ಲೋಕಸಭಾ ಚುನಾವಣೆ: ಉತ್ತರದಲ್ಲಿ ಮೋದಿ, ದಕ್ಷಿಣದಲ್ಲಿ ರಾಹುಲ್‌ ಮುಂದೆ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖವಾಣಿಯಾಗಿರುವ 'ಆರ್ಗನೈಸರ್‌' ವಾರಪತ್ರಿಕೆ ನಡೆಸಿರುವ ಚುನಾವಣಾ ಸಮೀಕ್ಷೆಯಲ್ಲೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗಮನಾರ್ಹವೆಂದರೆ, ಉತ್ತರ ಭಾರತದಲ್ಲಿ ಮೋದಿ ಮುಂದಿದ್ದರೆ, ದಕ್ಷಿಣ ಭಾರತದಲ್ಲಿ ರಾಹುಲ್‌ ಅವರು ಮೋದಿ ಅವರಿಗಿಂತ ಮುಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ದೇಶಾದ್ಯಂತ ಶೇ.48ರಷ್ಟು ಮಂದಿ ಮೋದಿ ಬೆಂಬಲಿಸುವುದಾಗಿ ಹೇಳಿದ್ದರೆ ಶೇ.27ರಷ್ಟು ಮಂದಿ ಮಾತ್ರ ರಾಹುಲ್‌ ಪರ ನಿಲ್ಲುವುದಾಗಿ ಹೇಳಿದ್ದಾರೆ. 162 ಲೋಕಸಭಾ ಸ್ಥಾನಗಳಿರುವ ಉತ್ತರಭಾರತದಲ್ಲಿ ಮೋದಿ ಮುಂದಿದ್ದರೆ, 132 ಸ್ಥಾನಗಳನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ರಾಹುಲ್‌ ಅವರು ಸ್ವಲ್ಪ ಮುಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಅಭಿವೃದ್ಧಿ ಹಾಗೂ ಉತ್ತಮ ಆಡಳಿತವನ್ನೇ ಜನರು ಚುನಾವಣಾ ವಿಷಯ ಮಾಡಿಕೊಂಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಪ್ರಮುಖ ವಿಚಾರವಾಗಿರುವ ರಾಮಮಂದಿರದ ಬಗ್ಗೆ ಈ ಸಮೀಕ್ಷೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಭ್ರಷ್ಟಾಚಾರ ಈ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಾರದು ಎಂಬ ಅಂಶ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವುದು ವಿಶೇಷ.

ಆರ್ಗನೈಸರ್‌ ಹಾಗೂ ಲೋಕಸಾರಥಿ ಪ್ರತಿಷ್ಠಾನ ಜಂಟಿಯಾಗಿ 380 ಲೋಕಸಭಾ ಕ್ಷೇತ್ರಗಳ 1.14 ಲಕ್ಷ ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ಸಿದ್ಧಪಡಿಸಿವೆ. ಜನವರಿ ಹಾಗೂ ಮಾರ್ಚ್‌ ಮೊದಲ ವಾರದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆ ಆರೆಸ್ಸೆಸ್‌ನದ್ದಲ್ಲ:

ಈ ನಡುವೆ ಆರ್‌ಎಸ್‌ಎಸ್‌ ಈ ಚುನಾವಣಾ ಸಮೀಕ್ಷೆ ನಡೆಸಿಲ್ಲ. ಎಂದಿಗೂ ನಡೆಸಿಲ್ಲ. ಈ ಸಮೀಕ್ಷೆಯನ್ನು ಆರ್‌ಎಸ್‌ಎಸ್‌ನ ಮುಖವಾಣಿ ವಾರಪತ್ರಿಕೆಯಾದ ಆರ್ಗನೈಸರ್‌ ನಡೆಸಿದೆ. ಹೀಗಾಗಿ ಇದನ್ನು ಆರ್‌ಎಸ್‌ಎಸ್‌ ಸಮೀಕ್ಷೆ ಎನ್ನುವುದು ಸರಿಯಲ್ಲ ಎಂದು ಆರ್‌ಎಸ್‌ಎಸ್‌ ವಕ್ತಾರ ರಾಮ್‌ ಮಾಧವ್‌ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com