ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್ ಶೀಘ್ರ ಆರಂಭ

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್‌ಗಳಿರುವ ಹಿರಿಯ ನಾಗರಿಕರ ವಾರ್ಡ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆ ಭಾಗ್ಯ ಕಾಣಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದರು. 

ಉಡುಪಿ ಅಜ್ಜರಕಾಡಿನ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. 

ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ವಾರ್ಡ್ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿ ಸೇವೆಗೆ ಅಗತ್ಯವಿರುವ ವೈದ್ಯಾಧಿಕಾರಿಗಳು, ಸಿಬ್ಬಂದಿ ನೇಮಕಾತಿ ನಡೆಯಬೇಕಾಗಿದೆ. ಈ ಚುನಾವಣೆ ಸಮಯ ಕಳೆದು ಜೂನ್ ಅಂತ್ಯದೊಳಗೆ ಸುಸಜ್ಜಿತ ಹಿರಿಯ ನಾಗರಿಕರ ವಾರ್ಡ್ ಉದ್ಘಾಟನೆಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ಜಿಲ್ಲಾಸ್ಪತೆ ಹಾಗೂ ಪ್ರತಿ ತಾಲೂಕಿನಲ್ಲಿ ಜನರಿಕ್ ಮೆಡಿಸಿನ್ ಕೌಂಟರ್ ಆರಂಭಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗಿದೆ. ಈ ಬಗ್ಗೆ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಗಳಲ್ಲಿ ಈ ಕೌಂಟರ್ ಆರಂಭಿಸಲು ಸ್ಥಳಾವಕಾಶವಿದೆಯೇ ಎಂಬುದರ ಬಗ್ಗೆ ಸರಕಾರ ಸುತ್ತೋಲೆ ಕಳುಹಿಸಿದೆ. ಈ ಕೌಂಟರ್ ತೆರೆದಾಗ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಂದಿಗೆ ಜೀವರಕ್ಷಕ ಔಷಧಿಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಅವರು ತಿಳಿಸಿದರು. 

ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 5 ಎನ್‌ಜಿಓಗಳ ಸಹಕಾರದೊಂದಿಗೆ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ಕಣ್ಣಿನ ಕ್ಯಾಟರ‌್ಯಾಕ್ಟ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಇದೀಗ ಸುಮಾರು 600ಓದುವ ಗ್ಲಾಸ್ ಖರೀದಿಸಲು ಇಲಾಖೆ ಮುಂದಾಗಿದೆ ಎಂದ ಅವರು ಆರೋಗ್ಯರಕ್ಷಣೆಗೆ ಸಂಬಂಧಪಟ್ಟಂತೆ ಸರಕಾರದ ಅನೇಕ ಯೋಜನೆಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ಒದಗಿಸಿದರು. 

ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಎ.ಪಿ. ಕೊಡಂಚ ಸ್ವಾಗತಿಸಿದರು. ಉಪಾಧ್ಯಕ್ಷ ಸಿ.ಎಸ್. ರಾವ್ ಪ್ರಾಸ್ತಾವಿಕ ಮಾತನಾಡಿದರು. ಜಂಟಿ ಕಾರ್ಯದರ್ಶಿ ಬಿ.ಆರ್. ಕುಮಾರ್ ವಂದಿಸಿದರು. ಎಚ್. ವಿಶ್ವನಾಥ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com