ವಿವಾದಿತ 'ಢುಂಢಿ' ಲೇಖಕರಿಂದ ಇನ್ನೊಂದು ಪುಸ್ತಕ ಶೀಘ್ರ ಬಿಡುಗಡೆ

ಬೆಂಗಳೂರು: ವಿವಾದಿತ 'ಢುಂಢಿ' ಕೃತಿಯ ಲೇಖಕ ಯೋಗೀಶ್‌ ಮಾಸ್ಟರ್‌ ಇದೀಗ ಮೈಸೂರಿನ ಇತಿಹಾಸದ ಬಗ್ಗೆ ಹೊಸ ಒಳನೋಟ ನೀಡುವ 'ಮಹಿಷಾಸುರ' ಕೃತಿ ರಚನೆಯಲ್ಲಿ ತೊಡಗಿದ್ದೆನೆ ಎಂದು ತಿಳಿಸಿದ್ದಾರೆ. 
        ನಾಗ ಕುಲದ ಮಹಿಷಾಸುರ ಎಂಬ ರಾಜ ಮಹಿಸೂರನ್ನು ಆಳಿದ್ದು ಅದೇ ಈಗ ಮೈಸೂರಾಗಿದೆ. ಇಂದು ಜನ ಆರಾಧಿಸುವ ಚಾಮುಂಡೇಶ್ವರಿ ದೇವಿ ಒಬ್ಬ ಬುಡಕಟ್ಟು ಮಹಿಳೆಯಾಗಿದ್ದಳು ಎಂಬ ಹೊಸ ವಿಚಾರ ಇದರಲ್ಲಿದೆ ಎಂದರು.
      ಮಹಿಸೂರಿನಲ್ಲಿ ಬುಡಕಟ್ಟು ಹಾಗೂ ರಾಜಮನೆತನದ ನಡುವೆ ಆರ್ಯರ ಮಧ್ಯ ಪ್ರವೇಶವಾಗುತ್ತದೆ. ಅವರು ಇವರಿಬ್ಬರ ನಡುವೆ ವೈಷಮ್ಯ ಸೃಷ್ಟಿಸುತ್ತಾರೆ. ಈ ದ್ವೇಷ ತಾರಕಕ್ಕೇರಿದಾಗ ಆ ಬುಡಕಟ್ಟು ಮಹಿಳೆ ಮಹಿಷಾಸುರನನ್ನು ಕೊಲ್ಲುತ್ತಾಳೆ. ಆಕೆಯನ್ನು ವೈಭವೀಕರಿಸಿ ಕಾಲಕ್ರಮೇಣ ಆಕೆ ಚಾವುಂಡಿಯಾಗುತ್ತಾಳೆ. ಆ ನಂಬಿಕೆಗಳು ಬೆಳೆದು ಈಕೆಯೇ ಮೈಸೂರಿನ ಚಾಮುಂಡಿಯಾಗುತ್ತಾಳೆ ಎಂಬುದು ಇದರ ಕಥಾಹಂದರ ಎಂದು ವಿವರಿಸಿದರು.
     ಇತಿಹಾಸ ಗರ್ಭದಲ್ಲಿ ಮರೆಯಾಗಿರುವ ಇಂತಹ ವಿಚಾರಗಳನ್ನು ಬಗೆದು ತೆಗೆಯುವ ಕೆಲಸ ಇದರಲ್ಲಾಗಿದೆ. ಸಿದ್ಧ ನಂಬಿಕೆಗಳನ್ನು ಪ್ರಶ್ನಿಸುವ, ಅದರ ಹಿಂದಿನ ಸತ್ಯವನ್ನು ಬಹಿರಂಗಪಡಿಸುವ ಕಾರ್ಯವಿದು. ಈಗಾಗಲೇ 200 ಪುಟಗಳನ್ನು ಬರೆದಾಗಿದ್ದು, ಇನ್ನೂ 200 ಪುಟಗಳಿಗೂ ಹೆಚ್ಚು ವಿಸ್ತರಿಸುವ ಸಾಧ್ಯತೆ ಇದೆ ಎಂದರು.
      ಡಿಸೆಂಬರ್‌ನಲ್ಲಿ ಈ ಕೃತಿ ಹೊರಬರಲಿದೆ. ಅಕ್ಟೋಬರ್‌ ವೇಳೆಗೆ ಇದು ಸಿದ್ಧವಾದರೂ, ಆ ಹೊತ್ತಿಗೆ ಮೈಸೂರಿನ ನಂಬಿಕೆಗೆ ಸಂಬಂಧಿಸಿದಂತೆ 'ವಿಜಯ ದಶಮಿ' ಹಬ್ಬ ಬರಲಿದೆ. ಪ್ರಚಾರಕ್ಕೋಸ್ಕರ ಈ ಸಮಯದಲ್ಲೇ ಪ್ರಕಟಿಸಿದ್ದಾರೆ ಎಂಬಂತಹ ಕುಹಕದ ಮಾತುಗಳು ಕೇಳಿ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದೇನೆ ಎಂದರು.
        ಇದರ ಜತೆಗೆ ಹಿಂದು ಹಾಗೂ ಕ್ರಿಶ್ಚಿಯಾನಿಟಿಗೆ ಸಂಬಂಧಿಸಿದ 800 ಪುಟಗಳ 'ಪ್ರೇಮನಗರ- 1978 ಪ್ರೇಮಕಥೆ' ಪುಸ್ತಕ ರಚನೆ ಸಂಪೂರ್ಣವಾಗಿದೆ. ಕೋಮುವಾದಿಯೊಬ್ಬ ಹಿಂದು- ಕ್ರಿಶ್ಚಿಯನ್ನರು ಸಹಬಾಳ್ವೆ ನಡೆಸುತ್ತಿರುವ ಪ್ರದೇಶಕ್ಕೆ ಬಂದು ಆ ವಾತಾವರಣ ಕೆಡಿಸುತ್ತಾ ಹೋಗುತ್ತಾನೆ. ಕ್ರಿಸ್ತ ಹಾಗೂ ಕೃಷ್ಣನ ಪ್ರತಿರೂಪದಂತಿರುವ ವ್ಯಕ್ತಿಗಳು ಅದನ್ನು ಸರಿಪಡಿಸುತ್ತಾ ಹೋಗುವ ಕಥಾಹಂದರ ಇದರದ್ದು. ಈ ಪುಸ್ತಕ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com