‘ಪ್ರಚಂಡ ಪಂಜುರ್ಲಿ’ ಶತದಿನೋತ್ಸವ, ಸನ್ಮಾನ

ಕುಂದಾಪುರ: ಯಕ್ಷಗಾನ ಪ್ರಸಂಗಕರ್ತನ ಜವಾಬ್ದಾರಿ ಮಹತ್ತವಾದುದು. ಪ್ರಸಂಗವೊಂದರ ಯಶಸ್ಸಿಗೆ ಪ್ರೇಕ್ಷಕ ಹಾಗೂ ಕಲಾವಿದರ ಪಾತ್ರವೂ ಮುಖ್ಯ. ಆ ನೆಲೆಯಲ್ಲಿ ಕಲಾವಿದ, ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಪ್ರಚಂಡ ಪಂಜುರ್ಲಿ ಪ್ರಸಂಗ ಪ್ರೇಕ್ಷಕರ ಮನ ತಟ್ಟಿದೆ ಎನ್ನುವುದಕ್ಕೆ ಈ ಶತದಿನೋತ್ಸವವೇ ಸಾಕ್ಷಿ. ಇಂತಹ ಭಕ್ತಿ ಪ್ರಧಾನವಾದ ಪ್ರಸಂಗಗಳು ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಹೇಳಿದರು. 

ನೂಜಾಡಿ ಗ್ರಾಮದ ಜೈನ ಬೊಬ್ಬರ್ಯ ದೇವಸ್ಥಾನದ ವಠಾರದಲ್ಲಿ ಸಾಸ್ತಾನ ಗೋಳಿಗರಡಿ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಈ ತಿರುಗಾಟದಲ್ಲಿ ಪ್ರದರ್ಶಿಸಿದ ಎಂ.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ 'ಪ್ರಚಂಡ ಪಂಜುರ್ಲಿ' ಪ್ರಸಂಗದ ನೂರರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ರಾತ್ರಿ ಮಾತನಾಡಿದರು. 

ಮಣಿಪಾಲ ಎಂಐಟಿ ಉಪನ್ಯಾಸಕ, ಯಕ್ಷಗಾನ ವಿಮರ್ಶಕ ಪ್ರೊ. ಉದಯ ಕುಮಾರ್ ಶೆಟ್ಟಿ ಶುಭಾಶಂಸನೆ ಮಾಡುತ್ತ್ತಾ, ಯಕ್ಷಗಾನ ಕ್ಷೇತ್ರಕ್ಕೆ ಕಳೆದ 150 ವರ್ಷಗಳಿಂದ ಗೋಳಿಗರಡಿ ಮೇಳ ತನ್ನದೇ ಆದ ಕೊಡುಗೆ ನೀಡಿದೆ. ಹಲವಾರು ಪ್ರಸಿದ್ಧ ಕಲಾವಿದರನ್ನು ಈ ಮೇಳ ನೀಡಿದೆ. ಈ ತಿರುಗಾಟದಲ್ಲಿ ಪ್ರಚಂಡ ಪಂಜುರ್ಲಿ ಪ್ರಸಂಗದ ಮೂಲಕ ಯಕ್ಷಗಾನ ಮೇಳಗಳ ಈ ತಿರುಗಾಟದಲ್ಲಿ ಗಮನ ಸೆಳೆದಿದೆ. ಪುರಾಣ ಆಧರಿತ ಕಥೆಯೊಂದನ್ನು ಒಂದು ತಿರುಗಾಟದಲ್ಲಿ ನೂರು ಪ್ರಯೋಗವಾಗುವುದು ಅಪರೂಪ ಎಂದು ಹೇಳಿದರು. 

ಈ ಸಂದರ್ಭ ಪ್ರಸಂಗಕರ್ತ ಎಂ.ಎಚ್. ಪ್ರಸಾದ್‌ಕುಮಾರ್ ಮೊಗೆಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಪ್ರಸಂಗದ ಶತದಿನೋತ್ಸವದ ನೆನಪಿಗಾಗಿ ಮೇಳದ ಕಲಾವಿದರಿಗೆ ನೆನಪಿನ ಕಾಣಿಕೆೆ ನೀಡಿ ಗೌರವಿಸಲಾಯಿತು. ಮೇಳದ ವ್ಯವಸ್ಥಾಪಕ ಜಿ. ವಿಠಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. 

ನೂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ನೂಜಾಡಿ, ಗೋಳಿಗರಡಿ ಕ್ಷೇತ್ರದ ಪಾತ್ರಿಗಳಾದ ಶಂಕರ ಪೂಜಾರಿ, ಕಲಾ ಪೋಷಕರಾದ ಸಂತೋಷ್ ಪೂಜಾರಿ ಕುಂಭಾಸಿ, ಬಿಜ್ರಿ ಬಾಲಕೃಷ್ಣ ಶೆಟ್ಟಿ, ಮೇಳದ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್ ಉಪಸ್ಥಿತರಿದ್ದರು. 

ಮೇಳದ ಜತೆ ಕಾರ್ಯದರ್ಶಿ ಶಂಕರ್ ಕುಲಾಲ್, ಗಣಪಯ್ಯ ಆಚಾರ್, ಕೇಶವ ಆಚಾರ್, ಸ್ಥಳೀಯರಾದ ಚಂದ್ರ ಪೂಜಾರಿ ನೂಜಾಡಿ ಅತಿಥಿಗಳನ್ನು ಗೌರವಿಸಿದರು. ಗಣೇಶ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಂತರ ವಿಶೇಷ ಆಕರ್ಷಣೆಗಳೊಂದಿಗೆ 'ಪ್ರಚಂಡ ಪಂಜುರ್ಲಿ' ಪ್ರಸಂಗದ ಅದ್ದೂರಿಯ 100ನೇ ಪ್ರಯೋಗದ ಪ್ರದರ್ಶನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com