ಶುಭ ಶುಕ್ರವಾರ ಆಚರಣೆ

ಉಡುಪಿ : ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಎ. 18ರಂದು ಕ್ರೈಸ್ತರು ಶುಭ ಶುಕ್ರವಾರವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿದರು.

ಚರ್ಚ್‌ ಮತ್ತು ಚರ್ಚ್‌ ಆವರಣದಲ್ಲಿ ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ತೊಡಗಿ ಅವರು ಶಿಲುಬೆಯಲ್ಲಿ ಮರಣಿಸಿ ಅವರ ಶರೀರವನ್ನು ಸಮಾಧಿ ಮಾಡುವವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ 'ಶಿಲುಬೆಯ ಹಾದಿ' (ವೇ ಆಫ್‌ ಕ್ರಾಸ್‌) ಆಚರಣೆಯ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ - ಸಂಕಷ್ಟಗಳ ಸ್ಮರಣೆ ಮಾಡಿದರು. ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಶುಭ ಶುಕ್ರವಾರದಂದು ಚರ್ಚ್‌ಗಳಲ್ಲಿ ಘಂಟೆಗಳ ನಿನಾದವಿಲ್ಲ; ಬಲಿ ಪೂಜೆಯೂ ಇಲ್ಲ. ಮೌನ ವಾತಾವರಣದಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು. ಧ್ಯಾನ, ಉಪವಾಸದಲ್ಲಿ ದಿನ ಕಳೆದರು.

  ಉಡುಪಿ ಕೆಥೊಲಿಕ್‌ ಧರ್ಮಪ್ರಾಂತದ ಬಿಷಪ್‌ ರೆ|ಫಾ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರು ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
       ವಿಭೂತಿ ಬುಧವಾರದೊಂದಿಗೆ ಆರಂಭಗೊಂಡ 40 ದಿನಗಳ ವ್ರತಾಚರಣೆಯ ಅವಧಿಯ ಕೊನೆಯ 7 ದಿನಗಳನ್ನು ಪವಿತ್ರ ಸಪ್ತಾಹವನ್ನಾಗಿ ಕ್ರೈಸ್ತ ಸಭೆ ಆಚರಿಸುತ್ತಿದೆ. ಗರಿಗಳ ರವಿವಾರದೊಂದಿಗೆ ಪ್ರಾರಂಭಗೊಳ್ಳುವ ಈ ಸಪ್ತಾಹ ಈಸ್ಟರ್‌ ರವಿವಾರದಂದು ಮುಕ್ತಾಯಗೊಳ್ಳುತ್ತದೆ. ಈ ಸಪ್ತಾಹದ ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನವನ್ನು ಆಚರಿಸಲಾಗುತ್ತದೆ. ಅಂದು ಧರ್ಮಾಧ್ಯಕ್ಷರಿಂದ/ ಧರ್ಮಗುರುಗಳಿಂದ 12 ಮಂದಿ ಕ್ರೈಸ್ತರ ಪಾದ ತೊಳೆಯುವ ಕಾರ್ಯಕ್ರಮದ ಜತೆಗೆ ಪರಮ ಪ್ರಸಾದದ ಸಂಸ್ಕಾರ ಮತ್ತು ಧರ್ಮಗುರುಗಳ ದೀಕ್ಷಾ ಸಂಸ್ಕಾರದ ಪ್ರತಿಷ್ಠಾಪನಾ ದಿನಾಚರಣೆ ಕೂಡಾ ನಡೆಯುತ್ತದೆ.
    ಶುಕ್ರವಾರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣೆ. ಜನರ ಪಾಪಗಳಿಗಾಗಿ ಮತ್ತು ಲೋಕಕಲ್ಯಾಣಕ್ಕಾಗಿ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ದಿನವನ್ನು ಶುಭ ಶುಕ್ರವಾರವನ್ನಾಗಿ ಆಚರಿಸಲಾಗುತ್ತದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com