಿಸ್ತಾನ ಮತ್ತು ಚೀನಾ ಗಡಿಯನ್ನು ಇಂಚಿಂಚು ಆಕ್ರಮಿಸುತ್ತಾ ಹೋಗುತ್ತಿದೆ. ಆದರೆ ದೇಶವನ್ನು ನಡೆಸುವ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ಮೋದಿ ನೇತ್ರತ್ವದ ಸರಕಾರ ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಈ ಬಾರಿ ನನ್ನು ಲೋಕಸಭೆಗೆ ಆರಿಸಿ ಕಳುಹಿಸಿದ್ದಲ್ಲಿ ಈ ಎರಡು ಜಿಲ್ಲೆಗಳ ಅಭಿವೃದ್ಧಿಯಲ್ಲಿ ಹಾಗೂ ಕರಾವಳಿಯ ಮೀನುಗಾರರ, ಅಡಿಕೆ ಬೆಳೆಗಾರರ, ರೈತರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಿ ಸಮಸ್ಯೆಗಳ ಪರಿಹರಿಸುವಲ್ಲಿ ಬದ್ಧನಾಗಿರುತ್ತೇನೆ. ಇದಕ್ಕೆ ಜನತೆ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಶ್ಯಾಮಲಾ ಕುಂದರ್‌, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಮೀನುಗಾರರ ಪ್ರಕೋಷ್ಟ ಅಧ್ಯಕ್ಷ ಬಿ.ಕಿಶೋರ್‌ ಕುಮಾರ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್‌ ಕಾವೇರಿ, ಬಿಜೆಪಿ ಮುಖಂಡ ಕಿರಣ್‌ ಕೊಡ್ಗಿ, ಸುಧೀರ್‌ ಕುಮಾರ್‌ ಶೆಟ್ಟಿ, ಜಿ.ಪಂ.ಸದಸ್ಯರಾದ ಗಣಪತಿ ಟಿ.ಶ್ರೀಯಾನ್‌, ಪ್ರಕಾಶ್‌ ಮೆಂಡನ್‌, ಸುನೀತಾ ರಾಜಾರಾಂ.ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com