ಸಹಕಾರ ಸಂಘಗಳಿಗೆ ಆದಾಯ ತೆರಿಗೆ ಇಲ್ಲ

ಉಡುಪಿ : ಸಹಕಾರ ಸಂಘಗಳಿಗೆ ಆದಾಯ ತೆರಿಗೆ ಇಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಪರಮೋಚ್ಚ ನೀತಿ ನಿರೂಪಣೆ ಮತ್ತು ನಿಯಂತ್ರಣ ಮಂಡಳಿಯಾದ ದಿಲ್ಲಿಯ ಸಿಬಿಡಿಟಿ (ನೇರ ತೆರಿಗೆಗಳ ಕೇಂದ್ರೀಯ ಮಂಡಳಿ) ಸ್ಪಷ್ಟಪಡಿಸಿದೆ.

ಸಹಕಾರ ಸಂಘಗಳನ್ನು ಬ್ಯಾಂಕ್‌ ಎಂದು ಪರಿಗಣಿಸಿ ಅವುಗಳಿಗೆ ಆದಾಯ ತೆರಿಗೆ ಕಾಯಿದೆಯಂತೆ ಸಿಗಬೇಕಾದ ತೆರಿಗೆ ವಿನಾಯಿತಿಯನ್ನು ಆದಾಯ ತೆರಿಗೆ ಇಲಾಖೆ ನಿರಾಕರಿಸಿ ತೆರಿಗೆ ಆಕರಿಸುತ್ತಿತ್ತು. ಇದರಿಂದ ಸಂಘಗಳು ಸಂಕಷ್ಟಕ್ಕೆ ಗುರಿಯಾಗಿದ್ದವು. ಇದನ್ನು ಪ್ರತಿಭಟಿಸಿ ಜಿಲ್ಲಾ ಸಹಕಾರ ಯೂನಿಯನ್‌ ಬಂದ್‌ ಆಚರಿಸುವ ಜತೆ ಕಾನೂನು ಹೋರಾಟಕ್ಕೆ ಮುಂದಾಗಿತ್ತು. ಏತನ್ಮಧ್ಯೆ ಯೂನಿಯನ್‌ ಪದಾಧಿಕಾರಿಗಳಾದ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ಜಯಕರ ಶೆಟ್ಟಿ ಇಂದ್ರಾಳಿ, ಗೋಪಿಕೃಷ್ಣ ರಾವ್‌ ಅವರು ಸಂಸದ ಜಯಪ್ರಕಾಶ್‌ ಹೆಗ್ಡೆಯವರ ಮೂಲಕ ಕೇಂದ್ರ ಸಚಿವರಾದ ಆಸ್ಕರ್‌ ಫೆರ್ನಾಂಡಿಸ್‌, ವೀರಪ್ಪ ಮೊಲಿಯವರನ್ನು ಭೇಟಿ ಮಾಡಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ಮನವಿ ಸಲ್ಲಿಸಿ ಸಚಿವಾಲಯದಿಂದ ಸೂಕ್ತ ನಿರ್ದೇಶನ ಕೋರಿದ್ದರು.

ಇದೀಗ ಸಿಬಿಡಿಟಿ ಸಹಕಾರ ಸಂಘಗಳು ಆದಾಯ ತೆರಿಗೆ ಕಾಯಿದೆಯಂತೆ ತೆರಿಗೆ ವಿನಾಯಿತಿಗೆ ಅರ್ಹವೆಂದು ಸ್ಪಷ್ಟನೆ ನೀಡಿ ಇದನ್ನು ಪಾಲಿಸುವಂತೆ ಆದಾಯ ತೆರಿಗೆ ಇಲಾಖಾಧಿಕಾರಿಗಳಿಗೆ ಸೂಚಿಸಿದೆ. ಇದು ದೇಶದ ಎಲ್ಲಾ ಸಹಕಾರ ಸಂಘಗಳಿಗೂ ಪ್ರಯೋಜನವಾಗಿದೆ ಎಂದು ಕಿಶನ್‌ ಹೆಗ್ಡೆ, ಜಯಕರ ಶೆಟ್ಟಿ, ಗೋಪಿಕೃಷ್ಣ ರಾವ್‌ ತಿಳಿಸಿ ಹೋರಾಟಕ್ಕೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com