ಗುಜರಾತ್ ಅಭಿವೃದ್ಧಿ ಮಾದರಿಯಾಗಲು ಸಾಧ್ಯವಿಲ್ಲ: ಎಸ್‌ಎಂಕೆ

ಕುಂದಾಪುರ : ಹಲವು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷವನ್ನು ಈ ದೇಶದಿಂದ ಮುಕ್ತಗೊಳಿಸುತ್ತೇವೆ ಎಂದು ಬಿಜೆಪಿ ಮುಖಂಡರು ಹಗಲು ಕನಸು ಕಾಣುತ್ತಿದ್ದಾರೆ. ಈ ಹಿಂದೆ ಹಲವು ಜನರು ಈ ಹೇಳಿಕೆ ನೀಡುತ್ತಾ ಬಂದರೂ ಕಾಂಗ್ರೆಸ್‌ ಮಾತ್ರ ಸ್ಥಿರಸ್ಥಾಯಿಯಾಗಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್‌.ಎಂ. ಕೃಷ್ಣ ಹೇಳಿದರು. ಅವರು ಕುಂದಾಪುರದಲ್ಲಿ  ಮಾತನಾಡಿದರು.

    ಜಗತ್ತಿನ ದೊಡ್ಡ ಪ್ರಜಾತಂತ್ರ ವ್ಯವಸ್ಥೆಗೆ ಪೂರಕವಾಗಿ ಜ್ಯಾತ್ಯತೀತ ನೆಲೆಯಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್‌ ಕಳೆದ ಹತ್ತು ವರ್ಷಗಳಲ್ಲಿ ಈ ದೇಶಕ್ಕೆ ಸ್ಥಿರತೆ ಒದಗಿಸಿತ್ತಲ್ಲದೇ ದೇಶದ ಭದ್ರತೆ ಮತ್ತು ಸಮಗ್ರತೆಗೆ ಹೆಚ್ಚಿನ ಒತ್ತು ನೀಡಿದೆ. ದೇಶದಲ್ಲಿ ಮೂಲಭೂತ ಬದಲಾವಣೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವ ಕಾಂಗ್ರೆಸ್‌ ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ಮಾಹಿತಿ ತಂತ್ರಜ್ಞಾನ ಮೊದಲಾದವುಗಳು ಸೇರಿದಂತೆ ಕಳೆದ ಎರಡೂ ಅವಧಿಯಲ್ಲಿ ಗಮನಾರ್ಹ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈ ಹತ್ತು ವರ್ಷಗಳಲ್ಲಿ ಹಲವು ತಪ್ಪುಗಳು ನಡೆದಿವೆ. ಈ ಬಗ್ಗೆ ಮಾಧ್ಯಮ ಹಾಗೂ ಸಂಸತ್ತು ಅಧಿವೇಶನಗಳಲ್ಲಿ ಆದ ಚರ್ಚೆಯ ಆಧಾರದಲ್ಲಿ ಈ ತಪ್ಪು³ಗಳು ಗಮನಕ್ಕೆ ಬಂದ ಕೂಡಲೇ ಕಾರಣರಾದವರ ವಿರುದ್ಧ ಕಾನೂನು ಹಾಗೂ ಪಕ್ಷದ ನೆಲೆಯಲ್ಲಿ ಕ್ರಮಗಳನ್ನು ಕೈಗೊಂಡು ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

    ಮಹಾರಾಷ್ಟ್ರ ಹಾಗೂ ಗುಜರಾತ್‌ ಅಕ್ಕಪಕ್ಕದ ರಾಜ್ಯಗಳಾದರೂ ಈ ಎರಡು ರಾಜ್ಯಗಳನ್ನು ಪರಸ್ಪರ ತುಲನೆ ಮಾಡಿದಾಗ ಮಹಾರಾಷ್ಟ್ರ ಎಲ್ಲ ವಿಚಾರಗಳಲ್ಲೂ ಅಭಿವೃದ್ಧಿಯ ಪಥದದಲ್ಲಿದೆ. ಅದು ಎಲ್ಲ ವಿಚಾರಗಳಲ್ಲಿಯೂ ಸಮತೋಲನದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ. ಆದರೆ ಗುಜರಾತ್‌ನಲ್ಲಿ ಮಾತ್ರ ಅದಾನಿ ಹಾಗೂ ಅಂಬಾನಿ ಪ್ರಾಬಲ್ಯದಲ್ಲಿದ್ದು, ಕಳೆದ ಹತ್ತು ವರ್ಷದಲ್ಲಿ ಸಹಸ್ರಾರು ಎಕರೆಯನ್ನು ಅವರಿಗೆ ಕಡಿಮೆ ಬೆಲೆಯಲ್ಲಿ ನೀಡಲಾಗಿದೆ. ಇಂದು ಭೂಮಿಯ ಬೆಲೆ ಪ್ರತಿದಿನ ಹೆಚ್ಚುತ್ತಾ ಇರುವ ಸಮಯದಲ್ಲಿ ಸಂಪದ್ಭರಿತವಾದ ಗುಜರಾತ್‌ನಲ್ಲಿ ಅಭಿವೃದ್ಧಿ ಮ್ಯಾಜಿಕ್‌ ಮಾಡಬಹುದಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಚಿವ ವಿನಯ ಕುಮಾರ್‌ ಸೊರಕೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ, ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್‌, ಪಕ್ಷದ ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಎಸ್‌., ವಿಕಾಸ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com