ಲೋಕಸಭಾ ಚುನಾವಣೆ: ಮತದಾನಕ್ಕೆ ವೋಟರ್ಸ್‌ ಸ್ಲಿಪ್ ಇದ್ದರೆ ಸಾಕು

ಉಡುಪಿ: ವೋಟರ್ಸ್‌ ಸ್ಲಿಪ್ (ಮತದಾರರ ಚೀಟಿ)ಕೈಯಲ್ಲಿದ್ದರೆ ಯಾವುದೇ ದಾಖಲೆಗಳಿಲ್ಲದೆಯೂ ಈ ಬಾರಿ ಮತ ಚಲಾಯಿಸಬಹುದು...ಕಳೆದ ಲೋಕಸಭೆ ಮರು ಚುನಾವಣೆಯಲ್ಲಿ ಭಾವಚಿತ್ರ ಸಹಿತ ವೋಟರ್ಸ್‌ ಸ್ಲಿಪ್ ವ್ಯವಸ್ಥೆ ಜಾರಿಯಲ್ಲಿದ್ದರೂ ಮಾಹಿತಿ ಕೊರತೆಯಿಂದಾಗಿ ಹಲವು ಮತಗಟ್ಟೆ ಅಧಿಕಾರಿಗಳು ದಾಖಲೆಗಳಿಲ್ಲದವರಿಗೆ ಮತದಾನಕ್ಕೆ ಅವಕಾಶ ನೀಡಿರಲಿಲ್ಲ. 

ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಸಹಿ ಹಾಕಿ ಪ್ರತಿ ಮನೆಗೆ ವಿತರಿಸುವ ವೋಟರ್ಸ್‌ ಸ್ಲಿಪ್ ಅಂತಿಮ, ಅಧಿಕೃತ, ಮತದಾರನ ಭಾವಚಿತ್ರವೂ ಅದರಲ್ಲಿದೆ. 

ವೋಟರ್ಸ್‌ ಸ್ಲಿಪ್, ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿ ಇಲ್ಲದವರು ಈ ಬಾರಿ ಪಡಿತರ ಚೀಟಿ (ರೇಷನ್ ಕಾರ್ಡ್), ಆಧಾರ್ ಕಾರ್ಡ್, ಪಾನ್ ಕಾರ್ಡ್, ಎನ್‌ಆರ್‌ಇಜಿ ಉದ್ಯೋಗ ಖಾತರಿ ಚೀಟಿ ಸಹಿತ 11ರಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಹಾಜರು ಪಡಿಸಬಹುದು. ಈ ಹಿಂದಿನ ಚುನಾವಣೆಗಳಲ್ಲಿ 21 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸುವ ಅವಕಾಶವಿತ್ತು. 

ಟೆಂಡರ್ ವೋಟ್: ನೈಜ ಮತದಾರ ಮತಗಟ್ಟೆಗೆ ಬರುವ ಮೊದಲೇ ಯಾರೋ ಓಟು ಹಾಕಿದ್ದರೆ, ದಾಖಲೆಗಳನ್ನು ಹಾಜರುಪಡಿಸಿದರೆ ಚುನಾವಣಾ ಆಯೋಗದ ಅನುಮತಿ ಪಡೆದು ಟೆಂಡರ್ ವೋಟ್ ದಾಖಲಿಸಿಕೊಳ್ಳುವ ಅವಕಾಶವಿದೆ. ಸಮಬಲದ ಸ್ಥಿತಿಯ ನಿರ್ಣಾಯಕ ಹಂತದಲ್ಲಿ ಟೆಂಡರ್ ವೋಟನ್ನು ಪರಿಗಣಿಸಲಾಗುವುದು. 

ಆಕಾಶವಾಣಿಯಲ್ಲಿ ಜಿಲ್ಲಾಧಿಕಾರಿ ಹಾಡು: ಗುಡಿ, ಚರ್ಚು, ಮಸ್ಜಿದಿಗಳ ಬಿಟ್ಟು ಹೊರ ಬನ್ನಿ.... ಓ ಬನ್ನಿ ಸೋದರರೆ ಮನೆ ಬಿಟ್ಟು ಹೊರ ಬನ್ನಿ....ಓ ಮತದಾರರೇ ಮತಗಟ್ಟೆಗೆ ಮತ ಚಲಾಯಿಸ ಬನ್ನಿ...ಹೀಗೆ ಹಾಡೊಂದನ್ನು 

ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದು ಮೋಹನ್ ಮತದಾರರ ಜಾಗೃತಿಗಾಗಿ ಬುಧವಾರ ಬೆಳಗ್ಗೆ ಮಂಗಳೂರು ಆಕಾಶವಾಣಿಯ ಫೋನ್ ಇನ್‌ನಲ್ಲಿ ಹಾಡಿದರು. ನಾನಾ ಧರ್ಮದ ಪೂಜೆಗಿಂತ ರಾಷ್ಟ್ರದ ಧರ್ಮದ ಪೂಜೆ ಮಿಗಿಲು. ಹೀಗಾಗಿ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು. ಮತದಾರರ ಪ್ರಶ್ನೆಗಳಿಗೂ ಸಮರ್ಪಕ ಉತ್ತರವನ್ನು ಜಿಲ್ಲಾಧಿಕಾರಿ ನೀಡಿದರು. 

* ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಶೇ. 30 ಮತದಾರರಿಗೆ ವೋಟರ್ಸ್‌ ಸ್ಲಿಪ್‌ಗಳನ್ನು ಬಿಎಲ್‌ಒಗಳ ಮೂಲಕ ವಿತರಿಸಲಾಗಿದೆ. ಯಾವುದೇ ದಾಖಲೆ ಇಲ್ಲದಿದ್ದರೂ ವೋಟರ್ಸ್‌ ಸ್ಲಿಪ್ ಇದ್ದವರಿಗೆ ಮತದಾನಕ್ಕೆ ಅವಕಾಶ ನೀಡುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. -ಡಾ. ಮುದ್ದು ಮೋಹನ್, ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ

- ಎಸ್.ಜಿ. ಕುರ್ಯ, ವಿಜಯ ಕರ್ನಾಟಕ ಕೃಪೆ 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com