ಕುಂದಾಪುರದಲ್ಲಿ ಬೃಹತ್‌ ಬಿಜೆಪಿ ಮಹಿಳಾ ಸಮಾವೇಶ

ಕುಂದಾಪುರ: ಕುಂದಾಪುರ ನೆಹರೂ ಮೈದಾನಿನಲ್ಲಿ ಬುಧವಾರ ಬೃಹತ್‌ ಬಿಜೆಪಿ ಮಹಿಳಾ ಸಮಾವೇಶ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಮಹಿಳೆಯರು ಈ ಸಮಾವೇಶಕ್ಕೆ ವಿಶೇಷವಾದ ರಂಗನ್ನು ನೀಡಿದರು.
      ಕಳೆದ 67 ವರ್ಷಗಳ ಕಾಲ ಈ ದೇಶದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೂ ಭಾರತ ಮಾತ್ರ ಸೋತಿತು. 67 ವರ್ಷಗಳ ಕಾಲ ಈ ದೇಶವನ್ನು ನೆಹರು ಕುಟುಂಬದ ನಾಯಕತ್ವ ಗೆದ್ದಿತಾದರೂ ಭಾರತ ಮಾತ್ರ ಸೋತಿತು. 67 ವರ್ಷಗಳ  ಕಾಲ ಕಾಂಗ್ರೆಸ್‌ ಭ್ರಷ್ಟಾಚಾರಗಳ ಮೂಲಕ ದೇಶವನ್ನು ನಿರಂತರವಾಗಿ ಲೂಟಿ ಮಾಡುತ್ತಾ ದೇಶದ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಿತು. ಒಡೆದು ಆಳುವ ನೀತಿಯಿಂದ ದೇಶವೇ ಇಂದು ಸತ್ತು ಹೋಗಿದೆ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್‌ ಹೇಳಿದರು.
ಅವರು ಎ. 9ರಂದು ಕುಂದಾಪುರ ನೆಹರೂ ಮೈದಾನದಲ್ಲಿ ಜರಗಿದ ಬೃಹತ್‌ ಬಿಜೆಪಿ ಮಹಿಳಾ ಸಮಾವೇಶ ಉದ್ಧೇಶಿಸಿ ಮಾತನಾಡಿದರು. ದೇಶದ ಸತ್ವವನ್ನು ಉಳಿಸುವಲ್ಲಿ ಸತತ ವಿಫಲತೆ ಕಂಡ ಕಾಂಗ್ರೆಸ್‌ ಪಕ್ಷಕ್ಕೆ ಇನ್ನೂ ಜ್ಞಾನೋದಯ ಆಗದಿರುವುದು ಮಾತ್ರ ವಿಪರ್ಯಾಸ. ಭಾರತೀಯ ನಾಯಕತ್ವದಲ್ಲಿ ಶಕ್ತಿ ಇಲ್ಲ ಎಂದು ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಗಡಿ ಪ್ರದೇಶದ ದೇಶಗಳು ದೇಶವನ್ನು ಆಕ್ರಮಣ ಮಾಡುತ್ತಿರುವುದನ್ನು ಗಮನಿಸಿದರೆ ಅರ್ಥವಾಗುತ್ತದೆ. ಇಂದು ವಿದೇಶಿ ಶಕ್ತಿಗಳು ಅಟ್ಟಹಾಸದಿಂದ ಮರೆಯುತ್ತಿದೆ. ದಿನದಿಂದ ದಿನಕ್ಕೆ ದೇಶ ಮಾಯವಾಗುತ್ತಾ ಹೋಗುತ್ತಾ ಇದೆ. ಇದನ್ನೆಲ್ಲಾ ಹಿಮ್ಮೆಟ್ಟಿಸಲು ಮೋದಿಯಂತಹ ನಾಯಕ ದೇಶದ ಚುಕ್ಕಾಣಿ ಹಿಡಿಯಬೇಕಾಗಿದೆ. ದೇಶದ ಮುನ್ನೂರು ಸಂಸದರು ಅವರ ಕೈಯನ್ನು ಬಲಪಡಿಸಬೇಕಾಗಿದೆ ಎಂದರು.

ಭಾರತಿಯರದ್ದು ಮತಾಂಧ ಹಿಂದುತ್ವವಲ್ಲ, ಮಾನವೀಯತೆಯ ಹಿಂದುತ್ವ. ಸೌಹಾರ್ದ, ಸಹಿಷ್ಣುತೆಯನ್ನು ವಿಶ್ವಕ್ಕೆ ಪಸರಿಸಿದ ಮಾನವ ಧರ್ಮದಲ್ಲಿಯೇ ಶ್ರೇಷ್ಠತೆ ಪಡೆದ ಹಿಂದುತ್ವಕ್ಕೆ ಕಳಂಕ ತರುವ ಕೆಲಸವನ್ನು ವಿಚ್ಛಿದ್ರಕಾರಿ ಶಕ್ತಿಗಳು ಇಂದು ರಾಷ್ಟ್ರದಲ್ಲಿ ಮಾಡುತ್ತಿರುವುದು ತಲೆ ತಗ್ಗಿಸುವ ವಿಚಾರ. ದೇಶದ ಅಖಂಡತೆ, ಸಮಗ್ರತೆಗೆ ನೆರೆಯ ದೇಶಗಳು ಭಂಗ ತರುತ್ತಿದ್ದರೂ ಆಡಳಿತರೂಢ ಸರಕಾರ ಮೌನ ವಹಿಸಿರುವುದು ವಿಪರ್ಯಾಸದ ಸಂಗತಿ. ದೇಶದ ಸಮಗ್ರತೆ, ಭದ್ರತೆ, ಐಕ್ಯತೆ ಪ್ರತಿನಿಧಿಸುವ ವ್ಯಕ್ತಿಗಾಗಿ ಮಹಿಳೆಯರು ನರೇಂದ್ರ ಮೋದಿಯನ್ನು ಗೆಲ್ಲಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಈ ಚುನಾವಣೆಯಲ್ಲಿ ವ್ಯಕ್ತಿ ಅಥವಾ ಪಕ್ಷವನ್ನು ಪ್ರಾಮುಖ್ಯವಾಗಿರಿಸದೇ ದೇಶದ ರಕ್ಷಣೆ, ಅಭದ್ರತೆ ತೊಡೆದುಹಾಕಿ ಅಭಿವೃದ್ಧಿಯ ಚಿಂತನೆ ನಡೆಸುವ ನಾಯಕತ್ವದ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಕೇಂದ್ರದಲ್ಲಿ ಸುಸ್ಥಿರ ಸರಕಾರಕ್ಕಾಗಿ ಮೋದಿಯನ್ನು ಸಮಸ್ತ ಜನರು ಬೆಂಬಲಿಸಬೇಕಾದ ಅಗತ್ಯತೆ ಇದೆ. ಈ ಬಾರಿ ಮೋದಿ ಅಲೆ ಇದೆ ಅದನ್ನು ಬಲೆ ಹಾಕಿ ಸೆಳೆದುಕೊಳ್ಳುವ ಮೂಲಕ ನಾವೆಲ್ಲ ದೇಶ ಕಟ್ಟೋಣ ಎಂದರು.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ರಕ್ಷಣೆ, ಭದ್ರತೆಯ ಜೊತೆ ಜೊತೆಗೆ ಅಭಿವೃದ್ಧಿಯಾಗಬೇಕಾಗಿದೆ. ದೇಶದ ದಿಕ್ಕನ್ನು ಬದಲಾಯಿಸುವ ಶಕ್ತಿ ಮಹಿಳೆಯರಿಗೆ ಇದೆ ಎಂದು ಹೇಳಿದರು.

ಕಳೆದ ಹತ್ತು ವರ್ಷ ದೇಶವನ್ನಾಳಿದ ಯುಪಿಎ ಸರಕಾರ ಸಾಧಿಸಿದ್ದಾದರೂ ಏನು? ದೇಶದ ರಕ್ಷಣೆ, ಅಭಿವೃದ್ಧಿಗೆ ಏನೂ ಚಿಂತನೆ ನಡೆಸದ ಕಾಂಗ್ರೆಸ್‌ ನೇತೃತ್ವದ ಸರಕಾರ ದೇಶದ ಗಡಿರಕ್ಷಣೆ, ನಕ್ಸಲ್‌ ಸಮಸ್ಯೆ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಳೆದ ಐದು ವರ್ಷಗಳ ಕಾಲ ರಾಜ್ಯ ಆಳಿದ ಬಿಜೆಪಿ ಸರಕಾರ ಅನೇಕ ಯೋಜನೆಗಳ ಮೂಲಕ ಜನಹಿತ ಕಾರ್ಯ ಮಾಡಿದೆ. ಆದರೆ ಕಾಂಗ್ರೆಸ್‌ ಸರಕಾರ ಒಂದು ಕೋಮಿನ ಜನರನ್ನು ಓಲೈಕೆಗೆ ಶಾದಿಭಾಗ್ಯ, ಶಾಲಾ ಪ್ರವಾಸ ಕಾರ್ಯಕ್ರಮಗಳನ್ನು ತಂದಿರುವುದು ವಿಪರ್ಯಾಸ ಎಂದರು.

ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಪಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾ. ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ, ಉಡುಪಿ ತಾ. ಪಂ ಅಧ್ಯಕ್ಷೆ ಗೌರಿ ಪೂಜಾರಿ, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸಾಧು, ಜಿ. ಪಂ. ಸದಸ್ಯರಾದ ಸುನೀತಾ ರಾಜಾರಾಂ. ಜ್ಯೋತಿ ಶೆಟ್ಟಿ, ಪುರಸಭೆ ಸದಸ್ಯರಾದ ಗೀತಾ, ಸಿಸಿಲಿ ಕೋಟ್ಯಾನ್‌, ಪೂರ್ಣಿಮಾ, ರಮಣಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಮೊರ್ಚಾ ಪ್ರಧಾನ ಕಾರ್ಯದರ್ಶಿ ಗೌರಿ ಶಿವಾನಂದ ಸ್ವಾಗತಿಸಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸ್ವಾಗತಿಸಿ, ಮಹಿಳಾ ಮೋರ್ಚಾದ ಮಾಲಿನಿ ಸತೀಶ್‌ ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com