ಎ. 6: ನಾಳೆ ಬಿಜೆಪಿ ವಿಜಯ ಸಂಕಲ್ಪ ದಿನ

ಉಡುಪಿ/ಮಂಗಳೂರು : ಬಿಜೆಪಿ ಸ್ಥಾಪನೆಗೊಂಡು ಎ. 6ಕ್ಕೆ 34 ವರ್ಷಗಳು ತುಂಬಲಿದ್ದು, ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಬಿಜೆಪಿಗೆ ಮತಯಾಚನೆ ಮಾಡುವ ಮೂಲಕ ಮಹಾ ಅಭಿಯಾನ ಕಾರ್ಯಕ್ರಮ ನಡೆಸಲಿದ್ದಾರೆಂದು ಜಿಲ್ಲಾಧ್ಯಕ್ಷ ಉಡುಪಿಯ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮತ್ತು ಮಂಗಳೂರಿನ ಪ್ರತಾಪಸಿಂಹ ನಾಯಕ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ 1,059 ಮತಗಟ್ಟೆಗಳಲ್ಲಿನ 11,000ಕ್ಕೂ ಮಿಕ್ಕಿ ಮತ್ತು ದ.ಕ. ಜಿಲ್ಲೆಯ 1,766 ಮತಗಟ್ಟೆಗಳ 25,000ಕ್ಕೂ ಮಿಕ್ಕಿ ಕಾರ್ಯಕರ್ತರು, ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಅವರವರ ಮತಗಟ್ಟೆಗಳಲ್ಲಿ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆಂದು ತಿಳಿಸಿದ್ದಾರೆ.

ಬೆಳಗ್ಗೆ 7 ಗಂಟೆಗೆ ಸೇರಿ ಬಿಜೆಪಿ ಧ್ವಜಾರೋಹಣ ಮಾಡಿ ವಂದೇ ಮಾತರಂ ಹಾಡುತ್ತಾರೆ. ಅನಂತರ ಸ್ಥಾಪನಾ ದಿನದ ಮಹತ್ವ ತಿಳಿಸಿ ಬಳಿಕ ಮನೆಮನೆ ಪ್ರಚಾರಕ್ಕೆ ತೊಡಗುತ್ತಾರೆ.

ಈ ಚುನಾವಣೆಯ ಮಹತ್ವ, ದೇಶಕ್ಕೆ ಮೋದಿ ನಾಯಕತ್ವದ ಅನಿವಾರ್ಯತೆ, ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಿ ಆ ಮೂಲಕ ಬಿಜೆಪಿಗೆ ಮತಯಾಚನೆ ಮಾಡಲು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಎಲ್ಲೆಡೆ ಬಿಜೆಪಿ ಪರ ವಾತಾವರಣವಿದ್ದು, ವಿವಿಧ ಮಾಧ್ಯಮಗಳ ಚುನಾವಣಾ ಸಮೀಕ್ಷೆಗಳು, ಬಿಜೆಪಿಯು ಮುನ್ನಡೆ ಸಾಧಿಸಿ ಬಹು ಮತದ ಕಡೆಗೆ ಸಾಗುತ್ತಿರುವುದನ್ನು ಎತ್ತಿ ತೋರಿಸುತ್ತಿರುವುದು ಕಾರ್ಯಕರ್ತರ ಹುಮ್ಮಸ್ಸು ಇನ್ನಷ್ಟು ದ್ವಿಗುಣಗೊಂಡಿದೆ. ಶಿವಮೊಗ್ಗ, ಉಡುಪಿ, ದ.ಕ. ಕ್ಷೇತ್ರದಲ್ಲಿ ಭಾರೀ ಅಂತರದ ಗೆಲುವು ಸಿಗಲಿದೆ ಎಂದು ತಿಂಗಳೆ ಮತ್ತು ಪ್ರತಾಪಸಿಂಹ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com