ನಾಪತ್ತೆಯಾದ ವಿಮಾನ ಪತ್ತೆಗೆ ರೊಬೊಟ್‌ ಜಲಾಂತರ್ಗಾಮಿ

ಪರ್ತ್‌: ಒಂದು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯಾದ ಎಂಎಚ್‌ 370 ವಿಮಾನದ ಬ್ಲ್ಯಾಕ್‌ ಬಾಕ್ಸ್‌ನ ಸಿಗ್ನಲ್‌ ಪತ್ತೆ ಹಚ್ಚುವ ಕಾರ್ಯಾಚರಣೆ ವಿಫ‌ಲಗೊಂಡಿರುವುದರಿಂದ ಸಮುದ್ರದೊಳಕ್ಕೆ ರೊಬೋಟ್‌ ಡ್ರೋನ್‌ ರವಾನಿಸಲು ನಿರ್ಧರಿಸಲಾಗಿದೆ. 'ವಿಮಾನದ ಅಂತಿಮ ವಿಶ್ರಾಂತಿ' ಸ್ಥಳವನ್ನು ಪತ್ತೆಹಚ್ಚುವ ಸಲುವಾಗಿ ರೊಬೊಟ್‌ 4500 ಮೀಟರ್‌ ಆಳದಲ್ಲಿ ಹುಡುಕಾಟ ನಡೆಸಲಿದೆ.

ಬ್ಲ್ಯಾಕ್‌ಬಾಕ್ಸ್‌ ಪತ್ತೆ ಹಚ್ಚಲು ನಡೆಸಿದ ಓಶಿಯನ್‌ ಶೀಲ್ಡ್‌ ಕಾರ್ಯಾಚರಣೆ ವಿಫ‌ಲಗೊಂಡಿರುವುದರಿಂದ ನೀರಿನೊಳಗೆ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುವ ಬ್ಲೂಫಿನ್‌ -21 ಜಲಾಂತರ್ಗಾಮಿಯನ್ನು ರವಾನಿಸಲು ತೀರ್ಮಾನಿಸಿದ್ದಾರೆ. 

ಆರು ದಿನಗಳಿಂದ ಬ್ಲ್ಯಾಕ್‌ಬಾಕ್ಸ್‌ನ ಪಿಂಗ್‌ ಸಿಗ್ನಲ್‌ ಬರದಿರುವುದರಿಂದ ಕೊನೆಯದಾಗಿ ನೀರಿನಾಳದಲ್ಲಿ ಹುಡುಕಾಟ ನಡೆಸಲಿದ್ದೇವೆ ಎಂದು ಶೋಧ ಸಮನ್ವಯಕ ಆ್ಯಂಗಸ್‌ ಹೂಸ್ಟನ್‌ ತಿಳಿಸಿದ್ದಾರೆ.

ತೈಲ ಸೋರಿಕೆ ಪತ್ತೆ: ಈ ನಡುವೆ ಹುಡುಕಾಟ ನಡೆಯುತ್ತಿರುವ ಸ್ಥಳದಲ್ಲಿ ತೈಲ ಸೋರಿಕೆಯಾದ ಕುರುಹುಗಳು ಪತ್ತೆಯಾಗಿರುವುದರಿಂದ ವಿಮಾನ ಅಲ್ಲೇ ಪತನಗೊಂಡಿರುವ ನಿರೀಕ್ಷೆ ದಟ್ಟವಾಗಿದೆ. 

ಸುಮಾರು ಎರಡು ಲೀಟರಿನಷ್ಟು ತೈಲವನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ. ತೈಲ ಸೋರಿಕೆ ಮೂಲ ಎಲ್ಲಿದೆ ಎಂದು ಇನ್ನೂ ಗೊತ್ತಾಗಿಲ್ಲ. ಆದರೆ ಕನಿಷ್ಠ 5,500 ಮೀಟರ್‌ ಆಳದಲ್ಲಿರುವ ಸಾಧ್ಯತೆಯಿದೆ.ಇಲ್ಲಿಂದಲೇ ಓಶಿಯನ್‌ ಶೀಲ್ಡ್‌ಗೆ ಬಲವಾದ ಪಿಂಗ್‌ ಸಿಗ್ನಲ್‌ ಸಿಕ್ಕಿತ್ತು. ಹೀಗಾಗಿ ಇದೇ ಪ್ರದೇಶದಲ್ಲಿ ವಿಮಾನ ಪತನಗೊಂಡಿರುವ ಸಾಧ್ಯತೆಯನ್ನು ಲೆಕ್ಕ ಹಾಕಿದ್ದಾರೆ.

ಬ್ಲೂಫಿನ್‌-21 ಅಮೆರಿಕದ ಸಾಗರ ಗರ್ಭ ಶೋಧಕ ಜಲಾಂತರ್ಗಾಮಿ. ಸೈಡ್‌-ಸ್ಕ್ಯಾನ್‌ ಸೋನಾರ್‌ ಅಳವಡಿಸಿರುವ ಈ ಜಲಾಂತರ್ಗಾಮಿ ಬೆಳಕಿನ ಬದಲಾಗಿ ಶಬ್ದದ ಪ್ರತಿಫ‌ಲನದ ಮೂಲಕ ಚಿತ್ರಗಳನ್ನು ಸೆರೆ ಹಿಡಿಯುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com