ಬಡ ಯುವತಿಗೆ ಕಂಕಣ ಭಾಗ್ಯ. ವಿಶ್ವಕರ್ಮ ಸಮಾಜ ಯುವ ಒಕ್ಕೂಟದ ಶ್ಲಾಘನೀಯ ಕಾರ್ಯ

ಕುಂದಾಪುರ: ಆಕೆಯ ಮನೆಯಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟವಿದೆ. ಕಡು ಬಡತನದಿಂದ ಬಳಲುತ್ತಿದ್ದ ಆ ಯುವತಿಯ ಬದುಕಿನ ಅತ್ಯಂತ ಮಹತ್ವದ ಭೂಮಿಕೆಯನ್ನು ಯುವ ಸಂಘಟನೆಯ ಯುವಕರು ನಿರ್ವಹಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಭಾನುವಾರ ತಾಲೂಕಿನ ಚಿತ್ತೂರಿನಲ್ಲಿ ನಡೆದಿದೆ. 

ಚಿತ್ತೂರು ಗ್ರಾಮದ ಮಾರಣಕಟ್ಟೆಯ ದಿ. ಶೀನ ಆಚಾರ್ಯರ ಪುತ್ರಿ ಸುಶೀಲಾ ಅವರಿಗಿಂದು ಧನ್ಯತಾ ಭಾವ. ಕಣ್ಣಂಚಿನಲ್ಲಿ ಅರಿವಿಲ್ಲದೆ ಆನಂದ ಭಾಷ್ಪ ಜಿನುಗುತ್ತಿತ್ತು. ಯಾರೋ ಹೆತ್ತ ತಾಯಿ ಮಕ್ಕಳು ಅಣ್ಣ-ತಮ್ಮಂದಿರಾಗಿ, ತಂದೆ-ತಾಯಿಗಳಾಗಿ ಆಕೆಯ ಬಾಳಿನಲ್ಲಿ ಬೆಳಕು ಮೂಡಿಸಿದರು. 

ಸುಶೀಲಾ ಕಡು ಬಡ ಯುವತಿ. ಶಿರಸಿ ತಾಲೂಕಿನ ದಾಸನಕೊಪ್ಪ ಚಂದ್ರಶೇಖರ ಆಚಾರ್ಯರ ಪುತ್ರ ಮನೋಹರ ಅವರೊಂದಿಗೆ ಮದುವೆ ನಿಗದಿಯಾಗಿತ್ತು. ಮದುವೆ ಖರ್ಚು ನಿಭಾಯಿಸುವಷ್ಟು ಶಕ್ತಿ ಸುಶೀಲಾ ಮನೆಯವರಿಗಿಲ್ಲ. ಇದನ್ನು ಅರಿತ ಕುಂದಾಪುರ ತಾಲೂಕು ವಿಶ್ವಕರ್ಮ ಯುವ ಒಕ್ಕೂಟದ ಚಿತ್ತೂರು-ಮಾರಣಕಟ್ಟೆ ಘಟಕ ಯುವತಿಯ ನೆರವಿಗೆ ನಿಂತಿತು. ಚಿತ್ತೂರು ಸಮುದಾಯ ಭವನವನ್ನು ಮದುವೆಗೆ ನಿಗದಿಗೊಳಿಸಿತು. ಲಗ್ನಪತ್ರಿಕೆ, ಮದುವೆ ಹಾಲ್ ಬಾಡಿಗೆ, ಬಟ್ಟೆ ಬರೆ, ಹೂ ಮಾಲೆ, ಶಾಮಿಯಾನ, ಕುರ್ಚಿ, ಟೇಬಲ್, ಸೌಂಡ್ ಸಿಸ್ಟಂ, ಭೋಜನ ಎಲ್ಲವನ್ನು ಒದಗಿಸಿತು. 

ಯುವತಿಯ ಕಡೆಯಿಂದ ಒಂದೇ ಒಂದು ರೂ. ಖರ್ಚು ಆಗದ ರೀತಿಯಲ್ಲಿ ಯುವತಿಯನ್ನು ಯುವಕನಿಗೆ ಧಾರೆ ಎರೆದು ಕೊಟ್ಟರು. ಭಾನುವಾರ ಬೆಳಗ್ಗೆ 10.56ರ ಶುಭ ಲಗ್ನ ಮಹೂರ್ತದಲ್ಲಿ ಯುವತಿ ಸುಶೀಲಾ ಮನೋಹರ ಅವರ ಕೈ ಹಿಡಿದರು. ನೆರೆದ ವಿಶ್ವಕರ್ಮ ಯುವ ಒಕ್ಕೂಟದ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿತ್ತು. 

ಸರಳ ರೀತಿಯಲ್ಲಿ ಸಂಪನ್ನಗೊಂಡ ಈ ಮಂಗಳ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಶ್ವಕರ್ಮ ಸಮಾಜ ಬಾಂಧವರು, ಊರ ಗ್ರಾಮಸ್ಥರು ಬಂಧುಗಳಾಗಿ ಅತ್ಯಧಿಕ ಸಂಖ್ಯೆಯಲ್ಲಿ ನೆರೆದು ಮಂಗಳ ಕಾರ್ಯವನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿದರು. 

ಈ ಸಂದರ್ಭ ವಿಶ್ವಕರ್ಮ ಯುವ ಒಕ್ಕೂಟ ಚಿತ್ತೂರು-ಮಾರಣಕಟ್ಟೆ ಘಟಕ ಅಧ್ಯಕ್ಷ ದಿವಾಕರ ಆಚಾರ್ಯ, ಉಪಾಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ, ಜತೆ ಕಾರ್ಯದರ್ಶಿ ವಿಜಯ ಆಚಾರ್ಯ, ಕೋಶಾಧಿಕಾರಿ ಗೋಪಾಲ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಉದಯ ಆಚಾರ್ಯ, ವಿಶ್ವಕರ್ಮ ಯುವ ಒಕ್ಕೂಟದ ತಾಲೂಕು ಅಧ್ಯಕ್ಷ ರಾಜಗೋಪಾಲ ಆಚಾರ್ಯ, ಉಪ್ರಳ್ಳಿ ದೇವಸ್ಥಾನದ ಎರಡನೇ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com