ವಿದೇಶೀ ಬ್ಯಾಂಕುಗಳಲ್ಲಿರುವ ಕಪ್ಪು ಹಣ ತನಿಖೆ ವಿವರ: ಸುಪ್ರೀಂ ಆದೇಶ

ಹೊಸದಿಲ್ಲಿ: ಕಪ್ಪುಹಣ ಕುರಿತ ತನಿಖೆಯ ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಆದೇಶಿಸುವ ಮೂಲಕ ಬಿಸಿ ಮುಟ್ಟಿಸಿದೆ.

ಕಪ್ಪು ಹಣ ಕುರಿತ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಿಕೊಡಬೇಕೆಂಬ ತನ್ನ ನಿರ್ದೇಶನವನ್ನು ಪಾಲಿಸದಿರುವುದಕ್ಕೆ ಸುಪ್ರೀಂ ಕೋರ್ಟ್‌ ಸರಕಾರಕ್ಕೆ ಚಾಟಿಯೇಟು ನೀಡಿದೆ.

ವಿಶೇಷ ತನಿಖಾ ದಳವನ್ನು ರಚಿಸಿ ಅದಕ್ಕೆ ಕಪ್ಪುಹಣ ಕುರಿತ ತನಿಖೆಯನ್ನು ಒಪ್ಪಿಸುವ ಸಂಬಂಧ ಹೊರಡಿಸಲಾಗಿದ್ದ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಈ ಮೊದಲು ಕೇಂದ್ರ ಸರಕಾರ ಮಾಡಿಕೊಂಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.

ವಿದೇಶೀ ಬ್ಯಾಂಕ್‌ ಖಾತೆಗಳಲ್ಲಿ ಭಾರತೀಯರು ಗುಡ್ಡೆ ಹಾಕಿರುವ ಕಪ್ಪು ಹಣವನು ದೇಶಕ್ಕೆ ಮರಳಿ ತರುವ ದಿಶೆಯಲ್ಲಿ ಕಳೆದ ಆರು ದಶಕಗಳಿಂದಲೂ ಸರಕಾರ ಏನನ್ನೂ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿತು.

2011ರ ಜುಲೈ 4ರಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರವು ರಚಿಸಿದ್ದ ಉನ್ನತ ಸಮಿತಿಯೊಂದನ್ನು ವಿಶೇಷ ತನಿಖಾ ದಳವಾಗಿ ಪರಿವರ್ತಿಸಿ ಅದಕ್ಕೆ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಬಿ ಪಿ ಜೀವನ್‌ ರೆಡ್ಡಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಕಪ್ಪು ಹಣ ತನಿಖೆ ಕುರಿತ ಎಲ್ಲ ವಿಷಯಗಳನ್ನು ಅದಕ್ಕೆ ಒಪ್ಪಿಸಿತ್ತು.

ಅದಾದ ಬಳಿಕ ಮತ್ತೋರ್ವ ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಎಂ ಬಿ ಶಾ ಅವರನ್ನು 13 ಸದಸ್ಯರ ಎಸ್‌ಐಟಿಯ ಉಪಾಧ್ಯಕ್ಷರನ್ನಾಗಿ ನೇಮಿಸಿತ್ತಲ್ಲದೆ ರೀಸರ್ಚ್‌ ಎಂಡ್‌ ಅನಾಲಿಸಿಸ್‌ ವಿಂಗ್‌ನ ನಿರ್ದೇಶಕರನ್ನು ಅದಕ್ಕೆ ಸೇರಿಸಿತ್ತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com