ಬಿರುಬೇಸಿಗೆಯಲ್ಲಿ ತುಂಬಿ ಹರಿಯುತ್ತಿರುವ ಬಾವಿ

ಉಡುಪಿ: ಮನೆಯಿಂದ ಹೊರಗೆ ಕಾಲಿಡದಷ್ಟು ಸುಡುವ ಬಿರುಬೇಸಗೆಯಲ್ಲೂ ಉಡುಪಿಯಲ್ಲೊಂದು ಜಲವಿಸ್ಮಯ. ಬಾವಿಗಳ ನೀರು ಉಕ್ಕೇರುತ್ತಿದೆ. ಪಕ್ಕದ ತೋಡುಗಳಲ್ಲಿ ನೀರು ಹರಿಯುತ್ತಿದೆ. 

ಮಣಿಪಾಲ ಪಕ್ಕದ ಪರ್ಕಳ ದೇವಿ ನಗರದಲ್ಲಿ ಈ ಜಲವಿಸ್ಮಯ ಕಳೆದ ಒಂದು ವಾರದಿಂದ ನಡೆಯುತ್ತಿದೆ. ಮೊದಮೊದಲು ಗಮನಿಸದ ಜನ ಬಾವಿಯಲ್ಲಿ ನೀರು ಜಾಸ್ತಿಯಾದಾಗ ಖುಷಿ ಪಟ್ಟರು. ಆದರೆ ಈಗ ನೀರಿನ ಒರತೆ ಜಾಸ್ತಿಯಾಗಿ ಪಕ್ಕದ ತೋಡುಗಳಲ್ಲಿಯೂ ಹರಿಯತೊಡಗಿದಾಗ ಅಚ್ಚರಿಗೊಂಡಿದ್ದಾರೆ. 

ಉಡುಪಿ ತಾಲೂಕಿನ ಇತರ ಕಡೆಗಳಲ್ಲಿ ನೀರಿನ ಕೊರತೆ ತೀವ್ರವಾಗಿ ಹಾಹಾಕಾರ ಉಂಟಾಗಿದ್ದರೆ, ಇಲ್ಲಿ ಅದಕ್ಕೆ ವ್ಯತಿರಿಕ್ತವಾದ ವಾತಾವರಣ ಉಂಟಾಗಿದೆ. 

ದೇವಿಬೆಟ್ಟು ಶಕ್ತಿ ಬಾಯಿ ಅವರ ಮನೆಯ ಬಾವಿಯಲ್ಲಿ ಏಪ್ರಿಲ್‌ನಲ್ಲಿ ಮೂರಡಿ ನೀರಿಗಿಂತ ಜಾಸ್ತಿ ಇರುತ್ತಿರಲಿಲ್ಲ. ಒಂದು ವಾರದ ಹಿಂದೆ ನೀರು ಸ್ವಲ್ಪ ಜಾಸ್ತಿಯಾಗಿದ್ದು ಕಂಡು ಬಂತು. ಎಲ್ಲೋ ನೀರಿನ ಪೈಪ್ ಒಡೆದು ಅದರ ನೀರು ಇಲ್ಲಿಗೆ ಎಳೆದಿರಬಹುದು ಎಂದು ಸುಮ್ಮನಾಗಿದ್ದರು. ಮೂರು ದಿನಗಳ ಹಿಂದೆ ಮಳೆಗಾಲದಂತೆ ಬಾವಿ ತುಂಬಿತ್ತು. ಈ ಬಾವಿಯಲ್ಲಿ ಈಗ ಏಪ್ರಿಲ್‌ನ ಸಾಮಾನ್ಯ ಮಟ್ಟಕ್ಕಿಂತ 10 ಅಡಿ ಹೆಚ್ಚು ನೀರಿದೆ. ಮಂಗಳವಾರ ಪಕ್ಕದ ತೋಡಿನಲ್ಲು ನೀರು ಕಾಣಿಸಿಕೊಂಡಿದ್ದು, ಬುಧವಾರ ಮಕ್ಕಳು ತೋಡಲ್ಲಿ ನೀರಾಟ ಆಡುವಷ್ಟು, ದೊಡ್ಡವರು ಸ್ನಾನ ಮಾಡುವಷ್ಟು ತಿಳಿ ನೀರು ಹರಿಯುತ್ತಿದೆ. 

ಹೇಮಂತ್ ಶೇರಿಗಾರರ ಮನೆ ದೇವಿನಗರ ಎತ್ತರ ಪ್ರದೇಶದಲ್ಲಿದೆ. ಅಲ್ಲಿ ಬಾವಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಬಾವಿಯ ಮಣ್ಣು ತೆಗೆದು, ಸುತ್ತ ಕಲ್ಲು ಕಟ್ಟಲು ನಿರ್ಧರಿಸಿದ್ದಾರೆ. ಅದರಂತೆ ಒಂದು ವಾರದಿಂದ ಕೆಲಸ ಆರಂಭಿಸಿದ್ದಾರೆ. ಆದರೆ ಮೂರು ದಿನಗಳಿಂದ ನೀರು ಒಮ್ಮೆಲೆ ಜಾಸ್ತಿಯಾಗತೊಡಗಿದ್ದರಿಂದ ಕಲ್ಲು ಕಟ್ಟುವ ಕೆಲಸವನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾಯಿತು. 

ಕೆಳಪರ್ಕಳದ ಮುಕುಂದ ನಾಯ್ಕ್, ಅಪ್ಪು ನಾಯ್ಕ, ಅಣ್ಣಯ್ಯ ನಾಯ್ಕ, ಪಾರ್ವತಿ ಮತ್ತಿತರ ಮನೆಗಳ ಬಾವಿಯಲ್ಲೂ ಇದೇ ಅಚ್ಚರಿ ಉಂಟಾಗಿದೆ. ನೀರಿನ ಹೊಸ ಸೆಲೆೆ ಕಂಡು ತಮ್ಮ ಸಂಬಂಧಿಕರಿಗೆ, ಪರಿಚಿತರಿಗೆ ದೇವಿನಗರ ಸುತ್ತಮುತ್ತಲಿನವರು ತಿಳಿಸುತ್ತಿದ್ದಾರೆ. ನಾನಾ ಊರಿಂದ ಜನ ಬಂದು ಈ ವಿಸ್ಮಯವನ್ನು ಕಣ್ಣಾರೆ ಕಂಡು ಹೋಗುತ್ತಿದ್ದಾರೆ. ಪರ್ಕಳದ ಮತ್ತೊಂದು ದಿಕ್ಕಾದ ಈಶ್ವರ ನಗರದ ಕೆಲವು ಬಾವಿಗಳಲ್ಲೂ ಇದೇ ರೀತಿ ಒಂದು ವಾರ ಹಿಂದೆಯೇ ನೀರು ಏರಿಕೆ ಕಂಡು ಬಂದಿದೆ. 

* ನಂಗೆ 60 ವರ್ಷ ಆಯ್ತು. ಏಪ್ರಿಲ್ ಮೇ ಯಲ್ಲಿ ಕುಡಿಯಲು ಕಷ್ಟದಲ್ಲಿ ನೀರು ಸಿಗುತ್ತಿದ್ದುದು ಬಿಟ್ಟರೆ ಈ ರೀತಿ ಬಾವಿಗಳು ತುಂಬಿರುವುದನ್ನು ಕಂಡೇ ಇಲ್ಲ. ಈ ಕಲಿಗಾಲದಲ್ಲಿ ಇನ್ನೇನೆಲ್ಲ ಆಗಲಿದೆಯೋ ಏನೋ. ಇಲ್ಲದಿದ್ದರೆ ಈ ಬೇಸಿಗೆಯಲ್ಲಿ ನೀರಿನ ಉಜೆ ( ಒರತೆ, ಒಸರು) ಕಾಣಿಸುತ್ತಿತ್ತೇ? - ಲಿಂಗಪ್ಪ ನಾಯ್ಕ ....

 * ಭೂಮಿಯಲ್ಲಿ ಸ್ತರಭಂಗ ಉಂಟಾದಾಗ ಈ ರೀತಿ ಆಗುವುದಿದೆ. ಅಂತರ್ಜಲದ ಪಥ ಬದಲಾಗಿ ಎಲ್ಲೋ ನೀರಿನ ಒರತೆ ಜಾಸ್ತಿಯಾಗುತ್ತದೆ. ಇನ್ನೆಲ್ಲೋ ನೀರು ಬತ್ತುತ್ತದೆ. ಇದಲ್ಲದೆ ಭೂಕಂಪನದ ಮುನ್ಸೂಚನೆಯಾಗಿಯೂ ಈ ರೀತಿ ನೀರು ಹೆಚ್ಚಾಗುವುದು ಅಥವಾ ನೀರು ಇಲ್ಲದಾಗುವುದು ನಡೆಯುತ್ತದೆ. ಆದರೆ ದೇವಿನಗರದಲ್ಲಿ ಆಗಿರುವುದು ಸ್ತರಭಂಗ ಎಂಬುದು ಮೇಲ್ನೊಟಕ್ಕೆ ಕಾಣಿಸುತ್ತಿದೆ. - ಉದಯಶಂಕರ ಭಟ್, ಭೂಗರ್ಭಶಾಸ್ತ್ರಜ್ಞ, ಮಣಿಪಾಲ

- ಬಾಲಕೃಷ್ಣ ಶಿಬಾರ್ಲ ಉಡುಪಿ, ವಿಕ ಕೃಪೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com