ಮರು ಮತದಾನಕ್ಕೆ ಸಿದ್ದತೆ ಬೈಂದೂರಲ್ಲಿ ಮದ್ಯ ನಿಷೇಧ

ಕುಂದಾಪುರ: ಮತಯಂತ್ರದ ತಾಂತ್ರಿಕ ದೋಷದಿಂದಾಗಿ ಬೈಂದೂರು ವಿಧಾನಸಭೆ ಕ್ಷೇತ್ರದ 174ನೇ ಉಪ್ಪಿನಕುದ್ರು ಮತಗಟ್ಟೆಯಲ್ಲಿ ಏ. 29ರಂದು ಮರು ಮತದಾನ ನಡೆಯುವ ಹಿನ್ನೆಲೆಯಲ್ಲಿ ಭಾನುವಾರದಿಂದ ಏ. 29ರ ರಾತ್ರಿ 12 ಗಂಟೆವರೆಗೆ ಬೈಂದೂರು ವಿಧಾನಸಭೆ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಲೋಕಸಭೆ ಕ್ಷೇತ್ರದ ಉಪ್ಪಿನಕುದ್ರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪಶ್ಚಿಮ ಭಾಗ ಮತಗಟ್ಟೆಯಲ್ಲಿ ಮರು ಮತದಾನ ನಡೆಯಲಿದೆ. ಏ.17ರಂದು ಮತದಾನ ನಡೆದಾಗ ಅರ್ಧ ಮತದಾನ ಆಗುವ ಹೊತ್ತಿಗೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆನಂತರ ಮತಯಂತ್ರ ಬದಲಾಯಿಸಿ ಮತ ಚಲಾವಣೆ ಮುಂದುವರಿಸಲಾಗಿತ್ತು. 

ಆದರೆ ಮತ್ತೆ ದೋಷ ಕಾಣಿಸಿಕೊಂಡ ಮತಯಂತ್ರ ಆನಂತರ ಟ್ರು ರ್ಯಾಂಡಂ ನಂಬರ್ ಜನರೇಶನ್ ಎಂದು ತೋರಿಸತೊಡಗಿದೆ. ಇದರಿಂದ ಚಲಾವಣೆಯಾದ ಮತಗಳ ಲೆಕ್ಕ ತೋರಿಸುವುದಿಲ್ಲ. ಈ ರೀತಿಯ ಸಮಸ್ಯೆ ರಾಜ್ಯದಲ್ಲಿ ಒಟ್ಟು 12 ಮತಗಟ್ಟೆಗಳಲ್ಲಿ ಕಂಡು ಬಂದಿದ್ದು, ಎಲ್ಲ ಕಡೆ ಏ.29ರಂದು ಮತದಾನ ನಡೆಯಲಿದೆ. ಎಡಗೈ ಮಧ್ಯದ ಬೆರಳಿಗೆ ಗುರುತು ಶಾಯಿ ಹಾಕಲಾಗುತ್ತದೆ. ಇತರ ಚುನಾವಣೆ ಗಮನಿಸಿ ಚುನಾವಣಾ ಆಯೋಗ ಶಾಯಿ ಹಾಕುವ ಬೆರಳು ಬದಲಾಯಿಸಲೂ ಅವಕಾಶ ಇದೆ ಎಂದು ತಿಳಿಸಿದರು. 

ಬೈಂದೂರು ವಿಧಾನಸಭೆ ಕ್ಷೇತ್ರದ ಉಪ್ಪಿನಕುದ್ರುವಿನ 174ನೇ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು 1167 ಮತದಾರರಿದ್ದಾರೆ. ಅದರಲ್ಲಿ 538 ಪುರುಷರು ಮತ್ತು 629 ಮಂದಿ ಮಹಿಳಾ ಮತದಾರರಾಗಿದ್ದಾರೆ. ಏ.17ರಂದು ನಡೆದಿದ್ದ ಮತದಾನದಲ್ಲಿ 485 ಮಹಿಳೆಯರು, 383 ಪುರುಷರು ಒಟ್ಟು 868 ಮಂದಿ ಮತ ಚಲಾಯಿಸಿದ್ದರು. ಶೇ.74.38 ಮತದಾನವಾಗಿತ್ತು. 

ಮರು ಮತದಾನದ ವೇಳೆ ಇದಕ್ಕಿಂತ ಕಡಿಮೆಯಾಗಲಿಕ್ಕಿಲ್ಲ. ಪ್ರತಿ ಮನೆಗೆ ಹೋಗಿ ಅಧಿಕಾರಿಗಳು ಮತದಾನದ ಜಾಗೃತಿ ಮೂಡಿಸಲಿದ್ದಾರೆ. ಈ ಮತಗಟ್ಟೆಯಲ್ಲಿ ಶೇ.100 ಮತದಾನವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಮತಗಟ್ಟೆ ಪ್ರದೇಶದಲ್ಲಿ ಧ್ವನಿವರ್ಧಕ ಮೂಲಕ ಜಾಗೃತಿ ಪ್ರಚಾರ ಕಾರ್ಯ ಆರಂಭವಾಗಿದೆ. ಮತದಾರರ ಚೀಟಿಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು. 

ಮತಗಟ್ಟೆಯಲ್ಲಿ ಬಳಸುವ ವಿದ್ಯುನ್ಮಾನ ಮತಯಂತ್ರಗಳನ್ನು ಬೆಂಗಳೂರು ಬೃಹತ್ ನಗರಪಾಲಿಕೆಯಿಂದ ಹಂಚಿಕೆ ಮಾಡಿದ್ದು, ಈಗಾಗಲೇ ವಿದ್ಯುನ್ಮಾನ ಮತಯಂತ್ರ ಸ್ವೀಕರಿಸಲಾಗಿದೆ. ಮರು ಮತದಾನದ ದಿನ ಇಲ್ಲಿನ ಮತದಾರರಿಗೆ ಮತದಾನ ಮಾಡಲು ಅನುಕೂಲಕರವಾಗುವ ದೃಷ್ಟಿಯಿಂದ ಏ.29ರಂದು ವೇತನ ಸಹಿತ ರಜೆ ನೀಡಲಾಗಿದೆ. ಮತಗಟ್ಟೆಯಲ್ಲಿ ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸೂಕ್ಷ್ಮ ಮತಗಟ್ಟೆಯಾದ ಇಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಒಬ್ಬ ಎಸ್‌ಐ, ಒಬ್ಬ ಮುಖ್ಯ ಪೇದೆ, ಒಬ್ಬ ಪೇದೆ ಕಾರ್ಯನಿರ್ವಹಿಸಲಿದ್ದಾರೆ. ಮತದಾನ ಮುಗಿದ ಬಳಿಕ ರಾತ್ರಿಯೇ ಮತಯಂತ್ರವನ್ನು ಶಿವಮೊಗ್ಗ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು. 

ಮರುಮತದಾನಕ್ಕೆ ಸಿದ್ಧತೆ: ಮರು ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುಂದಾಪುರ ಸಹಾಯಕ ಕಮಿಷನರ್ ಯೋಗೇಶ್ವರ ತಿಳಿಸಿದರು. ಭಾನುವಾರ ತಹಸೀಲ್ದಾರರ ಕಚೇರಿಯಲ್ಲಿ ಸುದ್ದಿಗಾರರಿಗೆ ಸಿದ್ಧತೆಯ ವಿವರ ನೀಡಿದ ಅವರು, ಮರು ಮತದಾನಕ್ಕೆ ಈಗಾಗಲೆ ಸಾಕಷ್ಟು ಪ್ರಚಾರ ನೀಡಲಾಗಿದೆ. ತಾಲೂಕು ಕಚೇರಿ, ಗ್ರಾಪಂ ತಲ್ಲೂರು, ತಾಪಂ, ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಮತಗಟ್ಟೆ ಪ್ರದೇಶದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ. 4 ತಂಡಗಳು ಮನೆ ಮನೆಗೆ ತೆರಳಿ ಓಟರ್ ಸ್ಲಿಪ್‌ಗಳನ್ನು ಹಂಚುವ ಕೆಲಸ ಆರಂಭಿಸಲಾಗಿದೆ. ವಿದ್ಯುನ್ಮಾನ ಮತಯಂತ್ರದ ಸಿದ್ಧತೆ ಕಾರ್ಯ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಸಲಾಗಿದೆ. ಮತಗಟ್ಟೆ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಜಾಗೃತದಳ ಕಾರ್ಯನಿರ್ವಹಣೆ ಆರಂಭಿಸಿದೆ ಎಂದು ಅವರು ತಿಳಿಸಿದರು. ತಹಸೀಲ್ದಾರ್ ಗಾಯತ್ರಿ ಎನ್. ನಾಯಕ್ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com