ಸೌದಿಯಲ್ಲಿ 1 ಕಿಮೀ ಎತ್ತರದ ಕಟ್ಟಡ ನಿರ್ಮಾಣಕ್ಕೆ ತಯಾರಿ!

ರಿಯಾದ್‌: ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಹಿರಿಮೆಗೆ ಪಾತ್ರವಾಗಿರುವ ದುಬೈನ ಬುರ್ಜ್‌ ಖಲೀಫಾ ಇನ್ನು ಕೆಲವೇ ತಿಂಗಳುಗಳಲ್ಲಿ ತನ್ನ ಸ್ಥಾನ ಕಳೆದುಕೊಳ್ಳಲಿದೆ. ಬುರ್ಜ್‌ಗೆ ಸಡ್ಡು ಹೊಡೆಯಲೇನೋ ಎಂಬಂತೆ ಸೌದಿ ಅರೇಬಿಯಾ ಬರೋಬ್ಬರಿ 1 ಕಿಲೋಮೀಟರ್‌ ಎತ್ತರದ 'ಕಿಂಗ್‌ಡಮ್‌ ಟವರ್‌' ನಿರ್ಮಾಣ ಆರಂಭಿಸಿದೆ. ಕಾಮಗಾರಿ ಪೂರ್ಣಗೊಂಡರೆ ಇದು ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಎಂಬ ದಾಖಲೆಗೆ ಪಾತ್ರವಾಗಲಿದೆ.

200 ಅಂತಸ್ತುಗಳ 'ಕಿಂಗ್‌ಡಮ್‌ ಟವರ್‌'ನಲ್ಲಿ ಹೋಟೆಲ್‌, ಅಪಾರ್ಟ್‌ಮೆಂಟ್‌, ಐಷಾರಾಮಿ ಮನೆ ಹಾಗೂ ಕಚೇರಿಗಳು ಇರುತ್ತವೆ. 160 ಮಹಡಿಗಳನ್ನು ವಸತಿಗೆ ಮೀಸಲಿಡಲಾಗುತ್ತದೆ. ಒಟ್ಟಾರೆ 7234 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆ ಕಾಪು ಮೂಲದ ಉದ್ಯಮಿ ಬಿ.ಆರ್‌. ಶೆಟ್ಟಿ ಅವರು ವಾಸಿಸುತ್ತಿರುವ ದುಬೈನ ಬುರ್ಜ್‌ ಖಲೀಫಾ 828 ಮೀಟರ್‌ ಎತ್ತರವಿದೆ. ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಇದು. ಆದರೆ ಸೌದಿ ಅರೇಬಿಯಾದಲ್ಲಿ ತಲೆಎತ್ತುತ್ತಿರುವ 'ಕಿಂಗ್‌ಡಮ್‌ ಟವರ್‌' 1000 ಮೀಟರ್‌ (3280 ಅಡಿ) ಎತ್ತರವಿರಲಿದೆ. ದುಬೈನ ಬುರ್ಜ್‌ಗಿಂತ 568 ಅಡಿಯಷ್ಟು ಹೆಚ್ಚು ಎತ್ತರದ್ದಾಗಿರಲಿದೆ.

ಏ.27ರಿಂದ ಕಟ್ಟಡ ನಿರ್ಮಾಣ: ಕಳೆದ ಡಿಸೆಂಬರ್‌ನಲ್ಲಿ ಅಡಿಪಾಯ ಹಾಕುವ ಕಾಮಗಾರಿ ಆರಂಭವಾಗಿದೆ. ನೆಲಮಟ್ಟದಿಂದ ಕಟ್ಟಡ ನಿರ್ಮಾಣ ಕಾಮಗಾರಿ ಬರುವ ಏ.27ರಿಂದ ಶುರುವಾಗಲಿದೆ. ಕಾಮಗಾರಿ ಪೂರ್ಣಗೊಳಿಸಲು 63 ತಿಂಗಳ ಕಾಲ ಮಿತಿ ಹಾಕಿಕೊಳ್ಳಲಾಗಿದೆ.

ಸೌದಿ ಯುವರಾಜನ ಯೋಜನೆ

ಮಧ್ಯಪ್ರಾಚ್ಯದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೆನಿಸಿರುವ ಸೌದಿ ಅರೇಬಿಯಾದ ಯುವರಾಜ ಅಲ್‌- ವಲೀದ್‌ ಬಿನ್‌ ತಲಾಲ್‌ ಅವರು 2008ರಲ್ಲಿ ವಿಶ್ವಾದ್ಯಂತ ಆರ್ಥಿಕ ಹಿಂಜರಿತ ಕಾಣಿಸಿಕೊಂಡಾಗ ಈ ಯೋಜನೆ ಪ್ರಕಟಿಸಿದ್ದರು. ಕೆಂಪು ಸಮುದ್ರದ ಬಂದರು ನಗರಿಯ ಉತ್ತರಕ್ಕೆ 'ಕಿಂಗ್‌ಡಮ್‌ ಸಿಟಿ' ನಿರ್ಮಿಸುವುದಾಗಿ ಘೋಷಿಸಿದ್ದರು. ಅದರ ಒಂದು ಭಾಗವೇ 'ಕಿಂಗ್‌ಡಮ್‌ ಟವರ್‌'. ಷಿಕಾಗೋ ಮೂಲದ ಆ್ಯಡ್ರಿಯನ್‌ ಸ್ಮಿತ್‌ ಅಂಡ್‌ ಗಾರ್ಡನ್‌ ಗಿಲ್‌ ಆರ್ಕಿಟೆಕ್ಚರ್‌ ಕಂಪನಿ ಈ ಯೋಜನೆಯನ್ನು ವಿನ್ಯಾಸಗೊಳಿಸಿದೆ. 2 ಚದರ ಮೈಲು ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಕಿಂಗ್‌ಡಮ್‌ ಸಿಟಿಯ ಮೊದಲ ಹಂತದ ನಿರ್ಮಾಣಕ್ಕೆ 1.2 ಲಕ್ಷ ಕೋಟಿ ರೂ. ಖರ್ಚಾಗಲಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com