ಉಕ್ಕಿಗಿಂತಲೂ ಗಟ್ಟಿಯಾದ ಗಾಜು ಸಂಶೋಧಿಸಿದ ವಿಜ್ಞಾನಿಗಳು

ನ್ಯೂಯಾರ್ಕ್‌: ಉಕ್ಕಿಗಿಂತಲೂ ಬಲಿಷ್ಠವಾಗಿರುವ, ಸುಲಭವಾಗಿ ಬಗ್ಗಿಸಬಹುದಾದ ಬಲ್ಕ್ ಮೆಟಾಲಿಕ್‌ ಗ್ಲಾಸಸ್‌ (ಬಿಎಂಜಿ) ಎಂಬ ಮಿಶ್ರಲೋಹವನ್ನು ಅತ್ಯಂತ ಬೇಗನೆ ಪತ್ತೆ ಹಚ್ಚುವ ದಾರಿಯನ್ನು ಅಮೆರಿಕದ ಯೇಲ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇದರಿಂದಾಗಿ ಉಕ್ಕಿಗಿಂತಲೂ ಶಕ್ತಿಶಾಲಿಯಾದ ಗಾಜು ಅಭಿವೃದ್ಧಿಗೆ ಅನುಕೂಲವಾಗಿದೆ. 

ಉಕ್ಕಿಗಿಂತಲೂ ಬಲಿಷ್ಠವಾದ ಗಾಜು ಸುಲಭಕ್ಕೆ ಸಿಗಲಿದೆ. ವೈದ್ಯರು ರೋಗಿಗಳಿಗೆ ಅಳವಡಿಸುವ ಇಂಪ್ಲ್ರಾಟ್ಸ್‌, ಸ್ಟಂಟ್ಸ್‌, ಮೊಬೈಲ್‌ ಫೋನ್‌ ಹಾಗೂ ಇತರೆ ಗ್ರಾಹಕ ಉಪಯೋಗಿ ವಿದ್ಯುತ್‌ ಉಪಕರಣಗಳಲ್ಲಿ (ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌) ಇದನ್ನು ಬಳಸಿಕೊಳ್ಳಬಹುದಾಗಿದೆ. 

ಬಿಎಂಜಿಗಳಿಗೆ ಬಳಕೆಯಾಗುವ ಮಿಶ್ರಲೋಹವನ್ನು ಶೋಧಿಸಲು ಸಾಂಪ್ರದಾಯಿಕ ವಿಧಾನದಲ್ಲಿ ಇಡೀ ದಿನ ಬೇಕಾಗುತ್ತಿತ್ತು. ಆದರೆ ಯೇಲ್‌ ವಿಜ್ಞಾನಿಗಳ ಹೊಸ ವಿಧಾನದ ಪ್ರಕಾರ, ಪ್ರತಿ ದಿವಸ 3 ಸಾವಿರ ಮಿಶ್ರಲೋಹಗಳನ್ನು ಶೋಧಿಸುವುದರ ಜತೆಗೆ ಅವುಗಳ ಕರಗುವ ತಾಪಮಾನ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಬಹುದಾಗಿದೆ. 

ಇದರಿಂದಾಗಿ ಬಲ್ಕ್ ಮೆಟಾಲಿಕ್‌ ಗ್ಲಾಸ್‌ಗಳ ಸಂಶೋಧನೆ ಸುಲಭವಾಗಿದ್ದು, ಇವುಗಳನ್ನು ಹೊಸ ಉಪಕರಣಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಯೇಲ್‌ ವಿಶ್ವವಿದ್ಯಾಲಯದ ಮೆಕಾನಿಕಲ್‌ ಇಂಜಿನಿಯರಿಂಗ್‌ ಹಾಗೂ ವಸ್ತು ವಿಜ್ಞಾನ ಪ್ರಾಧ್ಯಾಪಕ ಜಾನ್‌ ಸೊರ್ ಅವರು ತಿಳಿಸಿದ್ದಾರೆ. 

ಗಡಿಯಾರದ ಬಿಡಿಭಾಗಗಳು, ಗಾಲ್ಫ್ ಕ್ಲಬ್‌ಗಳು ಹಾಗೂ ಇತರೆ ಕ್ರೀಡಾ ಸರಕುಗಳಲ್ಲಿ ಈಗಾಗಲೇ ಬಲ್ಕ್ ಮೆಟಾಲಿಕ್‌ ಗ್ಲಾಸಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗ ಬಲ್ಕ್ ಮೆಟಾಲಿಕ್‌ ಗ್ಲಾಸ್‌ಗೆ ಬೇಕಾದ ಮಿಶ್ರಲೋಹಗಳನ್ನು ಬೇಗನೆ ಪತ್ತೆ ಹಚ್ಚುವ ವಿಧಾನ ಲಭಿಸಿರುವುದರಿಂದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಬಳಕೆ ಮಾಡಿಕೊಳ್ಳಬಹುದಾಗಿದೆ. 

2 ಕೋಟಿ ಬಿಎಂಜಿಗಳು ಇರುವ ಅಂದಾಜಿದೆ. ಇದುವರೆಗೂ 1.20 ಕೋಟಿ ಮೆಟಾಲಿಕ್‌ ಗ್ಲಾಸ್‌ಗಳನ್ನು ಉತ್ಪಾದಿಸಲಾಗಿದೆ ಎಂದು ಸೊರ್ ಮಾಹಿತಿ ನೀಡಿದ್ದಾರೆ. 

ಗಾಜು ಗಟ್ಟಿ ಹೇಗಾಗುತ್ತೆ? 

ಬಲ್ಕ್ ಮೆಟಾಲಿಕ್‌ ಗ್ಲಾಸಸ್‌ ಎಂಬ ಸಂಕೀರ್ಣ ಮಿಶ್ರ ಲೋಹದಿಂದ ಗಟ್ಟಿಯಾದ ಗಾಜು ತಯಾರಿಸಬಹುದು. ಈ ಮಿಶ್ರಲೋಹವು ಮೆಗ್ನಿಶಿಯಂ, ಕಾಪರ್‌, ಯೇಟ್ರಿಯಂನಿಂದ ಕೂಡಿರುತ್ತದೆ. ಇದನ್ನು ನಿಗದಿತ ಉಷ್ಣಾಂಶದಲ್ಲಿ ನಿಗದಿತ ಸಮಯದವರೆಗೆ ಬಿಸಿ, ತಂಪು ಮಾಡಿದಾಗ ಬಹಳ ಗಟ್ಟಿಯಾದ, ಬಗ್ಗುವ ಗುಣವುಳ್ಳ ವಸ್ತು ಸಿದ್ಧವಾಗುತ್ತದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com