ಎನ್ನಾರೈಗಳಿಗೆ ಸಿಕ್ಕಿದೆ ಓಟಿನ ಹಕ್ಕು: ರಾಜ್ಯದಲ್ಲಿ ಮತದಾರರೇ ಇಲ್ಲ

ಉಡುಪಿ: ಅನಿವಾಸಿ ಭಾರತೀಯರಿಗೆ ಪ್ರಜಾಪ್ರತಿನಿಧಿ ಕಾಯಿದೆ(ತಿದ್ದುಪಡಿ) 2010 ಪ್ರಕಾರ ಮತದಾನದ ಹಕ್ಕು ದೊರೆತಿದ್ದು , ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಲ್ಲಿ ಮಾತ್ರ ಕೇರಳಿಗರೇ ಮುಂಚೂಣಿಯಲ್ಲಿದ್ದಾರೆ...ಉಡುಪಿ ಜಿಲ್ಲೆಯ 2,000 ಅನಿವಾಸಿ ಭಾರತೀಯರ ಸಹಿತ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಎನ್‌ಆರ್‌ಐ ಮತದಾರನೂ ಕೂಡ ಮತದಾರರ ಪಟ್ಟಿಗೆ ಸೇರಿಲ್ಲ, ವಿಧಾನಸಭೆ ಬಳಿಕ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿದ್ದರೂ ಮತದಾನಕ್ಕೆ ಆಸಕ್ತಿ ವಹಿಸಿಲ್ಲ. 

ಭಾರತೀಯ ಪಾಸ್‌ಪೋರ್ಟ್ ಹೊಂದಿದವರು ಆರು ತಿಂಗಳು ಅಥವಾ ಹೆಚ್ಚಿನ ಅವಗೆ ಉದ್ಯೋಗ, ಶಿಕ್ಷಣ ಮತ್ತಿತರ ನೆಲೆಯಲ್ಲಿ ದೇಶದಿಂದ ಹೊರಗಿದ್ದು ಭಾರತೀಯ ಮತದಾರರ ಪಟ್ಟಿ ಸೇರಿದರೆ ಚುನಾವಣೆ ದಿನ ಕ್ಷೇತ್ರದಲ್ಲಿದ್ದು ಮತ ಚಲಾಯಿಸಬಹುದು. 

2.5 ಕೋಟಿ ಭಾರತೀಯ ಮೂಲದವರು ವಿವಿಧ ದೇಶಗಳಲ್ಲಿದ್ದು ಇವರಲ್ಲಿ 1ಕೋಟಿ ಜನತೆ ಅನಿವಾಸಿ ಭಾರತೀಯರು. ಚುನಾವಣಾ ಆಯೋಗ/ಭಾರತೀಯ ರಾಯಭಾರ ಕಚೇರಿ ಸಾಗರೋತ್ತರ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ಅಂಚೆ ಮತದಾನ ವ್ಯವಸ್ಥೆ ಮಾಡಬೇಕೆನ್ನುವ ಬೇಡಿಕೆ ಇದೆ. 

ಆದರೆ ಇದು ವೆಚ್ಚ ಮತ್ತು ತ್ರಾಸದಾಯಕ. ಇಂಟರ್ನೆಟ್ ಮತದಾನ ವ್ಯವಸ್ಥೆಗಿನ್ನೂ ಭಾರತ ಸಿದ್ಧವಾಗಿಲ್ಲ. ಕಾಯಿದೆಗೆ ತಿದ್ದುಪಡಿಯಾಗಿಲ್ಲ. ಒಂದೆಡೆ ಎನ್‌ಆರ್‌ಐಗಳಿಗೆ ಮತದಾನದ ಅವಕಾಶವನ್ನು ಸರಕಾರ ನೀಡಿದ್ದರೆ, ಮತ್ತೊಂದೆಡೆ ಮನೆಯಲ್ಲಿ ಆರು ತಿಂಗಳಿನಿಂದ ವಾಸವಿಲ್ಲದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನಿವಾಸಿ ಭಾರತೀಯರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕುತ್ತಿದೆ. 

ಅನ್ಯ ರಾಷ್ಟ್ರಗಳ ನಾಗರಿಕತ್ವ ಪಡೆಯದ, 18 ವರ್ಷ ತುಂಬಿದ ಅನಿವಾಸಿ ಭಾರತೀಯರು ತಮ್ಮೂರಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರೆ, ಚುನಾವಣೆಯಲ್ಲೂ ಸ್ಪರ್ಧಿಸಲೂಬಹುದು. ಕೇವಲ ಮತ ಚಲಾಯಿಸಲು ಭಾರತಕ್ಕೆ ಬರಬೇಕಿದ್ದರೆ ಸಾವಿರಾರು ರೂ. ಖರ್ಚಿದೆ. 

ಎಲ್ಲೆಲ್ಲಿ ಎಷ್ಟೆಷ್ಟು ಮತದಾರರು? *ಅನಿವಾಸಿ ಭಾರತೀಯ ಮತದಾರರು: 11,844 *ಕೇರಳ: 11,488, ಗೋವಾ: 27, ಪಂಜಾಬ್: 138, ತಮಿಳ್ನಾಡು: 67, ಪಶ್ಚಿಮ ಬಂಗಾಳ: 10, ಗುಜರಾತ್: 7, ಹರ‌್ಯಾಣ: 3, ಹಿಮಾಚಲ ಪ್ರದೇಶ: 2, ಚಂಡೀಗಢ: 1, ದಮನ್ ದಿಯು: 6, ಮಿಜೋರಾಂ: 5, ಸಿಕ್ಕಿಂ:1, ಉತ್ತರಾಖಂಡ: 7, ದಿಲ್ಲಿ: 13, ಪುದುಚೇರಿ: 56, ಮಹಾರಾಷ್ಟ್ರ: 13. 

*ನಮೂನೆ 6 ಎ ಯಲ್ಲಿ ಅರ್ಜಿ ಸಲ್ಲಿಸಿದವರನ್ನು ಮತದಾರರ ಪಟ್ಟಿಗೆ ಸೇರಿಸಲು ಎಲ್ಲ ಜಿಲ್ಲಾದಿಕಾರಿಗಳಿಗೆ, ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಕರ್ನಾಟಕದ ಎನ್‌ಆರ್‌ಐಗಳೊಬ್ಬರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿಲ್ಲ. ವಿದೇಶದಿಂದಲೇ ಅಂಚೆ ಮತದಾನ, ಇ ವೋಟಿಂಗ್ ವ್ಯವಸ್ಥೆ ಜಾರಿಗೆ ಕಾಯಿದೆ ತಿದ್ದುಪಡಿ ಅಗತ್ಯ. -ವಿ. ಪೊನ್ನುರಾಜ್, ವಿಶೇಷ ಕರ್ತವ್ಯಾದಿಕಾರಿ, ಕರ್ನಾಟಕ ಚುನಾವಣಾ ಆಯೋಗ. 

*ನಾವಿರುವ ದೇಶದಿಂದಲೇ, ಭಾರತೀಯ ಚುನಾವಣೆಯಲ್ಲಿ ಮತದಾನ ಮಾಡುವಂತಹ ಅವಕಾಶ ಬೇಕು. ಅಧಿಕಾರ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದಾದ ಒಂದು ಮತಕ್ಕಾಗಿ ಹೇರಳ ಹಣ, ಸಮಯ ವ್ಯಯಿಸುವುದಂತೂ ನಮಗೆ ಕಷ್ಟಕರ. ಹೀಗಾಗಿ ಅನೇಕ ರಾಷ್ಟ್ರಗಳಲ್ಲಿರುವಂತೆ ಅಂಚೆ ಮತದಾನ, ಇ ವೋಟಿಂಗ್ ವ್ಯವಸ್ಥೆಯನ್ನು ಕಾನೂನಿಗೆ ತಿದ್ದುಪಡಿ ಮೂಲಕ ಜಾರಿಗೆ ತರಬೇಕು. -ಮೊಹಮ್ಮದ್ ಖಾನ್ ಮಲ್ಪೆ(ಕತಾರ್ ಉದ್ಯೋಗಿ)

- ಎಸ್.ಜಿ. ಕುರ್ಯ,  ವಿಜಯ ಕರ್ನಾಟಕ ಕೃಪೆ, 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com