ಮುಸ್ಲಿಮರು ಗೋಹತ್ಯೆ ನಿಷೇಧಕ್ಕೆ ಒಪ್ಪಿದರೆ ಸಾಮರಸ್ಯ: ಪೇಜಾವರ ಶ್ರೀ

ಉಡುಪಿ: ಮುಸ್ಲಿಮರ ಬೇಡಿಕೆಗೆ ಹಿಂದೂಗಳು ಸ್ಪಂದಿಸಬೇಕು. ಹಿಂದೂಗಳ ಬೇಡಿಕೆಗೆ ಮುಸ್ಲಿಮರು ಸ್ಪಂದಿಸಬೇಕು. ಗೋಹತ್ಯೆ ನಿಷೇಧ ಹಿಂದೂಗಳ ಒಂದು ಬೇಡಿಕೆ. ಮುಸ್ಲಿಮರು ಗೋಹತ್ಯೆ ನೀಷೇಧಕ್ಕೆ ಒಪ್ಪಿದರೆ ಹಿಂದೂ ಮತ್ತು ಮುಸ್ಲಿಮರ ನಡುವೆ ಬಹಳ ದೊಡ್ಡ ಮೈತ್ರಿಯ ವಾತಾವರಣ ನಿರ್ಮಾಣವಾಗಲಿದೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ. 

ಆತ್ರಾಡಿ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಮತ್ತು ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಆತ್ರಾಡಿ ಮಸೀದಿ ವಠಾರದಲ್ಲಿ ಶನಿವಾರ ನಡೆದ ಸರ್ವ ಧರ್ಮ ಸೌಹಾರ್ದ ಸಮ್ಮೇಳನದಲ್ಲಿ ಮಾತನಾಡಿದರು. 

ಶ್ರೀರಾಮ ಜನ್ಮಭೂಮಿ ವಿವಾದ ಉಂಟಾದಾಗ ಹಿಂದೂ ಸಂತರು ಮತ್ತು ಮುಸ್ಲಿಂ ಸಂತರು ದಿಲ್ಲಿಯಲ್ಲಿ ಕುಳಿತು ಸೌಹಾರ್ದ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗಿತ್ತು. ತಾನೂ ಅದರಲ್ಲಿ ಇದ್ದೆ. ಮುಸ್ಲಿಂ ಸಂತರು ಬಹುತೇಕ ಒಪ್ಪಿದ್ದು, ಅಂತಿಮ ನಿರ್ಧಾರಕ್ಕೆ ಒಂದು ವಾರದ ಕಾಲಾವಕಾಶ ಕೋರಿದ್ದರು. ಅಷ್ಟರಲ್ಲಿ ರಾಜಕೀಯ ಪ್ರವೇಶವಾಗಿ ಎಲ್ಲ ಹಾಳಾಯಿತು. ರಾಜಕಾರಣಿಗಳು ಇಂಥ ವಿಚಾರಗಳನ್ನು ಆಯಾ ಧರ್ಮದ ಸಂತರ ಕೈಗೆ ಬಿಟ್ಟರೆ ನಾವು ಅದನ್ನು ಸರಿಯಾದ ತೀರ್ಮಾನ ಕೈಗೊಂಡು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ರಾಜಕಾರಣಿಗಳು ಬಂದರೆ ಸಮಸ್ಯೆ ಇತ್ಯರ್ಥವಾಗುವುದಿಲ್ಲ ಎಂದು ಹೇಳಿದರು. 

ಹಿಂದೂಗಳಿಗೆ ತೊಂದರೆಯಾದಾಗ ಮುಸ್ಲಿಂ ಸಂತರು ರಕ್ಷಣೆಗೆ ಧಾವಿಸಬೇಕು. ಮುಸ್ಲಿಮರಿಗೆ ತೊಂದರೆಯಾದಾಗ ಹಿಂದೂ ಸಂತರು ಅವರ ರಕ್ಷಣೆಗೆ ಬರಬೇಕು. ಆಗ ಸಾಮರಸ್ಯ ಉಳಿಯಲು ಸಾಧ್ಯ. ಯಾವುದೇ ಮತ ಧರ್ಮ ಇರಲಿ. ನಾವೆಲ್ಲ ಭಾರತೀಯರು ಎಂದು ತಿಳಿದು ಎಲ್ಲರು ಪ್ರೀತಿ ವಿಶ್ವಾಸದಿಂದ ಬಾಳಬೇಕು ಎಂದರು. 

ಹಿಂದೂ, ಕ್ರಿಶ್ಚಿಯನ್, ಮುಸ್ಲಿಮರು ಭಗವಂತನನ್ನು ಸ್ವೀಕಾರ ಮಾಡಿದ್ದಾರೆ. ನಾವು ಭಗವಂತನ ಭಕ್ತರಾಗಿ, ಭಕ್ತಿಯ ನೆಲೆಯಲ್ಲಿ ನಾವೆಲ್ಲ ಒಂದು. ದೇವರನ್ನು ಒಪ್ಪದವರು ಮಾತ್ರ ಕಾಫಿರರು. ಜಗತ್ತನ್ನು ಬೆಳಗುವ ದೇವರೇ ನಮ್ಮೆಲ್ಲ ದೇವರು. ಐಕ್ಯದಿಂದ ನಾವೆಲ್ಲ ಬದುಕಬೇಕು ಎಂದರು. 

ಆತ್ರಾಡಿ ಖಾಝಿ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಆತ್ರಾಡಿ ಖತೀಬ ಅಬುರಹಹಾನ್, ಅಂತರ್ ಧರ್ಮೀಯ ಸೌಹಾರ್ದ ನಿರ್ದೇಶಕ ಗುರು ಫಾ. ವಿಲಿಯಂ ಮಾರ್ಟೀಸ್, ಶಾಸಕ ಪ್ರಮೋದ್ ಮಧ್ವರಾಜ್, ವಕ್ಫ್ ಬೋರ್ಡ್ ಅಧ್ಯಕ್ಷ ನಕ್ವ ಯಾಹ್ಯ ಮಲ್ಪೆ, ಅನ್ಸಾರುಲ್ ಮುಸಾಕಿನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಸಮದ್, ಪರೀಕ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಭೋಜರಾಜ್ ಹೆಗ್ಡೆ, ಮಣಿಪಾಲದ ರಾಮಚಂದ್ರ, ಕೆಎಂಸಿ ಸರ್ಜನ್ ಡಾ. ಎಲ್. ರಾಮಚಂದ್ರ, ತಾಪಂ ಸದಸ್ಯ ಸತ್ಯಾನಂದ ನಾಯಕ್, ಮಣಿಪಾಲ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಅಬ್ದುಲ್ಲ, ಮೊಂಟಗೋಳಿ ಕೆ.ಎಂ. ಅಬೂಬಕ್ಕರ್ ಸಿದ್ದಿಕ್, ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್‌ ಪ್ರವರ್ತಕ ಜೆರ‌್ರಿ ವಿನ್ಸಂಟ್ ಡಯಾಸ್, ಆತ್ರಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಹರೀಶ್ ಹೆಗ್ಡೆ, ನ್ಯೂ ಇಂಡಿಯ ಫರ್ನಿಚರ್ ಮಾಲ್‌ನ ಮಹಮ್ಮದ್ ಸಲೀಂ, ಮಹಮ್ಮದ್ ಇಂದ್ರಾಳಿ, ಮಹಾಬಲ ಕುಂದರ್, ಬುಡಾನ್ ಭಾಷಾ ಮತ್ತಿತರರು ಉಪಸ್ಥಿತರಿದ್ದರು. 

ಅನ್ಸಾರುಲ್ ಮುಸಾಕಿನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಕೆ. ಅಬೂಬಕ್ಕರ್ ಸ್ವಾಗತಿಸಿದರು. ಅನಂತರಾಮ ಭಟ್ ಮತ್ತು ಇಸ್ಮಾಯಿಲ್ ಆತ್ರಾಡಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com