ರಾಜಕೀಯ ಲಾಭಕ್ಕಾಗಿ ಜಾಹೀರಾತು ನೀಡುವಂತಿಲ್ಲ: ಸುಪ್ರೀಂ ಕೋರ್ಟ್‌

ದಿಲ್ಲಿ: ರಾಜಕೀಯ ಲಾಭಕ್ಕಾಗಿ ವಾರ್ತಾಪತ್ರಿಕೆಗಳಿಗೆ ಮತ್ತು ಟಿವಿ ಚ್ಯಾನಲ್‌ಗ‌ಳಿಗೆ ರಾಜಕೀಯ ಮುಖಂಡರ ಫೋಟೋಗಳನ್ನು ಒಳಗೊಂಡ ಸರಕಾರಿ ಜಾಹೀರಾತುಗಳನ್ನು ನೀಡುವಲ್ಲಿ ಸಾರ್ವಜನಿಕ ತೆರಿಗೆ ಹಣ ದುರುಪಯೋಗವಾಗುವುದನ್ನು ತಡೆಯುವ ಸಲುವಾಗಿ ಸುಪ್ರೀಂ ಕೋರ್ಟ್‌ ಈ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರಚಿಸುವ ಸಮಿತಿಯೊಂದನ್ನು ರೂಪಿಸಿದೆ.

ಸರ್ವೋಚ್ಚ ನ್ಯಾಯಾಲದ ಶ್ರೇಷ್ಠ ನ್ಯಾಯಾಧೀಶ ಜಸ್ಟಿಸ್‌ ಪಿ. ಸದಾಶಿವಂ ನೇತೃತ್ವದ ನ್ಯಾಯ ಪೀಠವು ರಾಜಕೀಯ ಲಾಭದ ಉದ್ದೇಶದೊಂದಿಗೆ ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಒಳಗೊಂಡ ಸರಕಾರಿ ಜಾಹೀರಾತುಗಳನ್ನು ದೇಶದ ಖಜಾನೆಯ ವೆಚ್ಚದಲ್ಲಿ ಪ್ರಕಟಿಸುವಲ್ಲಿ ಸಾರ್ವಜನಿಕರ ಹಣ ದುರ್ಬಳಕೆಯಾಗುವುದನ್ನು ತಪ್ಪಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿತು. 

ಈ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಸಲುವಾಗಿ ನಾಲ್ವರು ಸದ್ಯಸರ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್‌ ರಚಿಸಿತು. ಇದರಲ್ಲಿ ಭೋಪಾಲದಲ್ಲಿನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಮಾಜಿ ನಿರ್ದೇಶಕ ಎನ್‌ ಆರ್‌ ಮಾಧವ ಮೆನನ್‌, ಮಾಜಿ ಲೋಕಸಭಾ ಕಾರ್ಯದರ್ಶಿ ಟಿ ಕೆ ವಿಶ್ವನಾಥನ್‌, ಹಿರಿಯ ವಕೀಲ ರಂಜಿತ್‌ ಕುಮಾರ್‌ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ. 

ಇನ್ನು 3 ವಾರಗಳ ಒಳಗಾಗಿ ತನಗೆ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಈ ನೂತನ ಸಮಿತಿಯನ್ನು ಕೇಳಿಕೊಂಡಿದೆ. 

ರಾಜಕೀಯ ಲಾಭದ ಸರಕಾರ ಜಾಹೀರಾತುಗಳ ಮೂಲಕ ಜನರ ಹಣ ದುರ್ಬಳಕೆಯಾಗುವುದನ್ನು ತಪ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಸಿಪಿಐಎಲ್‌ ಎಂಬ ಸರಕಾರೇತರ ಸೇವಾ ಸಂಘಟನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿತ್ತು.

ಉದಯವಾಣಿ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com