ಉಳಿದವರು ಕಂಡಂತೆ: ಒಳ್ಳೆ ಸಿನೆಮಾ, ಬಜೆಟ್ ಮಾತ್ರ ಜಾಸ್ತಿಯಾಯ್ತು!

ಬೆಂಗಳೂರು: 'ಆ ಚಿತ್ರ ನಿರ್ಮಿಸಿದ ಬಗ್ಗೆ ನನಗೆ ಖುಷಿ ಇದೆ. ಅದ್ಭುತ ಮೇಕಿಂಗ್‌ನ ಚಿತ್ರವದು. ಆದರೆ, ನಿಧಾನ ನಿರೂಪಣೆಯಿಂದ ಎರಡು ಗಂಟೆಯ ಮೇಲೆ ಬೇಡ ಅಂದಿದ್ದೆ. ಮನಸ್ಥಾಪವಲ್ಲದಿದ್ದರೂ ಚರ್ಚೆ ಆಗಿದ್ದು ಹೌದು. ಕೊನೆಗೆ ಎರಡು ಗಂಟೆ 56 ನಿಮಿಷದ ಸಿನಿಮಾವನ್ನ, ಎರಡೂವರೆ ಗಂಟೆಗೆ ತಂದು ಕೂರಿಸಿದರು. ಅದೂ ಸಹ ಹೆವಿ ಆಯ್ತು. ಒಂದು ವರ್ಗದ ಜನರಿಗೆ ಚಿತ್ರ ಖುಷಿಯಾಯ್ತು. ಆದರೆ, ಮಿಕ್ಕಂತೆ ಹಲವರಿಗೆ ಮನರಂಜನೆ ಸಿಗಲಿಲ್ಲ. ರಕ್ಷಿತ್‌ ಸಹ ತಮ್ಮ ಚಿತ್ರ ಒಂದು ವರ್ಗದ ಜನರಿಗೆ ಅಂತ ಫಿಕ್ಸ್‌ ಆಗಿದ್ದರು. ಅವರು ಹೇಳಿದ್ದ ಬಜೆಟ್‌ನಲ್ಲೇ ಚಿತ್ರ ಆಗಿದ್ದರೆ, ಸಮಸ್ಯೆ ಇರುತ್ತಿರಲಿಲ್ಲ. ಓವರ್‌ ಬಜೆಟ್‌ ಆಯ್ತು' ಎನ್ನುತ್ತಾರೆ ಸುನಿ. 

ಇಷ್ಟಕ್ಕೂ ಚಿತ್ರಕ್ಕೆ ಖರ್ಚಾಗಿದ್ದೆಷ್ಟು, ನಷ್ಟವಾಗಿದ್ದೆಷ್ಟು ಎಂದರೆ ಲೆಕ್ಕ ಕೊಡುತ್ತಾರೆ ಸುನಿ. ಎರಡೂವರೆ ಕೋಟಿ ಬಜೆಟ್‌ನಲ್ಲಿ ಶುರುವಾದ ಚಿತ್ರ ಮುಗಿದಾಗ 3.10 ಕೋಟಿ ಆಯಿತಂತೆ. ಪ್ರಿಂಟು, ಪಬ್ಲಿಸಿಟಿ ಸೇರಿ 3.84 ಕೋಟಿಗಿದೆಯಂತೆ. 'ಈ ಪೈಕಿ ಒಂದು ಕೋಟಿ ಮಾತ್ರ ವಾಪಸ್ಸು ಬಂದಿದೆ. ಇನ್ನೂ ಟಿವಿ ರೈಟ್ಸ್‌ ಆಗಿಲ್ಲ. ಟಿವಿ ರೈಟ್ಸ್‌ ಆದರೂ ನಾವು ಹಾಕಿದ ದುಡ್ಡು ವಾಪಸ್ಸು ಬರಲ್ಲ. ನಷ್ಟ ಆಗೋದಂತೂ ಗ್ಯಾರಂಟಿ. ಸಂಗೀತ, ರೀ-ರೆಕಾರ್ಡಿಂಗ್‌, ಸಿಂಕ್‌ ಸೌಂಡ್‌ ಎಂದು 60 ಲಕ್ಷ ಖರ್ಚಾಗಿದೆ. ನಿಜ ಹೇಳಬೇಕೆಂದರೆ, ನನ್ನ 'ಸಿಂಪಲ್ಲಾಗೊಂದ್‌ ಲವ್‌ಸ್ಟೋರಿ' ಚಿತ್ರದ ಫ‌ಸ್ಟ್‌ ಕಾಪಿ 62 ಲಕ್ಷ ಆಗಿತ್ತು. ಈಗಲೂ ಹೇಳುತ್ತೀನಿ. ಚಿತ್ರದ ಬಗ್ಗೆ ನನಗೆ ಸಂತೋಷ ಇದೆ. ಮೇಕಿಂಗ್‌ ಬಗ್ಗೆ ಖುಷಿ ಇದೆ. ಟಾಪ್‌ 10 ನಿರ್ದೇಶಕರು ಎಂದು ಪಟ್ಟಿ ಮಾಡಿ ಎಂದು ಯಾರಾದರೂ ಹೇಳಿದರೆ, ಅದರಲ್ಲಿ ರಕ್ಷಿತ್‌ ಶೆಟ್ಟಿ ಖಂಡಿತಾ ಸ್ಥಾನ ಪಡೆಯುತ್ತಾರೆ' ಎನ್ನುತ್ತಾರೆ ಸುನಿ. 
ಇಷ್ಟಕ್ಕೂ ಸುನಿಗೆ ಚಿತ್ರಕ್ಕೆ ಇಂಥದ್ದೊಂದು ಪ್ರತಿಕ್ರಿಯೆ ಸಿಗಬಹುದು ಎಂದು ಮುಂಚೆಯೇ ಗೊತ್ತಿತ್ತಂತೆ. 'ನಿಜ ಹೇಳ್ತೀನಿ. ನಮ್ಮಲ್ಲಿ ಗಲಾಟೆ ಆಗಲಿಲ್ಲ. ಆದರೆ, ಚಿತ್ರವನ್ನು ಜನ ಹೇಗೆ ಸ್ವೀಕರಿಸಬಹುದು ಎಂದು ಗೊತ್ತಿತ್ತು. ಇನ್ನಿಬ್ಬರು ನಿರ್ಮಾಪಕರು ಚಿತ್ರ ಎರಡು ವಾರಗಳ ಮೇಲೆ ಓಡೋಲ್ಲ ಎಂದು ಹೇಳಿದ್ದರು. ನನಗೆ ಸಿನಿಮಾ ಇಷ್ಟ ಆಗಿತ್ತು. ಆದರೆ, ನಮ್ಮ ಇಷ್ಟವೇ ಅಲ್ಟಿಮೇಟ್‌ ಅಲ್ಲವಲ್ಲ. ಜನರಿಗೆ ಚಿತ್ರ ಇಷ್ಟವಾಗಬೇಕು. ನಾವು ಜನರಿಗೆ ಇಷ್ಟವಾಗುವಂಥ ಸಿನಿಮಾ ಮಾಡಬೇಕು. ಜನ ಮನರಂಜನೆಗೆ ಚಿತ್ರಮಂದಿರಕ್ಕೆ ಬರ್ತಾರೆ. ಜನಕ್ಕೆ ಮನರಂಜನೆ ಸಿಗಲಿಲ್ಲ ಎಂದರೆ ಇದು ಸಹಜ. ರಕ್ಷಿತ್‌ಗೆ ಈ ಚಿತ್ರವನ್ನು ಒಂದು ವರ್ಗದ ಜನರಿಗೆ ರೀಚ್‌ ಮಾಡಿಸಿದ ಖುಷಿ ಇದೆ. ಅವರು ಹೇಳಿದ ಬಜೆಟ್‌ನಲ್ಲಿ ಅದಾಗಿದ್ದರೆ ಎಲ್ಲರಿಗೂ ಸಂತೋಷವಾಗುತಿತ್ತು' ಎಂದು ಮಾತು ಮುಗಿಸುತ್ತಾರೆ ಸುನಿ. 

- ಉದಯವಾಣಿ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com