28 ಕ್ಷೇತ್ರಗಳಲ್ಲಿ 435 ಅಭ್ಯರ್ಥಿಗಳು

ಬೆಂಗಳೂರು: ಲೋಕಸಭೆ ಚುನಾವಣಾ ಅಖಾಡಕ್ಕಿಳಿದಿರುವ ಕಲಿಗಳ ಸ್ಪಷ್ಟ ಚಿತ್ರಣ ಹೊರಬಿದ್ದಿದ್ದು ,ರಾಜ್ಯದ 28 ಕ್ಷೇತ್ರಗಳಲ್ಲಿ ಅಂತಿಮವಾಗಿ 23 ಮಹಿಳೆಯರು ಸೇರಿ 435 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಶನಿವಾರ 109 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್‌ ಪಡೆದಿದ್ದಾರೆ. ಉತ್ತರ ಕನ್ನಡ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಮಾಜಿ ಸಚಿವ ಶಿವಾನಂದ ನಾಯ್ಕ ,ತುಮಕೂರು ಕ್ಷೇತ್ರದ ಜೆಡಿಯು ಅಭ್ಯರ್ಥಿ ಇಂತಿಯಾಜ್‌ ಅಹ್ಮದ್‌ ಕಣದಿಂದ ಹಿಂದಕ್ಕೆ ಸರಿದವರಲ್ಲಿ ಪ್ರಮುಖರು.

ಈ ಬಾರಿಯ ಚುನಾವಣಾ ಕಣದಲ್ಲಿ ಓರ್ವ ಮಾಜಿ ಪ್ರಧಾನಿ , ಐವರು ಮಾಜಿ ಮುಖ್ಯಮಂತ್ರಿಗಳು, ಇಬ್ಬರು ಕೇಂದ್ರ ಸಚಿವರು , ಓರ್ವ ಹಾಲಿ ಸಚಿವ, ಐವರು ಶಾಸಕರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿಹೆಚ್ಚು 26 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರೆ, ಗುಲ್ಬರ್ಗ ಕ್ಷೇತ್ರದಲ್ಲಿ ಅತಿ ಕಡಿಮೆ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ, ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌, ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ , ಧರಂಸಿಂಗ್‌, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ , ಆಧಾರ್‌ ಖ್ಯಾತಿಯ ನಂದನ್‌ ನಿಲೇಕಣಿ, ಜೆಡಿಎಸ್‌ನಿಂದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ,ಮಾಜಿ ಸಚಿವ ಎ.ಕೃಷ್ಣಪ್ಪ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ಕುಮಾರ್‌, ನಿವೃತ್ತ ಉಪ ಲೋಕಾಯುಕ್ತ ನ್ಯಾ.ಚಂದ್ರಶೇಖರಯ್ಯ,ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಕಣಕ್ಕಿಳಿದಿರುವ ಪ್ರಮುಖರು. ಚಿತ್ರರಂಗದಿಂದ ನಟಿ ರಮ್ಯ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿದ್ದಾರೆ.

ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ 28 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರೆ ಜೆಡಿಎಸ್‌ 25 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಆಮ್‌ ಆದ್ಮಿ ಪಾರ್ಟಿ, ಬಿಎಸ್‌ಪಿ, ಸಂಯುಕ್ತ ಜನತಾದಳ, ಸಿಪಿಐ(ಎಂ) ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ರಾಜ್ಯದ 28 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಏ.17 ರಂದು ಮತದಾನ ನಡೆಯಲಿದ್ದು, ಮೇ 16 ರಂದು ಫ‌ಲಿತಾಂಶ ಹೊರಬೀಳಲಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಅಭ್ಯರ್ಥಿಗಳು

*ಚಿಕ್ಕೋಡಿ-12
*ಬೆಳಗಾವಿ-15
*ಬಾಗಲಕೋಟೆ-13
*ಬಿಜಾಪುರ-14
*ಗುಲ್ಬರ್ಗಾ-8
*ರಾಯಚೂರು-11
*ಬೀದರ್‌-24
*ಕೊಪ್ಪಳ-16
*ಬಳ್ಳಾರಿ-12
*ಹಾವೇರಿ-19
*ಧಾರವಾಡ-17
*ಉತ್ತರ ಕನ್ನಡ-9
*ದಾವಣಗೆರೆ-19
*ಶಿವಮೊಗ್ಗ-13
*ಉಡುಪಿ-ಚಿಕ್ಕಮಗಳೂರು-11
*ಹಾಸನ-14
*ದಕ್ಷಿಣ ಕನ್ನಡ-14
*ಚಿತ್ರದುರ್ಗ-14
*ತುಮಕೂರು-16
*ಮಂಡ್ಯ-16
*ಮೈಸೂರು-15
*ಚಾಮರಾಜನಗರ-14
*ಬೆಂಗಳೂರು ಗ್ರಾಮಾಂತರ-15
*ಬೆಂಗಳೂರು ಉತ್ತರ-14
*ಬೆಂಗಳೂರು ಸೆಂಟ್ರಲ್‌-26
*ಬೆಂಗಳೂರು ದಕ್ಷಿಣ-23
*ಚಿಕ್ಕಬಳ್ಳಾಪುರ-19
*ಕೋಲಾರ-22
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com