ಉಡುಪಿ: ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜು

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಚುನಾವಣೆ ಬಹಿರಂಗ ಪ್ರಚಾರ ಮಂಗಳವಾರ ಸಂಜೆ 6 ಗಂಟೆಗೆ ಕೊನೆಯಾಗಿದ್ದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅಣಕು ಮತದಾನ, ಮತದಾನೋತ್ತರ ಸಮೀಕ್ಷೆಗೆ ಅವಕಾಶವಿಲ್ಲ ಎಂದು ಚುನಾವಣಾಧಿಕಾರಿ ಡಾ. ಮುದ್ದು ಮೋಹನ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನೆ ಮನೆ ಪ್ರಚಾರ ಯಾವುದೇ ಆಮಿಷಕ್ಕೆ ಅವಕಾಶವಿಲ್ಲದಂತೆ ಮಾಡಬಹುದು. ಹೊರಗಿನ ತಾರಾ ಪ್ರಚಾರಕರು ಕ್ಷೇತ್ರದಲ್ಲಿರುವಂತಿಲ್ಲ. ಚುನಾವಣೆ ಅಕ್ರಮ ನಡೆಸದಂತೆ ಹದ್ದಿನಗಣ್ಣಿಡಲಾಗಿದೆ ಎಂದು ಎಚ್ಚರಿಸಿದರು. 

ಮತದಾನದ ದಿನ ಮತದಾರರನ್ನು ಕರೆ ತಂದರೆ ವಾಹನ ವಶಪಡಿಸಿ, ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಕ್ಷೇತ್ರದಲ್ಲಿ ಶೇ. 99 ವೋಟರ್ಸ್‌ ಸ್ಲಿಪ್(ಮತದಾರರ ಚೀಟಿ) ವಿತರಿಸಲಾಗಿದೆ. ಮತದಾರರ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮ ಆಯೋಜಿಸಿದ್ದು ಈ ಬಾರಿ ಮತದಾನ ಶೇ. 75ರಿಂದ 80ರಷ್ಟಾಗುವ ನಿರೀಕ್ಷೆಯಿದೆ. 

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 13,86,515 ಮತದಾರರು 1,751 ಮತಗಟ್ಟೆಗಳ ಮೂಲಕ ಮತ ಚಲಾಯಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ನಡೆದಿದೆ. ಹೊಸದಾಗಿ ಸೇರ್ಪಡೆಯಾದ 19,791 ಮತದಾರರಿಗೆ ಭಾವಚಿತ್ರ ಸಹಿತ ಗುರುತಿನ ಚೀಟಿ(ಎಪಿಕ್)ನೀಡಲಾಗಿದೆ. ಶೇ. 100 ಮತದಾರರು ಎಪಿಕ್ ಹೊಂದಿದ್ದಾರೆ. ಉಡುಪಿ ಜಿಲ್ಲೆಗೆ 4,896 ಹಾಗೂ ಚಿಕ್ಕಮಗಳೂರು ಜಿಲ್ಲೆಗೆ 4,506 ಸಹಿತ ಒಟ್ಟು 9,312 ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆಗಳ್ಲಲಿ ನೋ ಸ್ಮೋಕಿಂಗ್ ಸೈನೇಜ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. 

ಉಡುಪಿ ಜಿಲ್ಲೆಯಲ್ಲಿ 442, ಚಿಕ್ಕಮಗಳೂರಿನಲ್ಲಿ 471 ಸಹಿತ ಒಟ್ಟು 913 ವಾಹನಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಲಾಗುವುದು. ಉಡುಪಿಯ 70 ಹಾಗೂ ಚಿಕ್ಕಮಗಳೂರಿನ 70 ಸಹಿತ ಇಂಟರ್‌ನೆಟ್ ಲಭ್ಯವಿರುವ 140 ಮತಗಟ್ಟೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ವೆಬ್ ಕ್ಯಾಸ್ಟಿಂಗ್ ಮಾಡಲಾಗುವುದು. ಕೇಂದ್ರ ಸರಕಾರಿ ನೌಕರರನ್ನು ಬಳಸಿ ಮತಗಟ್ಟೆಗಳಿಗೆ 532 ಮೈಕ್ರೊ ಅಬ್ಸರ‌್ವರ್ಸ್‌ಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಮತ್ತು ನಕ್ಸಲ್ ಸಕ್ರಿಯ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ಮಾಡಲಾಗುವುದು. ಮತ ಯಂತ್ರಗಳ ಮಸ್ಟರಿಂಗ್, ಡಿಮಸ್ಟರಿಂಗ್ ಬಳಿಕ ಎಂಟು ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಕುಂಜಿಬೆಟ್ಟು ಟಿ. ಎ. ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿಗೆ ತರಲಾಗುವುದು. 

ಮಾಹಿತಿ ಎಸ್‌ಎಂಎಸ್ ಪಡೆಯಿರಿ: ಭಾವಚಿತ್ರ ಸಹಿತ ಗುರುತಿನ ಚೀಟಿ ಹೊಂದಿದ ಮತದಾರರು ಮೊಬೈಲ್‌ನಲ್ಲಿ ಕೆಎಇಪಿಐಸಿ ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ತಮ್ಮ ಭಾವಚಿತ್ರ ಸಹಿತ ಗುರುತಿನ ಚೀಟಿಯಲ್ಲಿರುವ ಸಂಖ್ಯೆ ನಮೂದಿಸಿದ 9243355223 ಗೆ ಕಳುಹಿಸಿದರೆ ಮತದಾರರ ವಿಧಾನಸಭೆ ಕ್ಷೇತ್ರ, ಸಂಖ್ಯೆ, ವಾರ್ಡ್ ಸಂಖ್ಯೆ, ಮತಗಟ್ಟೆ ವಿಳಾಸ, ಕ್ರಮ ಸಂಖ್ಯೆ, ಮತದಾರನ ಹೆಸರು, ಬಂಧುವಿನ ವಿವರ ಎಸ್‌ಎಂಎಸ್ ಮೂಲಕ ಲಭ್ಯವಾಗಲಿದೆ. 

ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ ಹಾಗೂ ಸಂಖ್ಯೆ ಇಲ್ಲದ ಅರ್ಹ ಮತದಾರರು ಅಂತರ್ಜಾಲದಲ್ಲಿ ಸರ್ಚ್ ಮೈ ನೇಮ್ ಇನ್ ವೋಟರ್ ಲಿಸ್ಟ್ ಲಿಂಕ್ ಕ್ಲಿಕ್ ಮಾಡುವ ಮೂಲಕ ಗುರುತಿನ ಚೀಟಿ, ಮತಗಟ್ಟೆ ವಿವರ ಪಡೆಯಬಹುದು ಎಂದರು. 

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಜಿ. ಪಂ. ಸಿಇಒ ಎಂ. ಕನಗವಲ್ಲಿ, ಜಿ. ಪಂ. ಕಾರ್ಯದರ್ಶಿ ಡಿ. ಪ್ರಾಣೇಶ್ ರಾವ್, ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com