ಸುನ್ನಿ ಬೆಂಬಲಿಗರ ವಿರೋಧದ ನಡುವೆ ಸಲಫಿ ಸಮಾವೇಶ

ಪಡುಬಿದ್ರಿ: ಸುನ್ನಿ ಬೆಂಬಲಿಗರ ತೀವ್ರ ವಿರೋಧದ ನಡುವೆಯೂ ಸಲಫಿ ಮೂವ್‌ಮೆಂಟ್ ವತಿಯಿಂದ ಹೆಜಮಾಡಿಯಲ್ಲಿ ಸಲಫಿ ಸಮಾವೇಶ ಭಾನುವಾರ ಕನ್ನಂಗಾರು ಬಳಿ ಖಾಸಗಿ ಸ್ಥಳದಲ್ಲಿ ನಡೆಯಿತು. 

ಸಮಾವೇಶದಲ್ಲಿ 300ಕ್ಕೂ ಅಧಿಕ ಸಲಫಿ ಬೆಂಬಲಿಗರು ಪೊಲೀಸ್ ಬೆಂಗಾವಲಿನೊಂದಿಗೆ ಸಮಾವೇಶ ನಡೆಸಿದರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೌಲವಿ ಅಲಿ ಉಮ್ಮರ್ ಮರಣ ಎಂಬ ಅಂತಿಮ ಯಾತ್ರೆ ಕುರಿತು ಪ್ರವಚನ ಮಾಡಿ ಅಲ್ಲಾಹುವಿನ ಆದೇಶ ವಿರೋಧಿಸಬಾರದು. ವಿರೋಧಿಸಿದಲ್ಲಿ ನಾವು ಪಶುಗಳೆನಿಸಿಕೊಳ್ಳುತ್ತೇವೆ ಎಂದರು. 

ಮೌಲವಿ ನಾಸಿರುದ್ದೀನ್ ರಹ್ಮಾನಿ ಅವರು ನೈಜ ಪ್ರವಾದಿ ಪ್ರೇಮ ಕುರಿತು ಪ್ರವಚನ್ ಮಾಡಿದರು. ದಕ್ಷಿಣ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ವರ್ಷಾವಧಿ ಅಭಿಯಾನದ ಅಂಗವಾಗಿ ಮೂಲ್ಕಿ-ಹೆಜಮಾಡಿ ಘಟಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸುನ್ನಿಗಳ ವಿರೋಧ: ಕಳೆದ ಮಾ.20ರಂದು ಈ ಸಮಾವೇಶ ನಡೆಯಬೇಕಿತ್ತು. ಸ್ಥಳೀಯವಾಗಿ ಅಧಿಕ ಸಂಖ್ಯೆಯಲ್ಲಿರುವ ಸುನ್ನಿ ಪಂಗಡ ಪರ ಜಮಾತ್ ವತಿಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಾವೇಶ ರದ್ದುಗೊಳಿಸಲಾಗಿತ್ತು. ಆದರೆ ಹಠಕ್ಕೆ ಬಿದ್ದವರಂತೆ ಸಲಫಿ ಪಂಗಡದವರು ಚುನಾವಣೆ ಮುಗಿದ ಬಳಿಕ ರಾಜಕೀಯ ಒತ್ತಡದ ಮೂಲಕ ಮತ್ತೆ ಸಮಾವೇಶ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಯಾವುದೇ ಕಾರಣಕ್ಕೂ ಸಲಫಿ ಸಮಾವೇಶ ನಡೆಸಲು ಬಿಡೆವು ಎಂದು ಕನ್ನಂಗಾರು ಜಮಾತ್ ಮೂಲಕ ಸುನ್ನಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಹೆಜಮಾಡಿ ಪರಿಸರ ಸಂಘರ್ಷದ ವಾತಾವರಣದಿಂದ ಕೂಡಿತ್ತು. 

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದು, ಭಾನುವಾರ ಮಧ್ಯಾಹ್ನ ಸುನ್ನಿ ಪರ ನಾಯಕರನ್ನು ಹೆಜಮಾಡಿ ಗ್ರಾಪಂ ಕಚೇರಿಗೆ ಸಂಧಾನಕ್ಕಾಗಿ ಕರೆಸಿತ್ತು. ತೀವ್ರ ಚರ್ಚೆಯ ಬಳಿಕವೂ ಸುನ್ನಿ ಬೆಂಗಲಿಗರು ಸಲಫಿ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದಿದ್ದರು. 

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಜಮಾತ್ ಅಧ್ಯಕ್ಷ ಎಚ್.ಬಿ. ಮಹಮ್ಮದ್, ಹೆಜಮಾಡಿಯಲ್ಲಿ ಸಲಫಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಶೇ. 95ಕ್ಕೂ ಅಧಿಕ ಸುನ್ನಿಗಳಿದ್ದಾರೆ. ಆದಾಗ್ಯೂ ರಾಜಕೀಯ ಒತ್ತಡಕ್ಕೆ ಮಣಿದು ಸಮಾವೇಶ ಹಮ್ಮಿಕೊಂಡಿದ್ದು, ನಮ್ಮ ತೀವ್ರ ವಿರೋಧ ಇದೆ. ಕಾಂಗ್ರೆಸ್ ಮುಖಂಡರೇ ಈ ಸಮಾವೇಶಕ್ಕೆ ಅನುವು ಮಾಡಿಕೊಟ್ಟದ್ದಾರೆ ಎಂದು ದೂರಿದ್ದಾರೆ. ಸಮಾವೇಶದಲ್ಲಿ ಬಹುಸಂಖ್ಯಾತ ಸುನ್ನಿಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದಲ್ಲಿ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದಿದ್ದಾರೆ. 

ಅವರೊಂದಿಗೆ ಎಂ.ಎ. ಗಫೂರ್, ಎ.ಕೆ. ಸಯ್ಯದ್ ಆಲಿ, ಅಬ್ದುಲ್ ಅಜೀಜ್, ಸೂಫಿ ಇದ್ದರು. 

ಬಳಿಕ ಸಲಫಿ ಬೆಂಬಲಿಗರಾದ ರಿಯಾಝ್ ಅಹ್ಮದ್, ಎಸ್.ಎ. ಹುಸೇನಬ್ಬ, ಮೊಹಮ್ಮದ್ ಫಾರೂಕ್, ಮೊಹಮ್ಮದ್ ಹನೀಫ್ ಅವರನ್ನು ಗ್ರಾಪಂಗೆ ಕರೆಸಿ ಹಲವು ನಿಬಂಧನೆ ಸಹಿತ ಸಮಾವೇಶ ನಡೆಸಲು ಸೂಚಿಸಲಾಯಿತು. 

ಯಾವುದೇ ಕಾರಣಕ್ಕೂ ಸುನ್ನಿಗಳ ವಿರುದ್ಧ ಹೇಳಿಕೆ ನೀಡಬಾರದು, ಪ್ರಚೋದನಾಕಾರಿ ಮಾತನಾಡಬಾರದು. ಸಂಜೆ 7.30ಕ್ಕೆ ಸಮಾವೇಶ ಮುಕ್ತಾಯಗೊಳಿಸಬೇಕೆಂದು ನಿಬಂಧನೆ ವಿಧಿಸಲಾಗಿದ್ದು, ಸಂಘಟಕರು ಒಪ್ಪಿಗೆ ಸೂಚಿಸಿದರು. 

ಕುಂದಾಪುರ ಎಸಿ ಯೋಗೀಶ್ವರ್, ಎಎಸ್ಪಿ ಅಣ್ಣಾಮಲೈ, ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಸುನಿಲ್ ನಾಯಕ್, ತಹಸೀಲ್ದಾರ್ ಮೋಹನ್ ರಾವ್, ಆರ್‌ಐ ಗಣೇಶ್ ಬಳಿಗಾರ್, ಪಡುಬಿದ್ರಿ ಎಸ್‌ಐ ರಕ್ಷಿತ್ ಗೌಡ ಸಂಧಾನ ಪ್ರಕ್ರಿಯೆ ನಡೆಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com