ರಾಜ್ಯ ಸರಕಾರದಿಂದ 165ರಲ್ಲಿ 95 ಅಂಶ ಈಡೇರಿಕೆ: ಎಂಎನ್‌ಆರ್

ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ 165 ಅಂಶಗಳ ಪೈಕಿ ಹತ್ತೇ ತಿಂಗಳಲ್ಲಿ 95 ಅಂಶ ಜಾರಿಗೊಳಿಸಿದೆ. ಇದು ಜನಪರ ಆಡಳಿತದ ದ್ಯೋತಕ. ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಮೂಲಕ ರಾಜ್ಯ ದೃಢತೆ ಕುಗ್ಗಿಸಿದ್ದ ಬಿಜೆಪಿಗೆ ಕಾಂಗ್ರೆಸ್ ಸರಕಾರವನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಚುನಾವಣೆ ಪ್ರಚಾರ ಉಸ್ತುವಾರಿ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ. 

ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಹೆಸರಿನಲ್ಲಿ ಬಿಜೆಪಿ ಕುರುಡರ ಪಾರ್ಟಿ ಆಗಿ ಬಿಟ್ಟಿದೆ. ಇದು ನಮ್ಮ ಚುನಾವಣೆ ಅಲ್ಲ, ಮೋದಿಯ ಚುನಾವಣೆ ಎನ್ನುವ ಬಿಜೆಪಿ, ದೇಶದ 543 ಲೋಕಸಭೆ ಕ್ಷೇತ್ರವನ್ನು ಮೋದಿಯೇ ಪ್ರತಿನಿಧಿಸುವುದಾದರೆ ಆಯಾ ಕ್ಷೇತ್ರದಲ್ಲಿ ಮೋದಿ ಬಂದು ಕೆಲಸ ನಿರ್ವಹಿಸುತ್ತಾರೆಯೇ? ಅದು ಅವರಿಂದ ಸಾಧ್ಯವೇ ಎಂದು ಪ್ರಶ್ನಿಸಿದರು. 

ಬಿಜೆಪಿಯಲ್ಲಿ ನಡುಕ: ಚುನಾವಣೆ ಸಮೀಪಿಸುತ್ತಿರುವಂತೆಯೇ ಮಾಧ್ಯಮ ಸಮೀಕ್ಷೆಗಳು ಕಾಂಗ್ರೆಸ್ ಪರ ವಾಲುತ್ತಿರುವುದು ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ. ಇದು ಅಡಗಿದ್ದ ನೈಜತೆ. ಗುಜರಾತ್ ಮಾದರಿ ದೇಶದ ಯಾವ ರಾಜ್ಯಕ್ಕೂ ಬೇಡ. ರೈತರು, ಜನಸಾಮಾನ್ಯರ ಬದುಕನ್ನು ದುರ್ಬರಗೊಳಿಸಿರುವ ಗುಜರಾತ್ ಮಾದರಿ ಯಾರಿಗೂ ಬೇಡ ಎಂದು ಪ್ರತಿಪಾದಿಸಿದರು. 

ಕಾಂಗ್ರೆಸ್ ಅಲೆ: ಉಡುಪಿ-ಚಿಕ್ಕಮಗಳೂರು, ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಈಗಾಗಲೇ ಶೇ.80ರಷ್ಟು ಮತದಾರರನ್ನು ತಲುಪಿದ್ದೇವೆ. ನಮ್ಮದು ತಣ್ಣಗಿನ ಪ್ರಚಾರ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯೇ ಶ್ರೀರಕ್ಷೆ. ರಾಜ್ಯದಲ್ಲಿ ಹೈನುಗಾರರಿಗೆ 4 ರೂ. ಪ್ರೋತ್ಸಾಹಧನ, ಅನ್ನ ಭಾಗ್ಯ, ಕ್ಷೀರ ಭಾಗ್ಯ, ರೈತರ ಸಾಲ ಮನ್ನಾ, ಶೇ.3ರ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ, ಬಡ್ಡಿ ಸಬ್ಸಿಡಿ ಅವಧಿಗೆ ಮೊದಲೇ ಪಾವತಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್ ಪಾಲಿಗೆ ಪೂರಕ ವಾತಾವರಣ ಸೈಷ್ಟಿಸಿದೆ ಎಂದರು.

ಮುಖವಾಡ ನಿಲ್ಲಲ್ಲ: ಮೋದಿ ಮುಖವಾಡ ಬಹು ದಿನ ನಿಲ್ಲಲ್ಲ. ಚಹಾ, ಬನಿಯನ್, ಬಿಸ್ಕತ್ ಮಾರಾಟದ ಗಿಮಿಕ್ ನಡೆಯೋದಿಲ್ಲ. ಮೇ 17ರ ನಂತರ ಬಿಜೆಪಿಯವರಿಗೆ ಇದೇ ಕಾಯಂ ಆದರೂ ಅಚ್ಚರಿಯಿಲ್ಲ. ಪಕ್ಷ ಕಟ್ಟಿದವರು, ತ್ಯಾಗ ಮಾಡಿದವರನ್ನು ಬದಿಗಿರಿಸಿ, ರಾಷ್ಟ್ರೀಯ ವಿಚಾರಧಾರೆ ಮೂಲೆಗುಂಪು ಮಾಡಿ ಏಕವ್ಯಕ್ತಿಯ ಬೆನ್ನ ಹಿಂದೆ ಸಾಗುತ್ತಿರುವ ಬಿಜೆಪಿ ಖಂಡಿತವಾಗಿಯೂ ದೇಶದಲ್ಲಿ ಅಧಃಪತನ ಆಗಲಿದೆ ಎಂದರು. 

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮುಖಂಡರಾದ ರಾಜು ಪೂಜಾರಿ, ರಾಜು ದೇವಾಡಿಗ, ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com