ಬದಲಾವಣೆಗಾಗಿ ಮೋದಿಗೆ ಮತ ನೀಡಿ: ಆಡ್ವಾಣಿ ಕರೆ

ಅಹಮದ್‌ನಗರ (ಮಹಾರಾಷ್ಟ್ರ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರವಾಗಿ ಮಾಜಿ ಉಪ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ ಆಡ್ವಾಣಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಮೊದಲ ಬಾರಿಗೆ ಸಾರ್ವಜನಿಕ ರಾಲಿಯಲ್ಲಿ ಕಾಣಿಸಿಕೊಂಡ ಆಡ್ವಾಣಿ, ಅಹಮದ್‌ನಗರದ ಹಾಲಿ ಬಿಜೆಪಿ ಸಂಸದ ದಿನೇಶ್‌ ಗಾಂಧಿ ಅವರ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ `ಮೋದಿಗಾಗಿ ಮತ ಚಲಾಯಿಸಿ, ಬದಲಾವಣೆಗಾಗಿ ಮತ ಹಾಕಿ’ ಎಂದು ಅವರು ಕರೆ ನೀಡಿದರು.

”ದೇಶಕ್ಕೀಗ ಬದಲಾವಣೆ ಬೇಕು. ಬರೀ ಘೋಷಣೆಯಷ್ಟೇ ಸಾಲದು, ಕೆಲಸ ಮಾಡುವವರು ಬೇಕು. ಆದ್ದರಿಂದ ಬದಲಾವಣೆಗಾಗಿ ಮತಹಾಕಿ. ಮೋದಿಗಾಗಿ ಮತ ಚಲಾಯಿಸಿ” ಎಂದು ಆಡ್ವಾಣಿ ನುಡಿದರು. ಈ ಮೂಲಕ ಮೋದಿ ಜತೆಗಿನ ಶೀತಲ ಸಮರಕ್ಕೆ ತೆರೆಯನ್ನೂ ಎಳೆದರು.

ಉಭಯ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಮಾಧ್ಯಮ ವಲಯದಲ್ಲಿವೆ. ಮೋದಿ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ತಮ್ಮ ಸಾಂಪ್ರದಾಯಿಕ ಗಾಂಧಿನಗರ ಕ್ಷೇತ್ರದ ಬದಲು ಭೋಪಾಲದಿಂದ ಸ್ಪರ್ಧಿಸಲು ಬಯಸಿದ್ದ ಆಡ್ವಾಣಿ, ಅದಕ್ಕಾಗಿ ಪಟ್ಟು ಹಿಡಿದಿದ್ದರು. ಆದರೆ ಪಕ್ಷದ ನಾಯಕತ್ವ ಪರಿಸ್ಥಿತಿಯನ್ನು ತಿಳಿಗೊಳಿಸಿ ಆಡ್ವಾಣಿ ಅವರಿಗೆ ಗಾಂಧಿನಗರದಿಂದಲೇ ಟಿಕೆಟ್‌ ನೀಡಿತ್ತು.

1991ರಿಂದಲೂ ಗುಜರಾತ್‌ನ ಗಾಂಧಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಆಡ್ವಾಣಿ, ಮೋದಿ ಅವರ ಹಂಗು ಬೇಡವೆಂದು ಭೋಪಾಲ್‌ಗೆ ಬದಲಾಯಿಸಿಕೊಳ್ಳಲು ಸಜ್ಜಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ, ಮಂಗಳವಾರದ ರಾಲಿಯಲ್ಲಿ ಮೋದಿ ನಾಯಕತ್ವವನ್ನು ಬಾಯ್ತುಂಬ ಶ್ಲಾಘಿಸಿದ ಆಡ್ವಾಣಿ, ನರ್ಮದಾ ಯೋಜನೆ, ಕೈಗಾರಿಕೀಕರಣ ಮತ್ತು ಪ್ರತಿ ರೈತನಿಗೂ ನೀರು ಪೂರೈಕೆ, ಸಾರ್ವಜನಿಕ ವಿದ್ಯುತ್‌ ವಿತರಣಾ ವ್ಯವಸ್ಥೆಯ ಸುಧಾರಣೆ, ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಕಾನೂನು-ಸುವ್ಯವಸ್ಥೆಯ ಪಾಲನೆ ಸೇರಿದಂತೆ ಸಮಗ್ರ ರೀತಿಯಲ್ಲಿ ಗುಜರಾತಿನ ಚಹರೆಯನ್ನೇ ಮೋದಿ ಬದಲಿಸಿದ್ದಾರೆ ಎಂದು ಹೊಗಳಿದರು.

ಮನಮೋಹನ್‌ ಸಿಂಗ್‌ ಅವರು ಭಾರತ ಕಂಡ ಅತಿ ದುರ್ಬಲ ಪ್ರಧಾನಿ ಎಂದೂ ಆಡ್ವಾಣಿ ಬಣ್ಣಿಸಿದರು.

ಕೃಪೆ: ಅಂತರ್ಜಾಲ ಮೂಲ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com