ಫ‌ಲಿತಾಂಶ ವಿಳಂಬ: ಅಭ್ಯರ್ಥಿಗಳಿಗೆ ಅಂಜಿಕೆ, ಬೆಟ್ಟಿಂಗ್‌ ಗೆ ವರದಾನ

ಕೊಲ್ಲೂರು : ಲೋಕಸಭಾ ಚುನಾವಣೆ ಮುಗಿದಿದ್ದು, ಮತದಾರರ ತೀರ್ಪು ಮೇ 16ರಂದು ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬೆಟ್ಟಿಂಗ್‌ ಆರಂಭಗೊಂಡಿದ್ದು, ರೂ. 50,000ದಿಂದ ರೂ. 1 ಕೋಟಿ ತನಕ ಬೆಟ್ಟಿಂಗ್‌ ನಡೆಯುತ್ತಿದೆ.

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. 74ರಷ್ಟು ಮತದಾನ ನಡೆದಿದ್ದು, ಅಭ್ಯರ್ಥಿಗಳಲ್ಲಿ ಕಾತರ ಹಾಗೂ ಸೋಲು - ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಕೆಲವರು ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ರೂ. 50 ಲಕ್ಷ ಬೆಟ್ಟಿಂಗ್‌ ನಡೆದಿದ್ದು, ಈ ಬಾರಿ ರೂ. 1 ಕೋಟಿಗೆ ಏರಿರುವುದು ಗಮನೀಯ. ಸ್ಥಳೀಯರೊಂದಿಗೆ ವಿದೇಶದಲ್ಲಿ ನೆಲೆಸಿರುವ ಉದ್ಯಮಿಗಳು ಕೂಡ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿರುವುದು ಕುತೂಹಲಕ್ಕೆ ಎಡೆ ಮಾಡಿದೆ. ಉಡುಪಿ - ಚಿಕ್ಕಮಗಳೂರು, ಬೈಂದೂರು - ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಮೇಲೆ ಮುಂಬೈ ಮೂಲದ ಉದ್ಯಮಿಗಳು ರೂ. 1 ಕೋಟಿಯಷ್ಟು ಬೆಟ್ಟಿಂಗ್‌ ಇರಿಸಿದ್ದಾರೆ ಎಂದು ಮಾಹಿತಿ ಇದೆ.

ಚುನಾವಣಾ ವಿಶ್ಲೇಷಕರು ಹಾಗೂ ಪೊಲೀಸ್‌ ಗೌಪ್ಯ ವರದಿಗಳನ್ನು ಬೆನ್ನಟ್ಟಿರುವ ಬೆಟ್ಟಿಂಗ್‌ ಪ್ರಿಯರು ಈ ಬಾರಿ ಎಷ್ಟು ಗಳಿಸಿದ್ದಾರೆ ಎನ್ನುವುದಕ್ಕಿಂತ 3 ಲೋಕಸಭಾ ಕ್ಷೇತ್ರಗಳಲ್ಲಿ ಅದೆಷ್ಟೋ ಕೋ. ರೂ. ಮತದಾರರ ಜೇಬು ಸೇರಿದೆ ಎನ್ನುವುದು ಕೂತೂಹಲದ ವಿಚಾರ. ಈ ದಿಸೆಯಲ್ಲಿ ರೂ. 1 ಕೋಟಿ ಬೆಟ್ಟಿಂಗ್‌ಗೆ ನಡೆದಿರುವುದು ಕೋಟ್ಯಂತರ ಹಣಕ್ಕೆ ಹೋಲಿಸಿದರೆ ನಗಣ್ಯ. ಮುಂದಿನ 1 ತಿಂಗಳ ಕಾಲ ಅಭ್ಯರ್ಥಿಗಳ ನಿದ್ರೆಗೆಡಿಸಲಿರುವ ಈ ದೀರ್ಘಾವಧಿ ಮತದಾನದ ಫಲಿತಾಂಶ ಬೆಟ್ಟಿಂಗ್‌ ಪ್ರಿಯರಿಗೆ ಮಾತ್ರ ವರದಾನವಾಗಿದೆ.
ಡಾ| ಸುಧಾಕರ ನಂಬಿಯಾರ್‌ | Apr 20, 2014

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com