ಮುಸ್ಲಿಂ ಮುಖಂಡರ ಸಭೆ

ಉಡುಪಿ: ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಮುಸ್ಲಿಂ ಸಮುದಾಯದ ನಿಲುವು ಹಾಗೂ ಮುಸ್ಲಿಂ ಮತದಾರರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಜಿಲ್ಲೆಯ ನಾನಾ ಮುಸ್ಲಿಂ ಸಂಘಟನೆಗಳ ಮುಖ್ಯಸ್ಥರ ಸಭೆ ಮಣಿಪಾಲ ಮಸೀದಿಯಲ್ಲಿ ನಡೆಯಿತು. 

ಕಳೆದ ಎಲ್ಲ ಚುನಾವಣೆಗಳಲ್ಲಿ ಜಿಲ್ಲೆಯ ಬಹುತೇಕ ಮುಸ್ಲಿಂ ಮತದಾರರ ಮತ ಪಡೆದ ಜನಪ್ರತಿನಿಧಿಗಳು ಹಾಗೂ ಸರಕಾರಗಳು ಜಿಲ್ಲೆಯ ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಸರಕಾರದ ಸೌಲಭ್ಯ ದೊರಕಿಸುವಲ್ಲಿ, ಅಧಿಕಾರಿಗಳು ಮತ್ತು ಇಲಾಖೆಯಿಂದ ಆಗುತ್ತಿರುವ ತೊಂದರೆ ಹಾಗೂ ಸಂವಿಧಾನ ಬದ್ಧ ಅಧಿಕಾರವನ್ನು ಚಲಾಯಿಸಲು ಅವಕಾಶ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ 165 ಗ್ರಾಪಂಗಳು, ಒಂದು ಜಿಪಂ, ಮೂರು ತಾಪಂ, ಒಂದು ನಗರಸಭೆ, ಎರಡು ಪುರಸಭೆಗಳು, ಒಂದು ಪಟ್ಟಣ ಪಂಚಾಯಿತಿ, ಐದು ವಿಧಾನಸಭೆ ಕ್ಷೇತ್ರ ಮತ್ತು ಲೋಕಸಭೆ ಹಾಗೂ ವಿಧಾನ ಪರಿಷತ್ ಕ್ಷೇತ್ರಗಳಿದ್ದರೂ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಮುಂದಿನ ದಿನಗಳಲ್ಲಿ ಮುಸ್ಲಿಮರ ಮತ ಪಡೆದ ಸರಕಾರ ನಡೆಸುವ ರಾಜಕೀಯ ಪಕ್ಷಗಳು ಮುಸ್ಲಿಮರ ರಾಜಕೀಯ ತಾರತಮ್ಯ ಸರಿಪಡಿಸಬೇಕು. ಸರಕಾರದ ವಿದ್ಯಾರ್ಥಿ ವೇತನದ ತಾರತಮ್ಯ ನಿವಾರಿಸಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಹಂಚಿಕೆಯಲ್ಲಿ ಇರುವ ಒಳ ಮೀಸಲಾತಿ ರದ್ದುಪಡಿಸಬೇಕು. ಜಿಲ್ಲೆಯ ವಕ್ಫ್ ಸಂಸ್ಥೆಗಳ ಅಭಿವದ್ಧಿಗೆ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. 

ಈ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮುಸ್ಲಿಂ ಮತದಾರರು ಬದಲಿ ರಾಜಕೀಯ ಮಾರ್ಗವನ್ನು ಅನುಸರಿಸಬೇಕಾದೀತು ಎಂದು ಸಭೆಯಲ್ಲಿ ಮುಸ್ಲಿಂ ಮುಖಂಡರು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು. 

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಎಂ. ಪಿ. ಮೊಯ್ದಿನಬ್ಬ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಸ್ಲಿಂ ಮುತ್ತೆಹಿದಾ ಮಹಝ್‌ನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಯಾಹ್ಯಾ ನಕ್ವಾ, ಎ.ಕೆ. ಸುಲೈಮಾನ್, ಸಂಯುಕ್ತ ಜಮಾತ್ ಅಧ್ಯಕ್ಷ ಅಬ್ದುಲ್ಲ ನಾವುಂದ ಉಪಸ್ಥಿತರಿದ್ದರು. 

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲ ಪರ್ಕಳ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ ವಿಷಯ ಮಂಡಿಸಿದರು. ಹುಸೇನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com