ಶೃಂಗೇರಿ ಶೂಟೌಟ್‌ ಪ್ರಕರಣ: ಪರಿಹಾರ ಘೋಷಿಸಿದ್ದಕ್ಕೆ ಹಿಂದು ಸಂಘಟನೆಗಳ ವಿರೋಧ, ಕೋಮು ಸೌಹಾರ್ದ ಮುಖಂಡನ ಮುಖಕ್ಕೆ ಸೆಗಣಿ.

ಮಂಗಳೂರು: ಶೃಂಗೇರಿ ಸಮೀಪದ ತನಿಕೋಡು ಚೆಕ್‌ಪೋಸ್ಟ್‌ ಬಳಿ ನಡೆದ ಶೂಟೌಟ್‌ ಪ್ರಕರಣ ಈಗ ಹಿಂದೂಪರ ಹಾಗೂ ಪ್ರಗತಿಪರ ವೇದಿಕೆಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮೃತ ಕಬೀರ್‌ ಕುಟುಂಬಕ್ಕೆ ರಾಜ್ಯ ಸರಕಾರದಿಂದ 10 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿರುವುದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದೇ ವೇಳೆ, ಮಂಗಳೂರಿನಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ ಭಟ್‌ ಬಾಕ್ರಬೈಲ್‌ ಅವರ ಮುಖಕ್ಕೆ ಗುಂಪೊಂದು ಸೆಗಣಿ ಎರಚಿದೆ. ಈ ಮಧ್ಯೆ, ಶೂಟೌಟ್‌ ಖಂಡಿಸಿ, ಗುರುವಾರ 'ಶೃಂಗೇರಿ ಚಲೋ' ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.

ಮುಖಕ್ಕೆ ಸೆಗಣಿ: ಶೂಟೌಟ್‌ ಖಂಡಿಸಿ ಮಂಗಳೂರಿನ ಜ್ಯೋತಿ ಸರ್ಕಲ್‌ ಬಳಿಯ ಹೋಟೆಲ್‌ನಲ್ಲಿ ಮಂಗಳವಾರ ಕೋಮು ಸೌಹಾರ್ದ ವೇದಿಕೆ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಪತ್ರಿಕಾಗೋಷ್ಠಿ ನಂತರ ಹೊರಬಂದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್‌ ಭಟ್‌ ಬಾಕ್ರಬೈಲ್‌ ಅವರು ಹೋಟೆಲ್‌ನ ಆವರಣದಲ್ಲಿ ಸಂಗಡಿಗರ ಜತೆ ಮಾತನಾಡುತ್ತಿದ್ದರು. ಆ ವೇಳೆ, ಎದುರುಗಡೆಯಿಂದ ಬಂದ ಕೆಲ ಕಿಡಿಗೇಡಿಗಳು ಅವರ ಮುಖಕ್ಕೆ ಸೆಗಣಿ ಎರಚಿ ಪರಾರಿಯಾದರು. ವೇದಿಕೆಯ ಸದಸ್ಯರು ಅವರನ್ನು ಬೆನ್ನಟ್ಟಿ ಒಬ್ಬನನ್ನು ಹಿಡಿಯುವಲ್ಲಿ ಸಫ‌ಲರಾದರು. ಆತ ಎಡಪದವು ನಿವಾಸಿ ಹರೀಶ್‌ ಎನ್ನಲಾಗಿದ್ದು, ಪೊಲೀಸರ ವಶಕ್ಕೆ ನೀಡಲಾಗಿದೆ. ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

ಪರಿಹಾರ ಘೋಷಣೆಗೆ ವಿರೋಧ:

ಈ ನಡುವೆ, ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿಂದೂ ಯುವಸೇನೆ, ಹಿಂದೂ ಜಾಗರಣ ವೇದಿಕೆ, ಬಿಜೆಪಿಯ ಜಿಲ್ಲಾ ಘಟಕ, ವಿಶ್ವ ಹಿಂದೂ ಪರಿಷತ್‌, ಬಜರಂಗದಳಗಳ ನಾಯಕರು, ಕಬೀರ್‌ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಬೀರ್‌ ನಿರಂತರವಾಗಿ ಗೋ ಸಾಗಾಟ ನಡೆಸುತ್ತ ಕಾನೂನಿಗೆ ವಂಚಿಸುತ್ತಿದ್ದ ಅಪರಾಧಿ. ಇಂತವರಿಗೆ ದೇಶಕ್ಕಾಗಿ ಮಡಿದ ಯೋಧರಿಗೆ ನೀಡುವ ರೀತಿಯಲ್ಲಿ ಪರಿಹಾರ ನೀಡುವುದು ಸರಿಯಲ್ಲ. ಈ ಘಟನೆಯನ್ನೇ ನೆಪವಾಗಿಟ್ಟುಕೊಂಡು ನಕ್ಸಲ್‌ನಿಗ್ರಹ ದಳದ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಒಂದು ವೇಳೆ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಾದರೆ ಜಿಲ್ಲೆಯ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗೋಸಾಗಣೆಯನ್ನೂ ಕೂಡ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ನಾಳೆ ಶೃಂಗೇರಿ ಚಲೋ: ಇದೇ ವೇಳೆ, ಶೂಟೌಟ್‌ ಪ್ರಕರಣ ಖಂಡಿಸಿ ಏ.24 ರಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಶೃಂಗೇರಿಯಲ್ಲಿ ರಾಜ್ಯಮಟ್ಟದ 'ಶೃಂಗೇರಿ ಚಲೋ' ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೆ, ಪ್ರಕರಣದ ಆರೋಪಿಗಳನ್ನು ಗಡಿಪಾರು ಮಾಡುವಂತೆ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಒತ್ತಾಯಿಸಿದೆ. ಈ ನಡುವೆ, ಶೂಟೌಟ್‌ ಖಂಡಿಸಿ ವಿಜಾಪುರ, ಮಂಗಳೂರು, ಉಡುಪಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೋಮು ಸೌಹಾರ್ದ ವೇದಿಕೆ ಹಾಗೂ ಸಿಪಿಎಂನಿಂದ ಪ್ರತಿಭಟನೆಗಳು ನಡೆದಿವೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com