ಬಿಜೆಪಿ ಗೆದ್ದರೆ ಉಡುಪಿಗೆ ಗುಜರಾತ್ ಮಾದರಿ ಬಂದರು: ವಿಕ್ರಮಾರ್ಜುನ ಹೆಗ್ಡೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆದ್ದು ಬಂದರೆ, ಗುಜರಾತಿನ (ಮುಂದ್ರಾ) ಮಾದರಿಯಲ್ಲಿ ನೂತನ ವಾಣಿಜ್ಯ ಬಂದರನ್ನು ಉಡುಪಿ ಕರಾವಳಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ. 

ಉಡುಪಿ ಜಿಲ್ಲಾ ಬಿಜೆಪಿ ಪ್ರಣಾಳಿಕೆಯನ್ನು ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ ಸೋಮಶೇಖರ ಭಟ್ ಬಿಡುಗಡೆ ಮಾಡಿದ ಸಂದರ್ಭ ಮಾತನಾಡಿದರು. 
ಪ್ರಣಾಳಿಕೆ ಮುಖ್ಯಾಂಶಗಳು: ಮೀನುಗಾರಿಕೆ ವಿಶೇಷ ವಿತ್ತ ವಲಯ ನಿರ್ಮಾಣ, ಕಡಲ್ಕೊರೆತ ತಡೆಗೆ ಸಮಗ್ರ ಪರಿಹಾರ, ಕರಾವಳಿಯಲ್ಲಿ ಹರಿವ ನದಿಗಳ ಜೋಡಣೆ ಮೂಲಕ ವಾಟರ್ ಗ್ರಿಡ್ ನಿರ್ಮಾಣ ಮಾಡಲಾಗುವುದು. ಉಡುಪಿ ಮತ್ತು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ದರ್ಜೆಯ ಸೌಲಭ್ಯ, ಏರ್ ಆ್ಯಂಬುಲೆನ್ಸ್ ಸೇವೆ, ಗೋರಖ್ ಸಿಂಗ್ ವರದಿ ಪ್ರಕಾರ ಅಡಕೆ ಬೆಳೆಗಾರರಿಗೆ ಪ್ರೋತ್ಸಾಹ, ಸಂರಕ್ಷಣೆಗೆ ಕ್ರಮ. 

ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದ ಇನಾಂ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರ ಹಿತರಕ್ಷಣೆ. ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಪಡುಬಿದ್ರಿ, ಕಾರ್ಕಳ, ಮೂಡಿಗೆರೆ, ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ. ಉಡುಪಿ ಜಿಲ್ಲೆಗೆ ಪ್ರತ್ಯೇಕ ವಿಮಾನ ನಿಲ್ದಾಣ ರಚನೆ, ಉಳ್ಳಾಲದಿಂದ ಮಡಗಾಂವ್ ತನಕ ಕೊಂಕಣ ರೈಲ್ವೆಯ ಹೊಸ ಉಡುಪಿ ವಿಭಾಗ ರಚನೆ. ಉಡುಪಿ ಚಿಕ್ಕಮಗಳೂರಿನಾದ್ಯಂತ 24 ಗಂಟೆಗಳ ಕಾಲ ವಾರಾಹಿ ಮತ್ತು ಯುಪಿಸಿಎಲ್‌ಗಳಿಂದ ಆದ್ಯತೆಯಡಿ ವಿದ್ಯುತ್ ಪೂರೈಕೆ, ಮೋದಿ ಕಂಡ 100 ಸ್ಮಾರ್ಟ್ ಸಿಟಿ ಯೋಜನೆಯಡಿ ಉಡುಪಿ ಚಿಕ್ಕಮಗಳೂರು ನಗರಗಳ ಸಮಗ್ರ ಅಭಿವೃದ್ಧಿ, ಚಿಕ್ಕಮಗಳೂರಿನಲ್ಲಿ ಜಾಗತಿಕ ದರ್ಜೆಯ ವಿವಿ. ಮಹಿಳೆಯರು ಮತ್ತು ಯುವತಿಯರನ್ನು ತುರ್ತು ಸಂದರ್ಭಗಳಲ್ಲಿ ರಕ್ಷಿಸಲು ಮೊಬೈಲ್ ಆಧಾರಿತ ಆಧುನಿಕ ವಿಶೇಷ ವ್ಯವಸ್ಥೆ ಜಾರಿ. ಕರಾವಳಿಯ ಭದ್ರತಾ ವ್ಯವಸ್ಥೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉನ್ನತೀಕರಣ, ನಕ್ಸಲ್ ಸಕ್ರಿಯ ಪ್ರದೇಶಗಳ ಅಭಿವೃದ್ಧಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರ್ಯಪಡೆ ರಚನೆ, ವಿಶ್ವ ಪರಂಪರೆಯ ಪಟ್ಟಿಯಿಂದ ಪಶ್ಚಿಮಘಟ್ಟವನ್ನು ಹೊರಗಿಡಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಜಿ ಶಾಸಕ ಕೆ. ರಘುಪತಿ ಭಟ್, ನಗರ ಬಿಜೆಪಿ ಅಧ್ಯಕ್ಷ ರಾಘವೇಂದ್ರ ಕಿಣಿ, ಶೀಲಾ ಕೆ. ಶೆಟ್ಟಿ, ಜೀವನ್ ಶೆಟ್ಟಿ ಬ್ರಹ್ಮಾವರ, ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com